ಕವಿತೆ
ಕಾವಲಿಲ್ಲದ ಹುಡುಗಿ
ರಾಜಶ್ರೀ ಟಿ ರೈ ಪೆರ್ಲ

ಹುಟ್ಟಿಸಿದ ಅಪ್ಪ, ಹೆತ್ತ ಅಮ್ಮ
ಇಬ್ಬರೂ ಕೈ ಬಿಟ್ಟರಂತೆ.
ಕಟ್ಟಿಕೊಂಡವ ಮುಟ್ಟಿ ಮೆಟ್ಟಿ
ಹೊರ ದಬ್ಬಿದನಂತೆ.
ಹೊಂದಿಕೊಂಡು ಹೋಗಬೇಕಿತ್ತು
ಪಾಪ ಕಾವಲಿಲ್ಲದ ಹುಡುಗಿ
ಅವರಿವರ ಮನೆ ಮುಸುರೆ ತಿಕ್ಕಿ
ಕೋರೆ ಮಾತು, ವಾರೆನೋಟಗಳ
ಬದಿಗೊತ್ತಿ ಬದುಕುಳಿದಳು.
ಯಾರೂ ತುಳಿಯದ ಹಾದಿಯನು
ತಾ ತುಳಿದಳು
ಪಾಪ ಕಾವಲಿಲ್ಲದ ಹುಡುಗಿ
ಕೈಸೆರೆಯಾದರೆ ಅಸರೆಯಾಗುವೆ
ಎಂದು ಹಲವರು ಬಳಿ ಕರೆದರು
ಮರೆಯಲ್ಲಿ ಇರಿಸಿಕೊಂಡು
ಪೊರೆವೆನೆಂದರು
ಹೊದಿಕೆಯಿಲ್ಲದೇ ನಡೆದಳು
ಪಾಪ ಕಾವಲಿಲ್ಲದ ಹುಡುಗಿ
ದಾಖಲೆಗಳಲ್ಲಿ ಇಂಥವರ ಮಗಳು
ಇವನ ಮಡದಿ
ಮತ್ತಿವನ ಅಮ್ಮ
ಯಾವುದಾದರೂ ಬೇಕಿತ್ತು
ಅಲ್ಲೆಲ್ಲಾ ಖಾಲಿ ಬಿಟ್ಟವಳು.
ಪಾಪ ಕಾವಲಿಲ್ಲದ ಹುಡುಗಿ
ದುಡಿವಿನ ಬಿಡುವಲ್ಲಿ
ಛಲ ಬಿಡದೇ ನೋವು ಮರೆತು
ಓದಿದಳು.
ಪಾಸು ಮಾಡಿ ಕೊಂಡಳಂತೆ ಪರೀಕ್ಷೆ
ಯಾರು ಗುಟ್ಟಾಗಿ ಕೈಕೊಟ್ಟರೋ
ಪಾಪಾ ಕಾವಲಿಲ್ಲದ ಹುಡುಗಿ
ಸರಕಾರಿ ನೌಕರಿ,ಪೋಲೀಸ್ ಹುದ್ದೆ
ಕೈ ತುಂಬಾ ಸಂಬಳ.
ಆಡಿಕೊಳ್ಳುವವರಿಗೆ ಸಾಕಾಗಿದೆ
ಒಂಟಿ ಹೆಣ್ಣು ಅವಳು
ಈಗ ಹಲವರಿಗೆ ಕಾವಲಾಗಿದ್ದಾಳೆ!
ಮತ್ತಿವರು ಕೊಂಕು ನುಡಿದವರಿಗೆ,
ಕುಡುಕ ಅಪ್ಪ,ತಲೆಹಿಡುಕ ಗಂಡ
ಎಡಬಿಡಂಗಿ ಅಣ್ಣ ತಮ್ಮಂದಿರು
ವೃದ್ದಾಶ್ರಮಕ್ಕೆ ಒಯ್ಯುವ ಮಗ
ಪಾಪ! ಕಾವಲಿದ್ದಾರೆ!
|*****************