ಗುರುವಿನೊಲುಮೆಯಲಿ
( ಬದುಕಿನ ಸತ್ಯ ಘಟನೆ ಆಧರಿಸಿ ಭಾಮಿನಿ ಷಟ್ಪದಿಯಲ್ಲಿ…
ಯಮುನಾ. ಕಂಬಾರ
ಚಿಕ್ಕ ಹಳ್ಳಿಯಲೊಂದು ಹುಡುಗಿಯು
ಮಿಕ್ಕಿ ತಪವನು ಮಾಡಿ ದಿನದಲಿ
ದಿಕ್ಕು ದಿಕ್ಕಿಗೆ ಗುರುವ ಹುಡುಕುತ ಹೊತ್ತು ಕಳೆಯುತಲಿ
ಸಿಕ್ಕಿದನ್ನವು ಪರಮ ಪುಣ್ಯವು
ಹೊಕ್ಕು ಹುಡುಕದೆ ಮನೆಯ ಗುಟ್ಟನು
ಚೊಕ್ಕ ಮನದಲಿ ಬೆವರ ಕರ್ಮವ
ಗೈಯುತಾಹುಡುಗೀ
ಹಗಲು ಕಳೆದವು ರಾತ್ರಿ ಬಂದವು
ಬಗರಿ ತಿರುಗುವ ತೆರದಿ ಭುವಿಯಲಿ
ಪೊಗರಿನಿಂದಲಿ ಬೆಳೆದು ನಿಂತಳು ಮಿರುಗು ಜವ್ವನದೀ
ಮೊಗದ ತೇಜವು ಕುಕ್ಕಿ ಕುಕ್ಕಿತು
ತೊಗಲ ಬಣ್ಣವು ಸಹನೆ ಕೆದಕಿತು
ಹಗುರ ಮನಸಿನ “ಕಣ್ಣಿ ಬಿಚ್ಚಿತು” ರಕ್ತ ಕುದಿಯುತಲೀ
ಅಕ್ಕನೆಂಬುವ ರಕ್ತ ಸಂಕಟ
ಬಿಕ್ಕಿ ಬಿಕ್ಕುತ ಕಿಚ್ಚು ರೋಧನ
ಹಕ್ಕಿನಿಂದಲೆ ತಾಯಿ ಸಂಗಡ ಸಂಚು ಗೈಯುತಲೀ
ಮಕ್ಕಳೆಂಬುವ ಮಮತೆ ಕಿಚ್ಚಲಿ
ಲೆಕ್ಕ ನ್ಯಾಯವ ಹಿಡಿದ ತಕ್ಕಡಿ
ಚಿಕ್ಕ ಕಡ್ಡಿಯ ಕಾಟ ತಪ್ಪಿಸಿ ಬಲೆಯ ಬೀಸಿದಳೂ
ಊರು ಕೇರಿಯ ತಿರುಗಿ ತಿರುಗುತ
ಮೋರೆ ಬಣ್ಣದ ನಾಟ್ಯವಾಡುತ
ಘೋರ ಘಾತಕೆ ಗುನ್ನ ವಿಟ್ಟಳು ತಿರುಕಿ ತಲೆತಿರುಕೀ
ಚೋರ ಸರಪಳಿ ಕಟ್ಟಿ ನಡೆಯಿತು
ಜೋರ ವಿಷವನು ಹಾಕಿ ಪಾಯಸ
ಘೋರ ಮರೆವನು ಮಾಡಿ ” ಗದ್ದಲ ” ಗೆದ್ದು ಬೀಗಿದಳು.
ಹುಡುಗಿ ತೇಜವು ಕುಂದಿ ಕುಂದುತ
ಬಡುಗಿ ಬೆನ್ನನು ತಳೆದ ದೇಹವು
ನಡುಗೆ ಡೊಂಕವು ಜೋಲಿ ಹೊಡೆಯುತ ನರಕ ನೆರಳಿನಲೀ
ಗಡಿಗೆ ದೇಹವ ಕೊಟ್ಟ ಶಿವನನು
ಜಡಿಯ ಮಳೆಯಲಿ ತೋಯ್ವ ಮಣ್ತೆರ
ಹುಡುಗಿ ಜಪವನು ನೋಡಿ ಶಂಕರ ಜೀವ ಕಾಯ್ದಿಹನೂ
ಗುರುವೆ ಗುರುವನೆ ನನ್ನ ಶಶಿಧರ
ಗರವಿನಿಂದಲೆ ಮಡಗಿಕೊಳ್ಳುವೆ
ಗರವು ಹಿಡಿದಿಹ ಗ್ರಹದ ಕಾಳದಿ ನೀನೆ ಗತಿಯಿನ್ನೂ
ಗುರುವ ಗುರುತನು ನೋಡಲಾರದ
ಗುರಿಯ ಮುಟ್ಟಲು ತನ್ನ ದೇಹವ
ಗರಿಯ ಮಾಡುತ ಸತತ ಧ್ಯಾನದ ಸೇವೆ ನೀಡುತಲೀ
ಸೇವೆ ಮುಟ್ಟಿತು ಶಿವನ ಚರಣಕೆ
ಬೇವು ಕಹಿಯನು ಕಳಚಿ ಸಿಹಿಯನು
ದೇವಿ ಕೊಟ್ಟಳು ಪರಮ ಪದವಿಯ ಬಂತು ವರವೊಂದು
ದೇವ ದೇವನು ಹರ್ಷನಾದನು
ಜೀವ ಜೀವವು ಬೆರೆತು ಬೆಸೆಯಲು
ಜಾವ ಕಾಯುತ ಕುಳಿತ ತಿರುಕಿಯು ಮೂರ್ಚೆ ಹೊಂದುತಲೀ
ದುಡಿದು ಬದುಕದ ತಿರುಕಿ ಸಂತಸ
ಮಡಿದು ಹೋದರು ಬೆಸುಗೆ ಸಂಭ್ರಮ
ಮುಡಿಯಲಾಗದೆ ಹಗಲ ಕನಸನು ಹುಡುಕಿ ಹೊಸೆಯುತಲೀ
ತಡೆದು ಸಾಗದ ತುಂಬು ದಿನಗಳು
ತಡೆದು ತಡೆಯುತ ತಿರುಕಿ ಬಣ್ಣದ
ನಡೆಯು ನೆಲೆಯಿತು ವಿರಹ ಲೋಕದಿ ಕುದಿದು ಕರುಬುತಲೀ….
ಚಂದ ಬಾಳಲಿ ಬಂದು ನಿಂತಳು
ತಂಗಿ ಮಂಚವ ಹಂಚಿ ಕೊಂಡಳು
ಮಂದಿ ತರ್ಕಕೆ ಗರತಿ ನಾಟಕ ಹೇಳಿ ಸುಖಿಸುತಲೀ
ಅಂದ ಹಾಸುಗೆ ಚಿದ್ರ ಮಾಡುತ
ಬಂದ ಸಂಕಟ ಮಾಯ ದೀಪದಿ
ಕೊಂದು ಕೊಂದಳು ವಿಧಿಯ ವೇಷದಿ ರಾಕ್ಷಿ ಕತ್ತಲಲೀ
ಬಾನು ಬಾಗದೆ ಭೂಮಿ ಸೇರದೆ
ತಾನು ತನ್ನದು ಮರೆತು ಬೇಗನೆ
ಜೇನು ಸುರಿಯದೆ ರಾತ್ರಿ ಬೆಳಗದೆ ಮರಳು ಮಾಯದಲೀ
ಏನು ಕಾಣದು ಬಿಳಿಯ ಪರದೆಯು
ಗೇನು ಹಾಕುತ ದಿನವು ಕಳೆಯಲು
ಕಾಣದಾಯಿತು ರಾತ್ರಿ ಕಾಳಗ ಹುಡುಗಿ ದಿಗಿಲಿನಲೀ
ಅಕ್ಕ ನಡೆಸಿದ ಪಗಡೆ ಪಹರೆದಿ
ಸಿಕ್ಕು ಬಿದ್ದರು ಪ್ರೀತಿ ತಗ್ಗದ
ಬಿಕ್ಕಿ ಬಿಕ್ಕುತ ಗುರುವಿನರ್ಚನೆ ಮಾಡಿ
ಮಾಡುತಲೀ
ಅಕ್ಕ ಜಾಲವು ತೆರೆದು ತೋರಿತು
“ನಿಕ್ಕೆ” ಬೀಸಿದ ಗಾಳಿ ರಭಸಕೆ
ಸಿಕ್ಕಿಕೊಂಡಾ ” ಪ್ರೇಮ ಜಾಲವ ” ನೋಡಿ ವಿಶ್ಮಯದೀ…….!!