ಕವಿತೆ
ನನ್ನ ಅಪ್ಪನ ಬಗ್ಗೆ
ಮಂಜೇಶ್ ದೇವಗಳ್ಳಿ
ಆತ ಎಂದೂ ಅಳೆತ ಮಾಡಿ ಏನೂ ನೀಡಿಲ್ಲ
ಆತ ಬೊಗಸೆ ಮೊಗಸೆ ತುಂಬಿ ನೀಡಿದ
ಆತನ ಮನದ ಬಲ ಛಲದಕಳೆ ಮೊಗದಿ
ಆತ ನುಡಿ ನಡೆ ನಾಜುಕಿಗೆ ನೆಲದ ಬಲ
ಆತನ ಬವಣೆ ಬದುಕೆ ನಮ್ಮ ಆಧಾರ
ಆತನ ಹಸಿಗೂಸಿನ ನಗುವಲಿ ನಾವಿನ್ನೂ ಮಗು.
ಮತ್ತೆಷ್ಟು ಮೃಷ್ಟಾನ್ನ ಮೊಗದಿ ಮುಂಗುರುಳ ನಗು
ಏರಿ ಮೇಲ ಕಳೆಯನು ಪಸಲನು ಹದನಾಗಿಸಿರುವೆ,
ಇನ್ನೆಷ್ಟು ಇರುಳ ಕದ್ದ ಕನಸಿನ ಬಲವು ನಮ್ಮೊಲವಿಗೆ
ಇಂತಿಷ್ಟು ಸಾಲಾದೆ ತೀರದ ಹಿಂಗಿತಗಳಿಗೆ ಇಂಧನವು,
ಮನ್ನಣೆಯ ಹೊಣೆ ನಿನ್ನೆಗಲಿಗೇಕೆ ತುಸು ವಿರಮಿಸು
ನೀ ತೆತ್ತ ಹಗಲುಗಳು ತರಲಿವೆ ಸಮೃದ್ಧ ಬೆಳಕನು,
ನಾಳೆಯ ಬಾಳಿಗೆ ದಾರಿಯು ದಿಟದ ನಿನ್ನೆಜ್ಜೆಗಳು.
ಇರುಳಲಿ ಕೈ ಹಿಡಿದು ನಡೆವ ಅಂಬೆಗಾಲ ನಡಿಗೆಯಂತೆ
ಭುಜಕೆ ಭುಜ ಒರಗಿ ಕುಳಿತು ತುಸು ಹೊತ್ತು ಕಳೆವ
ಎದೆಗೊರಗಿ ನೆನೆವ ಮರೆತಂತಿರುವ ಆ ದಿನಗಳನು
ಹಸಿವ ನೀಗುವಷ್ಟು ಕೈ ತುತ್ತನುಣಿಸಿ ದಣಿವ ತಣಿಸು
ತಿಳಿಸು ಕಣ್ಣಿದ್ದರು ಕಾಣದ ಕಥೆಯ ತೊಡೆಗೊರಗಿ ಮಲಗುವೆ
ನೆತ್ತಿಯ ಸವರಿ ಮುತ್ತನೊಂದಿತ್ತು ಬಿಡು ಬತ್ತದಿರುವಾಗೇ
ಸಹಿಸಿ ಗೆದ್ದವ ನೀ ನಿನ್ನಂತಾಗ ಬೇಕೆಂದೆ ನನ್ನ ಕುಡಿ ಜೀವ ನಕ್ಕಾಗ.
*******************