ಇವತ್ತು ಬಾಲಮುರಳಿಕೃಷ್ಣ ಹುಟ್ಟಿದ ದಿನ.
ಅವರಿಗಾಗಿ ಒಂದು ಕವಿತೆ
ಡಾ. ಮಂಗಲಪ್ಪಲ್ಲಿ ಬಾಲಮುರಳಿಕೃಷ್ಣರಿಗೆ
ಆರ್. ದಿಲೀಪ್ ಕುಮಾರ್
ಲಯದ ವಾರಿಧಿಯಲ್ಲೇ ಮಿಂದೆದ್ದು ಬಂದವರು
ಸ್ವರದ ನಾವೆಯಲಿ ಸ್ವರ್ಗದ ಹಾದಿಯನು ತಂದವರು
ಕೀರ್ತನೆಯ ಪದಪದವು ಪುಟವಿಟ್ಟ ಚಿನ್ನ
ವಾಗ್ಗೇಯಕಾರರಾದರಂತೂ
ಮಂತ್ರವೂ ಮುಗ್ದತೆಯ ತಳೆದಂತೆ
ಶರಣಾದಂತೆ ನಿಮ್ಮೆದುರು
ನಾವು ನಿಮ್ಮಮುಂದೆ
ಈ ಸುಡುಗಾಡು ಕಾಂಕ್ರೀಟು ಕಾಡಿನ ಮಧ್ಯೆ ಸ್ವರ್ಗ ಕಾಣಿಸಿದ ಕೋಗಿಲೆ
ಇಲ್ಲಿಯ ಪ್ರತೀ ನಡೆ ನುಡಿಗೂ ಲಯವಿದೆ
ಎಂದು ಲಯವಾಗದೆ ಉಳಿಸಿದವರು
ಕರುಣಾರಸದ ಕೊಳ್ಳಗಳ ಅಡಿಗಡಿಗೆ ಎದುರು ಕಂಡರಿಸಿದವರು
ಒಂದೊಂದು ಹೆಜ್ಜೆಗಳನೂ ಅಳೆಸಿ
ಕೂಡಿಸಿ ಮೇಳ ಮೇಳಕೆ ಹಾದಿ ಮಾಡಿ ಕೊಟ್ಟವರು
ಒಡಲ ಬೆಂಕಿ ನಮಗೇನೂ ಹೊಸದಲ್ಲ ದೊರೆ !
ಕಂಡವರ ಮೇಲೆ ಎರಚುವುದೂ ಹೊಸತಲ್ಲವೇ ಅಲ್ಲ !!
ಆ ಒಳಗಿನ ಬೆಂಕಿಯುಂಡೆಗಳ ಹೆಪ್ಪುಗಟ್ಟಿಸಿ ಬಿಟ್ಟಿರಿ
ಮೃದುವಚನದಲೆ ಮಾತನಾಡಿಸಿ ಹೆಗಲ ಮೇಲೆ ಕೈ ಇಟ್ಟು
ನನ್ನ ವಂಶವ ಪಾವನ ಮಾಡಿಬಿಟ್ಟಿರಿ
ನಾನು ನನ್ನಪ್ಪ ಅಮ್ಮ ತಮ್ಮ ಎಲ್ಲಾ ಮುಕ್ತಿ ಪಡೆದೇ ಬಿಟ್ಟೆವು ನಿಮ್ಮ ಸೋಕಿ
ಹುಟ್ಟಿದ್ದಕ್ಕೆ ಧನ್ಯತೆ ಕಾಣಿಸಿ ಬದುಕ ಬದುಕಿಸಿಬಿಟ್ಟಿರಿ
ಇಲ್ಲಿಂದ ಅಲ್ಲಿಗೆ ಕಡೆ ಹಾಯಿಸಿ
ಒಮ್ಮೆಲೇ ಮೆಟ್ಟಿಲುಗಳ ಹಾರಿಸಿಬಿಟ್ಟಿರಿ
ಕಾಲನ ಕತ್ತಲೆಗೇ ಬೆಳಕ ಹಾಯಿಸುವ ಮಿಂಚುಹುಳು
ಒಂದೊಮ್ಮೆ ಬೆಳಗಿ ಕತ್ತಲೆಗೂ ಕಣ್ಣು ಕೊಟ್ಟು
ಕಾಣುವ ಮೊದಲೇ ಮರೆಯಾದಂತೆ
ಅಮಾಯಕ ಮಾಯಾದೀಪ
ನುಡಿದೊಡನೆ ಮಿಂದಂತೆ ಮಹತಿಯಲಿ
ಸುಮುಖ ಸುಳಿದಂತೆ ನಮ್ಮ ಉಸಿರಲ್ಲೂ
ಕೆಳಗಡೆಗೆ ಮತ್ತೂ ಕೆಳಗೆ ಬಾಗುವುದ ಕಲಿಯಬೇಕು
ಏರಿದವರು ಲೀಲೆ ತೋರಿದವರು
ಇಳಿಯಲೇಬೇಕು
ನಿಮ್ಮಂತೆ ಸ-ರಾಗ ವಾಗಿ
ಈಗೀಗ ಇಲ್ಲೆಲ್ಲಾ ಕವಿಗಳಿಗೆ ಬಡಿವ ಸದ್ದು
ಮರೆಯಬೇಕು ನಿಮ್ಮೆದುರು
ಆಹಾ ! ಏನು ದನಿ ಏನು ಬನಿ
ಹಳ್ಳ ಕೊಳ್ಳಗಳಿಲ್ಲದ ಸರಸರಾಗ ಸರಾಗ ವೇಗಾವೇಗ
ಪಡೆದುಬಂದವರಿರಬೇಕು ದೊರೆ ನಿಮ್ಮಂತೆ
ನಾರದರ ತುಂಬರ ದನಿಯ ತರಂಗದಲಿ
ತುಂಬಿಸಲು ಇಲ್ಲಿನ ಹಳ್ಳ ಕೊಳ್ಳ ತಿಟ್ಟು ತೆವರು
ತಂತಿಗಳು ಮೀಟಿದಂತೆ ಎದೆಯ ಹರಿಗೋಲು ಸ್ವರದಲೇ
ಭವ ಭಾವ ಸಾಗರವ ತಾಕಿ ಮುಂದೆ ಮುಂದೆ ತಳ್ಳಿದಂತೆ
ಕಾಲ ನಿಂತಂತೆ ನಿಮ್ಮ ದನಿಯಲ್ಲಿ
ಇಲ್ಲಿನ ಕಷ್ಟ ಸುಖಕ್ಕೆ ಕವಡೆ ಕಿಮ್ಮತ್ತು ಕೊಡಲೊಲ್ಲೆ
ಕಲಿಯಬೇಕು ಕಲೆಯಲೇ ಬೇಕು
ಕಲಿಯುತ್ತಲೇ ಇರಬೇಕು ನಿಮ್ಮಂತೆ
ಬರೆಸಿಕೊಂಡು ಬಂದವರಿರಬೇಕು ನೀವು
ಗಳಿಸಿದರೂ ಹಂಚಿ ಉಂಡು ನೆನಪ ಉಳಿಸಿ ಹೋಗಬೇಕು ನಿಮ್ಮಂತೆ
ಹಿಂದಣ ಹೆಜ್ಜೆಯ ಅಳತೆಗೋಲುಗಳ ಅಳೆದಳೆದು
ನಡುವ ಹಾದಿಯ ಸುತ್ತಿ ಸುಳಿದು
ಗಾನ ವಾರಿಧಿಯಲಿ ಮಿಂದೀಜಿ
ನುಡಿಯುಟ್ಟು ಅಡಿಯಿಟ್ಟು ಮೆಚ್ಚಿದವರು
ಮೈಮರೆತು ಶರಣಾಗಬೇಕು ನಿಮ್ಮೆದುರು
ನೀವು ಕಾಲವಾದಾಗಿನಿಂದ
ಈ ಹಾಳು ಕಾಂಟ್ರೀಟ್ ಕಾಡಿನಲಿ
ಇನ್ನೂ ಅದೇ ಮಹತಿಯ ಗಾಳಿ ಬೀಸುತಿದೆ
ನಿಂತಂತಿದೆ ಸ್ವರ ನಿಮ್ಮದು ಅದರ ಪಕ್ಕದಲೇ ನಮ್ಮದೂ
ಕೊಂಡಿಯಾಗಿದ್ದಿರಿ ಇಲ್ಲಿಂದ ನೇರ ಅಲ್ಲಿಗೆ
ಕಾಲ ಕಳಚಿಬಿಟ್ಟಿತು ನೋಡಿ
ಸುಮ್ಮನೆ ತಿರುಗಿ ನೋಡದೆಯೇ ಮೈಕೊಡವಿ ನಡೆದುಬಿಟ್ಟಿರಿ
ಇದೋ ನಿಮಗೆ ಶಿರಸಾಷ್ಟಾಂಗ ನಮಸ್ಕಾರ
ಒಂದಷ್ಟು ನಮ್ಮ ದರಿದ್ರ ಕವಿಯನ್ನೂ ಶ್ರುತಿ ಮಾಡಿದ್ದಕ್ಕೆ
ಅಪಶ್ರುತಿಯ ಆಲಿಸದ ಹಾಗೆ ಜಾಗೃತವಾಗಿ ಇಟ್ಟಿರುವುದ್ದಕ್ಕೆ
ಅಕಾಣದಲ್ಲಿ ವಾರಿಧಿಯ ಪಕ್ಕದಲೆ ನಿಲಿಸಿ
ಅಲೆಅಲೆಗಳಲೂ ಆಲಾಪನೆಯ ನಿನಾದ ಕಿವಿಗೆ ಬೀಳಿಸಿದ್ದಕ್ಕೆ
ನನ್ನ ಕಣ್ಣ ಹನಿಹನಿಗಳಲೂ ಎದೆ ನೆಲವ ತೇವ ಮಾಡಿ
ನಾದ ಲಯದಲ್ಲಿ ಸ್ವರಗಳ ಬೀಜಬಿತ್ತಿ
ವೃಕ್ಷವಾಗಿಸಿ ಎಲೆ ಅರಳುವುದ ಕಾಣದೆ
ಹೂವಿಗೆ ಕಾಯದೆ
ಸುಮ್ಮನೆ ನಡೆದು ಹೊರಟು ಹೋಗಿದ್ದಕ್ಕೆ