ಕವಿತೆ
ಅವಳ ನಗೆ ನಾದ.
ಸುಜಾತ ಲಕ್ಷ್ಮೀಪುರ.
ಅವಳ ಮೊಗದ ನಗೆ ನಾದದಲಿ
ಮಿಂದೆದ್ದ ರಾಗ ನಾನು
ಈಗಲೂ ನುಡಿಯುತಿದೆ ಕೊರಳು
ಅವಳದೇ ಹೆಸರಿನ ಗಾನವನು
ಅವಳ ನುಡಿಸಿರಿಯ ಶಬ್ಧಕೋಶದಲಿ
ಪುಟ್ಟ ಹ್ರಸ್ವ ಸ್ವರ ನಾನು
ಉಸಿರೂದಿ ಊದಿ ಜೀವ ತುಂಬುವ
ದೀರ್ಘ ಮಹಾಪ್ರಾಣ ಅವಳು.
ಅವಳ ನಡೆವ ಹಾದಿಯಲಿ ಕಲ್ಲುಮಣ್ಣು
ದೂಳಿನ ಸಣ್ಣ ಕಣ ನಾನು
ದೂಳು ವರೆಸಿ ಕಲ್ಲರಳಿಸಿ ಹೂವಾಗಿಸಿ
ಮುಡಿಗೇರಿಸಿದ ದೇವಿ ಅವಳು
ಅವಳ ಕಣ್ಣಕಾಂತಿ ಕಡಲಲಿ
ತೊಯ್ದಾಡುತ್ತಿರುವ ದೋಣಿ ನಾನು
ಮುಳುಗಿಸಿ ತೇಲಿಸಿ ದಡ ಸೇರಿಸುವ
ಹುಟ್ಟು ಹಿಡಿದ ದೈವ ಅವಳು
ಅವಳ ಸಿಟ್ಟು ಸೆಡವಿನಲಿ ಸುಟ್ಟು
ಬೂದಿಯಾದ ತರಗೆಲೆ ನಾನು
ಬೂದಿಯಾಳದಿ ಪಸೆಯ ಜಿನುಗಿಸಿ
ಹಸಿರು ತುಂಬುವ ಬನವೆ ಅವಳು
ಅವಳ ನೆನಪಿನ ಗುಂಗು ಹಿಡಿದ
ಅರಳು ಮರುಳು ನಾನು
ಏನು ಮರೆತರೂ ಅವಳ ಮರೆಯದ
ವರವಿತ್ತ ಯಕ್ಷಿ ಅವಳು.
ಅವಳ ಹಿತ ಬಯಸಿ ಒಲವ ಹನಿಸಿ
ಪೂಜಿಸುವ ಭಕ್ತೆ ನಾನು
ಕಲ್ಲಾಗಿ ದೂರದಲೆ ಉಳಿದು
ಕಾಣದಂತಿರುವ ಅಭಯ ಹಸ್ತ ಅವಳು.
*****************************