ಯಾರು ನೀನು !

ಕವಿತೆ

ಯಾರು ನೀನು !

ಅಕ್ಷತಾರಾಜ್ ಪೆರ್ಲ

Man, Silhouette, Sun, Shadow

ನಿನ್ನ ಸನಿಹ ನಾನು ಕುಳಿತಾಗೆಲ್ಲ ಅದೇನು ಮುನಿಸು ಬೆಳಕಿಗೆ
ಮುಖವೊಡ್ಡಲಾರೆನೆಂದು ಮುಸುಕು ಹೊದ್ದುಕೊಳ್ಳುವುದೇಕೋ?
ತುಸು ಹೊತ್ತಿಗಾಗಿ ನನ್ನ ಚಡಪಡಿಕೆ ಅಷ್ಟು ಆಸಡ್ಡೆಯೇ
ಅಥವಾ ಮೈ ಚೆಲ್ಲಿ ನಿಂತಿದ್ದೇನೆಂದು ಅಸಹ್ಯವಾಗಿರಬಹುದೇ!
ಹೇಳು ಉತ್ತರವೆಂದು ನಾನು ಪಟ್ಟುಹಿಡಿದಾಗ ಸಿಕ್ಕಿದ್ದು ಮೌನ

ಕತ್ತಲೆಯೊಳಗೆ ಕಾಣಲಾರೆ ಹೌದೆಂದು ಒಪ್ಪಿಕೊಳ್ಳುತ್ತೇನೆ
ಮಾತಿಗೂ ನಿಲುಕದ ತಂತಿಯೊಂದು ಮೀಟಿ ಬಿಟ್ಟು ಹೋದಂತೆ
ಅದೇನೋ ಕಂಪನ ನೀನೆದ್ದು ಹೋದ ಆ ಘಳಿಗೆಯಲ್ಲಿ
ಈ ಶೀತಲ ಕತ್ತಲಿಗೂ ಇನ್ನೊಂದು ಬಿರುಸು ಮುಖವಿದೆ
ಬೇರೆಯಾಗುವುದು ಪೊರೆ ಕಳಚಿ ನಿಂತ ಹಾವಿನಂತೆ

ಎಳಸು ಭಾವಗಳು ಹಾಗೆ ಸುಮ್ಮನಿದ್ದೀತೆಂದುಕೊಂಡೆ
ಬಣ್ಣ ಬದಲಾಯಿಸಿತು ಕತ್ತಲೆಯೂ ಒಂದು ಗೋಸುಂಬೆ !
ಇರುಳು ಬೆಳಕಿನ ನಡುವೆ ನಿತ್ಯ ಸಂಚಾರ ಬೀದಿಯಲಿ
ಅರೆಕ್ಷಣ ಅದೆಂತಹಾ ಕಾಂತಿ ಕಣ್ಣಿಗೆ ರಾಚುವಂತೆ
ದಾರಿ ಮಧ್ಯೆ ಮಿನುಗುವ ಮಿಂಚುಹುಳವಾಗುತ್ತೀಯೆ

ಹಾಗಿದ್ದರೆ ಮರೆಯಲಿ ನಿಂತು ಮಾರ್ದನಿಸುವ ನೀನಾರು ?
ಮುಂಜಾನೆ ! ಉರಿಹಗಲು! ಓಕುಳಿಯ ಇಳಿಸಂಜೆ!
ಅಥವಾ ಬಣ್ಣದಂಗಡಿಯಲಿ ಮಿಂದೇಳುವ ಅಂತರಾತ್ಮ

*********************

2 thoughts on “ಯಾರು ನೀನು !

  1. ವಾವ್…. ಚೆನ್ನಾಗಿದೆ ಮೇಡಂ ಅಭಿನಂದನೆಗಳು

Leave a Reply

Back To Top