ವೀಣಾ ನಿರಂಜನರವರ ಕವಿತೆ

ಕವಿತೆ

ವೀಣಾ ನಿರಂಜನರವರ ಕವಿತೆ

https://images.unsplash.com/photo-1493979969019-a78fdb263931?ixid=MnwxMjA3fDB8MHxzZWFyY2h8MXx8bGlnaHQlMjBmcm9tJTIwc2t5fGVufDB8fDB8fA%3D%3D&ixlib=rb-1.2.1&auto=format&fit=crop&w=500&q=60

ನಕ್ಷತ್ರಗಳನ್ನು ನೋಡುವಾಗ
ನನ್ನ ಜೊತೆಗಿರುತ್ತಿದ್ದ ಅಕ್ಕ ತಂಗಿಯರು
ಈಗ ಖುದ್ದು ನಕ್ಷತ್ರವಾಗಿದ್ದಾರೆ
ಹೀಗೆ ಇದ್ದಕ್ಕಿದ್ದಂತೆ ಎದ್ದು ಹೋಗಿ
ನಕ್ಷತ್ರವಾಗಿ ಬಿಡುವವರ ಕುರಿತು
ನಾನೀಗ ಯೋಚಿಸುತ್ತಿದ್ದೇನೆ

ಅಂಗಳದ ತುಂಬ ಚೆಲ್ಲಿದ್ದ
ಮಲ್ಲಿಗೆಯ ಹೂಗಳನ್ನಾಯುತ್ತಿದ್ದವರು
ಹೂಗಳು ಬಾಡುವ ಮುನ್ನವೇ
ಪರಿಮಳವ ಅಲ್ಲೇ ಬಿಟ್ಟು
ನಡೆದೇ ಬಿಟ್ಟರು ಸದ್ದಿಲ್ಲದೆ
ಆ ಪರಿಮಳವಿನ್ನೂ ಹಾಗೇ ಇದೆ
ನನ್ನ ಮನದೊಳಗೆ

ರಾತ್ರಿ ನೀರವ ಮೌನದಲ್ಲಿ
ಬಿಚ್ಚಿ ಕೊಳ್ಳುತ್ತಿದ್ದ ಬದುಕ ಕಟ್ಟುವ
ಕನಸುಗಳು, ಪಿಸುಮಾತು, ನಸುನಗೆ
ಹಾಡಾಗಿ ಹೊಮ್ಮುತ್ತಿದ್ದ ಭಾವಗಳು
ಎದೆಯ ದನಿಗೆ ರಾಗವಾಗುವ ಮುನ್ನವೇ
ಸ್ವರಗಳ ಕಳಚಿಟ್ಟು ನಡೆದರು

ಎಲ್ಲೋ ದೂರದಲ್ಲಿ ಪುಟ್ಟ ನಕ್ಷತ್ರಗಳಾಗಿ
ಮಿನುಗುತ್ತಿರುವ ಈ ನನ್ನ ಜನ
ಕಾಲ ಕಾಲಕ್ಕೆ ಸುರಿವ ಮಳೆಯಂತೆ,
ಕಡಲ ಭೋರ್ಗರೆತದಂತೆ
ಎಲೆ ಕಳಚಿ ಮರುಹುಟ್ಟು
ಪಡೆಯುವ ವೃಕ್ಷ ಸಂಕುಲದಂತೆ
ಮರಳಿ ಬಾರರೆ…

ಹೊತ್ತು ಮುಳುಗುವ ಮುನ್ನವೇ
ತೆರೆದುಕೊಳ್ಳುವ
ಹೊತ್ತೇರುವ ಮುನ್ನವೇ
ಮರೆಯಾಗುವ ಈ ತಾರಾ ಲೋಕ
ನಮ್ಮೊಳಗೊಂದು ಬೆಳಕಿನ ಕಿರಣ
ಹಡೆದು ಬಿಡುವ ಸೋಜಿಗದಲ್ಲಿರುವೆ
ನಾನೀಗ…

******

5 thoughts on “ವೀಣಾ ನಿರಂಜನರವರ ಕವಿತೆ

    1. ಹೋದವರು ಹೋಗಿ ಬಿಡುತ್ತಾರೆ , ಉಳಿದವರೆದೆಯ ನೋವು ಅವರಿಗರ್ಥವಾಗುವಂತಿದ್ದರೆ..!!? ತುಂಬ ಯೋಚಿಸುತ್ತೇನೆ ನಾನೂ ಆದರೆ ಎಲೆ ಕಳಚಿ ಮರುಹುಟ್ಟು ಪಡೆವ ಗಿಡ ಮರಗಳ ಭಾಗ್ಯ ಈ ಮನುಷ್ಯನಿಗೆಲ್ಲಿದೆ. ಅದೆಷ್ಟೋ ಸಲ ಅಂದುಕೊಳ್ಳುತ್ತೇನೆ *ನೆಲದಲ್ಲಿ ಹುಗಿದ ಮನುಷ್ಯನ ದೇಹವೂ ಮತ್ತೆ ಚಿಗಿಯುವಂತಿದ್ದರೆ..?? ಎಂದು…!!

      ಕವಿತೆ ಕಣ್ಮನ ಆರ್ದ್ರಗೊಳಿಸಿತು.ಇಬ್ಬರೂ ನೆನಪಾದರು.ತುಂಬ ಸಲುಗೆಯ ದೀರ್ಘ ಪರಿಚಯದವರಲ್ಲದಿದ್ದರೂ ಎಂಥ ವಿಧಿಯಿದು ಇಬ್ಬರೂ ಹೀಗೆ ಏಕಾಏಕಿ ಇಲ್ಲವಾಗುವುದೆಂದರೆ..ಎಂದು ಈಗಲೂ ನೆನಪಾದರೆ ದಂಗು ಬಡಿಸುತ್ತಾರೆ.

      ಇದ್ದಾಗ ಮನೆಯಂಗಳದ ಮಲ್ಲಿಗೆ ಆಯುತ್ತಿದ್ದವರು ಈಗ ದಿನವೂ ನಿನ್ನ ಮನೆಯ ಅಂಗಳದಲ್ಲಿ ಮಲ್ಲಿಗೆಯಾಗಿ ಅರಳುತ್ತಿರಲಿ ಎಂದು ಆಶಿಸುವೆ.

      ಅಳಿಸಲಾಗದ , ಮರೆಯಲಾಗದ ಎದೆಯಾಳದ ನೋವಿಗೆ ಶಬ್ದಗನ್ನಡಿಯಾಗಿದೆ ಕವಿತೆ..!!

  1. ಸತ್ತವರೆಲ್ಲಾ ನಕ್ಷತ್ರಗಳಾಗುತಾರಂತೆ ಅಜ್ಜಿ ಹೇಳುತ್ತಿದ್ದ ಮಾತು. ಇದುವೆ ನಿಜವಾಗಲಿ ಅಂತ ಕವಿತೆ ಓದಿ ಆಶಿಸಿತು ಮನಸ್ಸು. ಯಾಕೋ ಮನಸ್ಸು ತೇವವಾಯಿತು.

Leave a Reply

Back To Top