ಸುಡಬೇಡಿ ನಮ್ಮ

ಕವಿತೆ

ಸುಡಬೇಡಿ ನಮ್ಮ

ಡಾ. ಅರಕಲಗೂಡು ನೀಲಕಂಠ ಮೂರ್ತಿ

Fire, Bonfire, Night, Evening, Burning

[ಸುಡಬೇಡಿ ನಮ್ಮ
ಸುಟ್ಟು ಬೂದಿ ಮಾಡಿಬಿಡಬೇಡಿ
ಕಳಚಿ ಕೆಳಗೆ ಬಿದ್ದು ಒಣಗಿದ
ಯಕಃಶ್ಚಿತ್ ತರಗು ನಾವು
ನಿಮ್ಮ ಕಣ್ಣಲಿ ಎದ್ದು ತೋರುವ
ಆ ತುಚ್ಛ ಅಸ್ಥಿತ್ವ ಭಾವ
ತರಗಿಗೆ
ನಿಜದಿ ನಿಮ್ಮ ಹೊಣೆ
ಬೂದಿ ಮಾಡಲು ಅದೆಂಥ ನೆಪ!

ಒಂದೊಮ್ಮೆ ನಿಮ್ಮ ಹಾಗೆ
ಸಜೀವಕಳೆಯಲಿ
ಚಿಗುರಾಗಿ ಅಚ್ಚ ಹಸಿರಾಗಿ
ನಳನಳಿಸಿ
ತೊನೆದಾಡಿ ತೇಲಾಡಿ
ನಿಮ್ಮ ಮನೆಯೆದುರು
ಬೃಹತ್ತವತಾರ ಎತ್ತಿ ನಿಂತಿರುವ
ಅರಳಿ ಮರದೆಲೆಗಳು
ಸದ್ಯ ಬಿದ್ದ ತರಗೆಲೆಗಳು
ನಿಮ್ಮ ಮೊಹಲ್ಲದೆಲ್ಲರೂ ಕಂಡಿದ್ದ
ಕನಸುಗಳ ರುಜುವಾತುಗಳು
ಬಹುಷಃ ನಿಮ್ಮ ಅಳಿದುಳಿದ
ನೆನಪುಗಳು!

ಈ ಕ್ಷಣ ಇಲ್ಲಿ
ಮರುಕ್ಷಣ
ಜೋರು ಬೀಸುವ ಗಾಳಿಗೆ
ಇನ್ನಾವುದೋ ಮರದ ಬುಡದಲ್ಲಿ
ಅಥವ ಇನ್ನಾವುದೋ ಇಂಥದೇ
ಉದ್ಯಾನದಲ್ಲಿ
ಯಾರದೋ ಹಿತ್ತಲಲ್ಲಿ
ಬಿದ್ದೂ ತರಗಿನೆಲೆಯಾಗೇ ಬದುಕು

ಅಥವ ಯಾರದೋ ತಿಪ್ಪೆಗೆ ಬಿದ್ದು
ರಸಗೊಬ್ಬರ
ಸೊಂಪಾದ ಪೈರಿನ ಕೂಳು!

ಇಲ್ಲ ರಸ್ತೆ ಬದಿಯಲ್ಲೋ
ಅಥವ ನಡುಬೀದಿಯಲ್ಲೋ
ಹಾರಿ ತುಳಿತಕ್ಕೀಡಾಗಿ ನೂರು ಚೂರಾದರೂ
ತರಗಿನ ಚೂರುಚೂರೇ ನಾವು!

ಅಂಥ ಅಸ್ಥಿತ್ವ ಸುಡಬೇಡಿ
ಸುಡು ಹೊಗೆ
ನಿಮ್ಮ ಪುಪ್ಪುಸಗಳ ಆಳಕಿಳಿದು
ಕೆಮ್ಮು ದಮ್ಮಾದೀತು
ಧೂಳ ಕಣಗಳಾಗಿ ನಿಮ್ಮ ನಿಮ್ಮ
ಕಣ್ಣುಗಳ ಕೊಕ್ಕಾಗಿ ಕುಕ್ಕೀತು!

************************

9 thoughts on “ಸುಡಬೇಡಿ ನಮ್ಮ

  1. ಕವಿತೆ ಅರ್ಥಗರ್ಭಿತವಾಗಿದೆ. ಅಭಿನಂದನೆಗಳು

  2. Thanks Dr. Ramesh, Miss Yamuna, Dr Prasanna, Sri. Laxmeesh and Mrs. Nikhitha for your comments and encouragement.

  3. ತರಗೆಲೆಗು ಜೀವ,ಶಕ್ತಿ,ಸತ್ವವಿತ್ತೆಂಬುದನ್ನು,ನಿರೂಪಿಸಿರುವ ನಿಮ್ಮ ಕವನ ಅದ್ಬುತ ಹಾಗು ಅರ್ಥಗರ್ಭಿತ ವಾಗಿದೆ ಗುರೂಜಿ

Leave a Reply

Back To Top