ಗಜಲ್ ಜುಗಲ್ ಬಂದಿ-==06
ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ
ಗಜಲ್-06
ಅಹಂ ಇಣುಕದಂತೆ ಕಾಯುವ ನಿನ್ನರಿವಿಗೆ ಸೋಲದೆ ಹೇಗಿರಲಿ
ಕ್ಷಣ ಕೂಡ ಬಿಡದಂತೆ ಕಾಡುವ ನಿನ್ನೊಲವಿಗೆ ಸೋಲದೆ ಹೇಗಿರಲ
ಮೌನಮೊಗ್ಗೆ ,ಅರಳಿ ಹಗುರಾಗೆಂದು ಆರ್ದ್ರವಾಗಿ ಬೇಡಿಕೊಳುವೆ ನೀ
ಮಾತು ಮರೆಯದಂತೆ ಪೊರೆವ ಹೂಮನಸಿಗೆ ಸೋಲದೆ ಹೇಗಿರಲಿ
ಪರೀಕ್ಷಿಸಲು ಹಣಕುವ ಕಣ್ಣಲಿ ಮಮತೆ ಹನಿ ಉದುರುವುದೇನು
ಪ್ರಶ್ನೆ ಮೂಡದಂತೆ ತಡೆವ ಪ್ರಕ್ರಿಯೆಗಳಿಗೆ ಸೋಲದೆ ಹೇಗಿರಲಿ
ಹಾಲಿನಂಥ ಮನಸು ಹುಳಿಯಾಗಿ ಸಿಹಿ ಇಂಗಿ ಹೋದರೇನು
ಮೊಸರು ಬೆಣ್ಣೆಯಾಗುವಂತೆ ಕಡೆವ ಕನಸಿಗೆ ಸೋಲದೆ ಹೇಗಿರಲಿ
ಸಲ್ಲದ ನಿರೀಕ್ಷೆಗಳ ಪೇರಿಸಿ ಭಾರವಾಗಿತ್ತು ‘ರೇಖೆ’ಯ ಭಾವಯಾನ
ಪಯಣ ನಿಲ್ಲದಂತೆ ಸಾಗುವ ಜೊತೆ ಹೆಜ್ಜೆಗಳಿಗೆ ಸೋಲದೆ ಹೇಗಿರಲಿ
ರೇಖಾ ಭಟ್
ವಿಷಾದಗಳೇ ಬದುಕು ನರಳಿಸುವಾಗ ಸೋಲದೆ ಹೇಗಿರಲಿ/
ಪ್ರತಿ ನಡೆಯಲ್ಲಿ ಬಿಗುಮಾನವೇ ಕೆರಳುವಾಗ ಸೋಲದೆ ಹೇಗಿರಲಿ/
ಪೊರೆ ಕಳಚಿ ಹೂವಾದ ಚಿಟ್ಟೆಗೆ ಎಷ್ಟೊಂದು ಹಗುರ ಭಾವ
ಕಳಚಿದ ತೊಟ್ಟಿನ ನೋವು ಹಿಂಸಿಸುವಾಗ ಸೋಲದೆ ಹೇಗಿರಲಿ/
ಮೌನ ಮುರಿದು ಸಿಂಗರಿಸಿದ ಕಿರುನಗೆಯಲ್ಲಿ ಅನುಮಾನವೇನು
ಪ್ರೀತಿ ಪಯಣದಲಿ ನೀ ಕಳೆದುಹೋದಾಗ ಸೋಲದೆ ಹೇಗಿರಲಿ/
ನಿರೀಕ್ಷೆಗಳೇ ಪುಟ್ಟಿದೆದ್ದು ಫಳ ಫಳಿಸಿದರೆ ಒಲವೆನ್ನಲಿ ಹೇಗೆ
ಎಲ್ಲೆಗಳ ಮೀರಿ ಒಲವು ಜ್ವಲಿಸುವಾಗ ಸೋಲದೆ ಹೇಗಿರಲಿ/
ಎಷ್ಟೆಲ್ಲಾ ಮುದವಿತ್ತು ಅಭಾವವೇ ಇಲ್ಲದ ಜೀವದೊಸಗೆಯಲಿ
ಜೀವದ ಕನಸಿನ ಕದತೆರೆದು ಕನವರಿಸುವಾಗ ಸೋಲದೆ ಹೇಗಿರಲಿ/
ಸ್ಮಿತಾ ರಾಘವೇಂದ್ರ
**********************************
Very nice