ಸಾವು ಸಂಭ್ರಮಿಸುವ ಮೊದಲು…!

ಕವಿತೆ

ಸಾವು ಸಂಭ್ರಮಿಸುವ ಮೊದಲು…!

ಜಬೀವುಲ್ಲಾ ಎಮ್. ಅಸದ್

Alone, Ghost, Boy, City Lights
z

ಕಳೆದು ಹೋದ ಕನಸುಗಳ
ಅರಸುತ್ತಿರುವೆನು
ಅಂತರಂಗದ ಆಲಯದಿ
ಭಾವಬೇಗೆಯಲ್ಲಿ ಬೇಯುತ್ತಿರುವೆನು
ಮನಕಂದಕದ ಅಜ್ಞಾತ ಸುಳಿಯಲ್ಲಿ
ಕಾಲದ ಕತ್ತಲಲಿ ಅವಿತು
ಸುಗಂಧವಿಲ್ಲದ ಬೇನಾಮಿ ನೆನಪುಗಳ
ಕಳೆದುಹೋದ ಅಸ್ತಿತ್ವ
ತಡಕಾಡಬೇಕು!

ಧ್ಯಾನದ ಹಕ್ಕಿ ಮೌನ ಪಂಜರದಿ ಬಂಧಿ
ಭೂಮಿ ಮರೆತಂತೆ ಆಗಸದ ಮಹತ್ವ
ಅನುರಣನೀಯ ಅಪಸ್ವರ

ಹರಿದಿವೆ ದಾರಿಗಳು
ಸೇತುವೆಗಳ ಮೇಲೆ ಹೌಹಾರಿ
ಬಯಕೆಗಳ ಕುಣಿಕೆ ಬಿಚ್ಚಲು
ಹಾರುತ್ತಿವೆ ಮೀನುಗಳಾಗಿ
ನಕ್ಷತ್ರ ಕಡಲಲ್ಲಿ ಒಂದಾಗಿ ಸೇರಿ

ಎಷ್ಟು ಉರುಳಿದವು ಕಾಲ ಚಕ್ರಗಳು
ಲೆಕ್ಕ ಇಡುವವರೆ ನಿರ್ನಾಮವಿಲ್ಲಿ!
ಮಸಣದ ಗೋರಿಗಳೇ
ಆಶಾಶ್ವತ ಬದುಕಿನ
ಜ್ವಲಂತ ನಿದರ್ಶನಗಳಿಲ್ಲಿ

ಬವಣೆಯ ಬಾಳಿನಿಂದ ಮುಕ್ತವಾಗಬೇಕಾದರೆ
ಅಲಯದ ಸುಖ ತೊರೆದು
ಬದುಕಿರುವಾಗಲೇ ಬಯಲಾಗಬೇಕು
ಸಾವು ಸಂಭ್ರಮಿಸುವ ಮೊದಲು
ಜೀವಕ್ಕೊಂದು ಅರ್ಥ ನೀಡಬೇಕು

*****

4 thoughts on “ಸಾವು ಸಂಭ್ರಮಿಸುವ ಮೊದಲು…!

Leave a Reply

Back To Top