ಕವಿತೆ
ನಾನು ಭೂಮಿ , ನೀನು?
ನಾಗರಾಜ್ ಹರಪನಹಳ್ಳಿ
ನನ್ನ ಎದೆ ಈಗ ಭೂಮಿ
ಅಲ್ಲಿ ಬೆಳೆದ ಮರ ನೀನು
ಮೌನಿ ನೀ
ಬೇರುಗಳು ನನ್ನೊಳಗೆ ಪಿಸುಗುಡುತ್ತಿವೆ ; ಪ್ರೇಮದ ಹೂ ಮರದ ತುದಿ ತುದಿಗೆ ಅರಳಿದೆ ನೋಡು
ಯಾರೋ ಹೂಗಳ ಮನೆಗೊಯ್ಯಯ್ದರು,ಇನ್ನಾರೂ ಸುಂದರಿ ಮುಡಿದು , ತನ್ನ ಗೆಳೆಯನ ಜೊತೆ ಕುಳಿತು ವೈಯಾರದ ಮಾತಾಡಿದಳು ; ಇಲ್ಲಿ ,ಈ ಮರದ ಬೇರು ನಸು ನಕ್ಕಿತು:
ನಾನು ಆಕಾಶ ,ಅಲ್ಲಿ ಚಲಿಸುವ ನೀನು
ಆಕಾಶದಷ್ಟಗಲ ಅರಳಿದ ಬೆಳದಿಂಗಳು
ಬೆಳದಿಂಗಳ ಉಂಡ ಭೂಮಿಯ ಜನ
ಅವರೀಗ ನಮ್ಮ ಪ್ರೇಮವ ಉಸಿರಾಡುತ್ತಿದ್ದಾರೆ
ನಾನು ಕಡಲು, ನೀ ಅಲ್ಲಿ ಚಲಿಸುವ ದೋಣಿ
ಕ್ಷಿತಿಜ ತಲುಪುವುದೇ ಇಲ್ಲ
ಮುಗಿಯದ ಪಯಣದಲಿ
ಲೋಕದ ಜನ ಕಡಲು , ದೋಣಿಯ ಕಂಡು ಚಪ್ಪಾಳೆ ತಟ್ಟಿ ನಕ್ಕು ನಲಿದು ಊರ ಸೇರಿದರು
ಮನೆಮನೆಯ ಗೋಡೆಯಲ್ಲಿ ನಾವು ಚಿತ್ರವಾದೆವು
ಮರ ನೆರಳು ಹೂವು ಆಕಾಶ ಚಂದ್ರ ಬೆಳದಿಂಗಳು ಕಡಲು ದೋಣಿ ಪಯಣ ಎಲ್ಲವೂ ಚಲಿಸದೇ ಚಲಿಸುತ್ತವೆ
ಜನ ಮಾತ್ರ ಮಣ್ಣಾಗುತ್ತಾರೆ
ಮತ್ತೆ ಹುಟ್ಟುತ್ತಾರೆ
ಪ್ರೇಮ ಪ್ರೇಮ ಮಾತ್ರ ದೀಪವಾಗಿ ಉಸಿರಾಡುತ್ತದೆ
ಇಲ್ಲಿ ಚಲನೆ ಚೆಲುವು
ಆ ಬೆಳದಿಂಗಳಲ್ಲಿ
ಮರ ನಿದ್ದೆ ಹೋಗಿದೆ ;
ನಿದ್ದೆ ಹೋಗಿದೆ …..
*****************************
ಪ್ರಕೃತಿ ಚಲಿಸದೆ ಚಲಿಸುತ್ತೆಂಬುದೆಂಬುದನ್ನು ಅದೆಷ್ಟು ನವಿರಾದ ಮಧುರಭಾವದಲ್ಲಿ ಹೇಳಿರುವಿರಿ ಸರ್
ಥ್ಯಾಂಕ್ಸ ಮೇಡಂ
ಹೊಸತನದ , ಹೊಸತರದ ಕವಿತೆ. ಚಂದ ಇದೆ
ಥ್ಯಾಂಕ್ಯೂ