ಅಸಮಾನ ಸ್ವಾರ್ಥಿಗಳು

ಕವಿತೆ

ಅಸಮಾನ ಸ್ವಾರ್ಥಿಗಳು

ಹಬ್ಬ ಹರಿದಿನ ಗೈದ ಮನೆ ಹರಿದು ಬಿದ್ದಿದೆ
ಹರಿಹಂಚು ಪಾಲು-ಪಟ್ಟಿಗಾಗಿ |
ಹಡೆದವರು ಹರಿಸಿದ ಬೆವರು ರಕ್ತದ ಬಡ್ಡಿ
ಉಂಡುಣುವ ಕುಲಗೇಡಿ ಕರ್ಮಕ್ಕಾಗಿ ||

ಜನ್ಮದಾತರ ಆತ್ಮ ಉಮ್ಮಳಿಸಿ ತಳಮಳಿಸಿ
ಪರಮಾತ್ಮನಾವರಣ ಸುತ್ತು ಕನಸು |
ಕರುಳ ಕುಡಿಗಳ ಭಾಗ್ಯ ನೂರ್ಮಡಿಸಲರ್ಚಿಸಲು
ಪಿಂಡದಗುಳಿಗೆ ಅಲವರಿಸ ದಿವ್ಯ ಮನಸು ||

ಜಿಂಗು ಜಿರಿದವರ ಅಂಗಾಂಗ ಪುಡಿಪುಡಿ
ಅಡಿಗಡಿಗು ತಲೆಮಗನ ಲಾಲಿ ಮಿಡಿತ |
ಮಗಮೊಮ್ಮ ಮರಿಮಕ್ಕಳಾದಿ ಹಾದಿಗೆ ಬಿದ್ದ
ಕಲ್ಲು ಮುಳ್ಳು ಧೂಳು ತೆಗೆವ ತುಡಿತ ||

ಮಕ್ಕಳಿಂದಲೇ ಗತಿ ಸದ್ಗತಿಯೆಂದುಲಿದವರು
ಅಪಗತರು ಇದ್ದವರ ಪಾಲಿಗಿಲ್ಲಿ |
ಬಿಟ್ಟಿರರು ಉಸಿರನ್ನು ಕೊಟ್ಟಿಹರು ಬದುಕನ್ನು
ಅಪಸದರು ಅರ್ಥೈಸು ಕಾಲ ಚಕ್ರದಲಿ ||

ಮಾತೃತ್ವ ಪಿತೃತ್ವ ಭಾಗಿತ್ವದ ಸರಹದ್ದಿನಲಿ
ಜೀವ ಭಯವಿರದಂತೆ ಬದುಕಿಕೊಂಡವರು |
ಬೆಳೆದಂತೆ ಮೈಮರೆತರು ಅಸಮಾನ ಸ್ವಾರ್ಥದಲಿ
ಕರೊನಾ ಕರಿ ನೆರಳ ದಾಯಾದಿ ಮೆದುಳಿನವರು ||

************

ಮಾಸ್ಕೇರಿ ನಾಯಕ

4 thoughts on “ಅಸಮಾನ ಸ್ವಾರ್ಥಿಗಳು

  1. ನಿಜ ಸ್ವಾರ್ಥ ಬೆನ್ನು ಹತ್ತಿದಂತೆಲ್ಲ ಮಾನವೀಯ ಸಂಬಂಧಗಳು
    ನೆಲಕಚ್ಚುತಿವೆ…ಅಧ್ಬುತ ಕವಿತೆ

Leave a Reply

Back To Top