ಗಜಲ್
ಅಶೋಕ ಬಾಬು ಟೇಕಲ್.
ವೇಷ ತೊಟ್ಟವರನೆಲ್ಲಾ ಸಂತ, ಫಕೀರರೆಂದು ನಂಬಬೇಕಿಲ್ಲ ಇಲ್ಲಿ
ಧ್ಯಾನದ ಸೋಗಿನವರನೆಲ್ಲಾ ಅಪ್ಪಟ ಭಕ್ತರೆಂದು ಅರಿಯಬೇಕಿಲ್ಲ ಇಲ್ಲಿ
ದಿನ ಬೆಳಗಾದರೆ ಸಾಕು ನೂರೆಂಟು ಪ್ರಲೋಭೆ ಬಿತ್ತಿ ಬಲಿಕೊಡುವರು
ಸಂಕಷ್ಟ ತೊಳೆವ ಕರುಣಾ ಜಲಧಿಗಳೆಂದು ಮೀಯಬೇಕಿಲ್ಲ ಇಲ್ಲಿ
ಮಾತಿನ ಮಾಂತ್ರಿಕ ಶಕ್ತಿಯಲ್ಲೇ ದ್ವೇಷದ ದಳ್ಳುರಿಗೆ ಧರ್ಮ ಬೆಳಗುವರು
ಗೋಮುಖ ದಲ್ಲಾಳಿಗಳ ಎದುರು ಮೌನ ಆಭರಣ ಆಗಬೇಕಿಲ್ಲ ಇಲ್ಲಿ
ಉಸುಕಿಗೂ ಹೊನ್ನಿಗೂ ಮಣ್ಣೇ ಮಡಿಲಾದರೂ ಧಾರಣೆ ಭಿನ್ನವಲ್ಲವೆ !
ಸತ್ಯ ಶೋಧನೆಯ ಸಂಗಾತಕೆ ಅಪಥ್ಯ ನಂಜುಣಿಸಿ ಕೊರಗಬೇಕಿಲ್ಲ ಇಲ್ಲಿ
ಪಂಜರದ ಹಕ್ಕಿಯೂ ಕೊಂಡಿ ಕಳಚಿ ಹಾರಲೇ ಬೇಕು ತಿಳಿ ಅಬಾಟೇ !
ಸ್ವಾರ್ಥ ರಂಗಿನ ನೆಲದ ಮೋಹಕೆ ನೆತ್ತರ ಓಕುಳಿ ಆಡಬೇಕಿಲ್ಲ ಇಲ್ಲಿ
************************
ಅಶೋಕ ಬಾಬು ಅವರೆ ಗಜಲ್ ಸೊಗಸಾಗಿ ಮೂಡಿ ಬಂದಿದೆ ಅಭಿನಂದನೆಗಳು
super sir
ಗಜಲ್ ಸೂಪರ್