ಸೋಜಿಗವಲ್ಲ…!

ಕವಿತೆ

ಸೋಜಿಗವಲ್ಲ…!

ಕಾಂತರಾಜು ಕನಕಪುರ

white and brown fish net

ಒಳಕೋಣೆಯ ಬಾಗಿಲು ಜಡಿದ
ಮೇಷ್ಟ್ರು ಆನ್ಲೈನ್ ತರಗತಿಯಲ್ಲಿ
ಲಿಂಗ ಸಮಾನತೆಯ ಕುರಿತು
ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ
ಬೋಧಿಸುತ್ತಿದ್ದುದನ್ನು ಕೇಳಿದ
ಮೇಷ್ಟ್ರ ಮಡದಿ ಕಣ್ಣೀರು ಹಾಕಿದ್ದು ಸೋಜಿಗವಲ್ಲ…!

ಸಮಾಜದಲ್ಲಿ ಅಸಮಾನತೆಯು ತೊಲಗಿ
ಸಂಪನ್ಮೂಲಗಳ ಸಮಾನ ಹಂಚಿಕೆಯಾಗಬೇಕೆಂದು
ಹೋರಾಟದ ವೇದಿಕೆಗಳಲಿ ಕಿಡಿಕಾರುತಿದ್ದವನ
ಬೀಳು ಹೊಲದಲ್ಲಿ ಒಲೆ ಹೂಡಿದ್ದ ಅಲೆಮಾರಿ
ಕುಟುಂಬ ಜಾಗ ಖಾಲಿಮಾಡಿದ ನಂತರ
ನಾಲಿಗೆ ಬಿದ್ದುಹೋಗಿರುವುದು ಸೋಜಿಗವಲ್ಲ…!

ಮನದ ಮುಂದಣ ಆಸೆಯೇ ಮಾಯೆ
ಎಂಬುದನ್ನು ಸರ್ವರೂ ತಲೆದೂಗುವಂತೆ
ವಿವರಿಸುತ್ತಿದ್ದ ಬುದ್ಧಿಯವರು
ಸಿಗಬಾರದ ರೀತಿ ಸಿಕ್ಕಿಬಿದ್ದ ವಿಷಯ
ಸವಿವರವಾಗಿ ಮಾಧ್ಯಮಗಳಲ್ಲಿ
ಬಿತ್ತರಗೊಂಡದ್ದು ಸೋಜಿಗವಲ್ಲ…!

ಊರ ಮಂದಿಯ ಜಗಳ ಜಂಜಡಗಳಿಗೆ
ಒತ್ತರಿಸಿವನ ಹೊಲ ಹಾಳು
ಮಚ್ಚರಿಸಿದವನ ಮನೆ ಹಾಳು ಎಂದು
ತಿಳಿ ಹೇಳುತಿದ್ದ ಊರಿನ ಒಳೇಟು ಗೌಡರ
ಹೊಲ ಮನೆ ಎರಡೂ ಹಾಳಾದದ್ದು ಸೋಜಿಗವಲ್ಲ…!

ನಮಗೆ ಗ್ರಾಹಕನೇ ದೇವರು
ದೇವರಿಗೆ ದ್ರೋಹ ಬಗೆದವರುಂಟೇ?
ಹೀಗೆಂದು ಅಂಗಡಿಗೆ ಆಗಮಿಸಿದವರ ಹಣೆಗೆ
ತಮ್ಮ ಹಣೆಯ ನಾಮ ವರ್ಗಾಯಿಸುತ್ತಿದ್ದ
ಮಹಡಿ ಮನೆಯ ಶೇಟ್ ಜೀ ರೋಗಗಳ
ಗೂಡಾಗಿ ಕೊರಗುವುದು ಸೋಜಿಗವಲ್ಲ…!

ಕಿಡಿಯನು ಕೆಂಡಮಾಡಿ
ಉರಿಯನು ಊರಿಗೆ ಹಚ್ಚಿ
ತಾನು ಬೆಚ್ಚಗಿದ್ದವನ ಇದ್ದೊಬ್ಬ ಮಗ
ಕಿಚ್ಚಿನಲಿ ಸುಟ್ಟು ಬೂದಿಯಾದುದು ಸೋಜಿಗವಲ್ಲ…!

ಮಂದಿ ಮತಿಯ ಮೇಲೆ ಮಂಕುಬೂದಿಯ ಸಿಡಿಸಿ ಮಾಯಾಜಾಲದಲಿ ಸಿಲುಕಿಸಿದೆವೆಂದು ಬೀಗಿ
ಗೆದ್ದವರಿಲ್ಲ ಸೋತವರೆ ಎಲ್ಲಾ…
ಹೆಣೆದ ಬಲೆಯೊಳಗೆ ಹೆಣವಾಗುವುದು
ಯಾವತ್ತಿಗೂ ಸೋಜಿಗವಲ್ಲ…!

************************

12 thoughts on “ಸೋಜಿಗವಲ್ಲ…!

  1. ಕವಿತೆ ಓದಿದ ಮೇಲೆ. ತಲೆದೂಗಿದರೆ ಸೋಜಿಗವಲ್ಲ !

  2. ಬಟ್ಟೆ ಒಳಗೆ ಇಟ್ಕೊಂಡು ಒಡೆದ ಹಾಗಿದೆ ಕಾಂತ… ಒಳ್ಳೆ ಏಟು

Leave a Reply

Back To Top