ಕವಿತೆ
ಅಪ್ಪ ಮೌನವಾಗಿದ್ದಾನೆ !!!
ಕಾಡಜ್ಜಿ ಮಂಜುನಾಥ
ಅಪ್ಪ ಮೌನವಾಗಿದ್ದಾನೆ
ಈಗೀಗ ಮಾತು ಕಮ್ಮೀ
ಮುಂಚೆಯಾದರೂ ಬೈಯುತ್ತಿದ್ದ
ಕೆಲಸ ಮಾಡು ಎನ್ನುತ್ತಿದ್ದ
ದಾರಿ ತಪ್ಪಿದರೆ
ಬೆದರಿಸುತ್ತಿದ್ದ
ಕನಸಿನ ಗೋಪುರ ಮಗನಲಿ
ಕಟ್ಟಿ ನೀರೆಯುತ್ತಿದ್ದ
ಅನಾರೋಗ್ಯಕ್ಕೆ ತಪ್ಪದೆ
ಬೆಟ್ಟದಂತೆ ಜೊತೆ ನಿಲ್ಲುತ್ತಿದ್ದ
ಬೆನ್ನು ತಟ್ಟಿ ಧೈರ್ಯ ತುಂಬುತ್ತಿದ್ಧ
ಎಂದು ಓದಲೇಬೇಕು ಎಂದು
ಗದರಲಿಲ್ಲ
ಚಾಡಿಕೋರರರಿಗೆ ಕಿವಿಯಾಗಲಿಲ್ಲ
ನಂಬಿಕೆಯ ಗೋಡೆ ಮಗನಲ್ಲಿ
ನಿರ್ಮಿಸಿದ
ಅರಮನೆಯಂತಹ ಸೌಧವಾಗಿಸಿದ
ಬದುಕು ಕಲಿಸಿ
ಬೆವರಲಿ ರಕ್ತ ಹರಿಸಿ
ಸಾಧನೆಗೆ ಬೆನ್ನೆಲುಬಾಗಿ ನಿಂತ
ಕನಸು ನನಸಾಗಿದ್ದಕ್ಕೆ
ಅಪ್ಪ ಮೌನಿಯಾಗಿ
ಖುಷಿ ಪಟ್ಟಿದ್ದಾನೆ
ಭಾರತರತ್ನ ಪಡೆದಂತೆ
ಕಂಬನಿ ಮಿಡಿದಿದ್ದಾನೆ
ಆದರೆ
ಅವನು ಆಡಿದ ಪ್ರತಿ ಮಾತು
ಕಿವಿಯ ತಮಟೆಯಲ್ಲಿ
ಬಿಜಾಪುರದ ಗೋಲ ಗುಮ್ಮಟದಂತೆ
ಪಿಸುಗುಡುತ್ತ
ಸದಾ ಎಚ್ಚರಿಸುತ್ತಿದೆ
…………..
Supeeeeeeeeeeeeer sir
ಅಪ್ಪನ ಬಗ್ಗೆ ತುಂಬಾ ಅದ್ಭುತವಾಗಿ ಬರೆದಿದ್ದಾರೆ ಅಭಿನಂದನೆಗಳು
good