ಕವಿತೆ
ಸಹಜವಲ್ಲದ್ದು
ಎಂ. ಆರ್. ಅನಸೂಯಾ
ಅನುಭವಿಸಲಿಲ್ಲ ನೆಲದವ್ವನ ಮಡಿಲ ಸುಖ
ಹೀರಲಿಲ್ಲ ಅಮೃತದಂಥ ಭುವಿಯ ಸಾರವ
ಚಾಚಲಿಲ್ಲ ಬೇಕೆನಿಸಿದಂತೆ ಕೈ ಕಾಲುಗಳ
ಇತಿಮಿತಿಯ ಕುಂಡದ ಇರುಕಲಲಿ
ಮಣ್ಣ ನಂಟು ಬಳಸಿ ಬೆಳೆದ ನಾನು
ಕೃತಕ ಗರ್ಭದ ಪ್ರನಾಳ ಶಿಶುವಿನಂತೆ
ಅಲೆದಾಡಿ ಅರಿತಿಲ್ಲ ಕಾನನದ ಸ್ವಚ್ಛಂದ ಸುಖ
ಮಿಂದೆದ್ದ ಖುಷಿಯಿಲ್ಲ ಹರಿವ ಹೊಳೆ ನೀರಲಿ
ಆನುಭವಿಸಿಲ್ಲ ಬೇಟೆಯಾಡಿ ಗಿಟ್ಟಿಸಿದೂಟದ ಗಮ್ಮತ್ತು
ಗೊತ್ತೇ ಇಲ್ಲ ವನಜೀವಿಗಳ ಒಡನಾಟದ ಕಿಮ್ಮತ್ತು
ಬಂಧಿಯಾಗಿ ಬೋನಿನಲಿ ತೂಕದೂಟಕ್ಕೆ ಕಾಯುವ
ಹೊರ ಪ್ರಪಂಚ ಕಾಣದ ಕೂಪ ಮಂಡೂಕ ನಾನು
ಅನುಭವಿಸಿಲ್ಲ ಆಗಸದಡಿಯ ಸ್ವಚ್ಛಂದ ಹಾರಾಟ
ಸವಿದಿಲ್ಲ ಕುಡಿಯೊಡೆದ ಚಿಗುರೆಲೆಗಳ ಸವಿರುಚಿಯ
ಕಂಡೇ ಇಲ್ಲ ಅಡವಿಯ ಹಸಿರುಕ್ಕುವ ವೃಕ್ಷರಾಜಿಗಳ
ಕೇಳಿಲ್ಲ ಪಕ್ಷಿಮಿತ್ರರುಗಳ ಮಧುದಗಾನದುಲಿಯ
ಬಂಗಾರದ ಪಂಜರದೆ ಸ್ವಾತಂತ್ರದ ಕನವರಿಕೆಯಲಿ
ತಾಯಿ ಪ್ರೀತಿ ಕಾಣದ ತಬ್ಬಲಿಯಂತಿರುವೆ ನಾನು
ಈಜಿಲ್ಲ ಮನಸಾರೆ ಹರಿವ ಹೊಳೆಯ ಹರಹಲ್ಲಿ
ಕೇಳಿಲ್ಲ ಹರಿವ ಹೊನಲಿನ ಜುಳುಜುಳು ನಿನಾದವ
ಸವಿದಿಲ್ಲ ರಾಡಿ ಬೆರೆತ ರಭಸದ ಮಳೆ ನೀರಿನ ರುಚಿಯ
ಅನುಭವಿಸಿಲ್ಲ ಗಾಳಕ್ಕೆ ಬಿದ್ದ ಮೀನ ವಿಲವಿಲ ಒದ್ದಾಟ
ಪಾರದರ್ಶಕ ಗೋಡೆಯೊಳಗೆ ಕೃತಕ ಗಾಳಿಯಲಿರುವ
ಏಕತಾನತೆಯ ನೀರಸ ಜೀವನದ ಗೃಹಬಂಧಿ ನಾನು
ಕೂಗಿಲ್ಲ ಎಂದೂ ಮುಂಜಾನೆ ಮುಂಗೋಳಿಯಾಗಿ
ನೀಡಿಲ್ಲ ಗುಟುಕ ಕಾವು ಕೊಟ್ಟು ಕಾಪಿಟ್ಟ ಮರಿಗಳಿಗೆ
ತಿಂದಿಲ್ಲ ಕೆದಕಿ ತಿಪ್ಪೆಗೊಬ್ಬರದ ಹುಳು ಹುಪ್ಪಡೆಗಳ
ಪೊರೆದಿಲ್ಲ ಒಡಲಿಗವಚಿ ಮರಿಗಳನ ಹದ್ದೆರೆಗಿದಾಗ
ಬದುಕಲಿಲ್ಲ ಸಹಜವಾಗಿ ನನ್ನಿಪ್ಟದಂತೆ ನನಗಾಗಿ ನಾನು
ಪರರ ಹೊಟ್ಟೆಗಾಗಿ ಕೊಬ್ಬುವುದೇ ನನ್ನ ಬದುಕಿನ ಪಾಡು
ನಿಸರ್ಗ ಸಹಜವಲ್ಲದ ಬರಡು ಯಾಂತ್ರಿಕ ಜೀವನ
ಸಂವೇದನೆಯಿಲ್ಲದ ರಸಹೀನ ಬದುಕಿನ ಯಾನ
*********
ಸುಂದರ ಕವಿತೆ
ಚೆಂದದ ಕವಿತೆ ಮೇಡಂ