ಅಪ್ಪ ಕಾಡಿದ

ಕವಿತೆ

ಅಪ್ಪ ಕಾಡಿದ

ಡಾ. ಪುಷ್ಪಾ ಶಲವಡಿಮಠ

Father Daughter Art Print, dad daughter paintings, walking with dad rain  wall art, father's day gift for dad, brunette girl, Vickie Wade Art |  Stampe d'arte, Foto padre e figlia, Dipingere idee

ಅಪ್ಪ ಬಹುವಾಗಿ ಕಾಡಿದ…
ಎದೆಯ ನೆಲದ ಮೇಲೆ
ಹೆಜ್ಜೆಯೂರಿ ನಡೆದ ಅಪ್ಪ
ಹಚ್ಚ ಹಸಿರಾಗಿ ಕಾಡಿದ

ಇಡಿಯಾಗಿ ಸಂಬಳ ತಂದು ಅಮ್ಮನ ಕೈಗಿತ್ತು
ಹಿಡಿಯಲ್ಲಿ ಒಂದಿಷ್ಟು ಕದ್ದು ಚಿಲ್ಲರೆಯನಿಟ್ಟುಕೊಂಡು
ಅಕ್ಕರೆಯಿಂದ ಮುಷ್ಠಿಯಲಿ ಮಕ್ಕಳ ಕೈಗಿತ್ತು
ಖುಷಿಪಟ್ಟ ಅಪ್ಪ ಬಹುವಾಗಿ ಕಾಡಿದ

ತಡರಾತ್ರಿ ಕೆಲಸ ಮುಗಿಸಿ ಬಂದ
ಅಪ್ಪನಿಗಾಗಿ ಹಂಚಿಟ್ಟು ಬಿಸಿರೊಟ್ಟಿ ತಟ್ಟಿದ
ಅವ್ವನಂತೆ ಮುಚ್ಚಿಟ್ಟು ಮಡದಿಗೆ ಮಲ್ಲಿಗೆ ಮುಡಿಸಿದ
ಅಪ್ಪ ಬಹುವಾಗಿ ಕಾಡಿದ

ಗದರಿಸುವ ಅವ್ವನ ಕಣ್ಣಿಗಿಂತ
ರಮಿಸಿ ಮುದ್ದಿಸುವ ಅಪ್ಪನ ತೊಡೆಯೇ ಹಿತವಾಗಿತ್ತು
ಯುವರಾಣಿಯ ಗತ್ತಿಗೆ ನಸುನಕ್ಕು
ಗಲ್ಲಕೆ ಮುತ್ತಿಟ್ಟ ಅಪ್ಪ ಬಹುವಾಗಿ ಕಾಡಿದ

ಮುಪ್ಪಾವರಿಸಿತು ಅಪ್ಪನಿಗೆ ನಿವೃತ್ತಿಯೂ ಆಯಿತು
ಹೊರೆಯಾದೆನೇನು! ಎಂದು ಒಳಗೊಳಗೆ ಕೊರಗಿದರೂ ಹೊರಗೆ ತೋರಗೊಡದೇ
ಕಲ್ಪವೃಕ್ಷವಾಗುತ್ತಲೇ ಬೆಳೆದ ಅಪ್ಪ ಬಹುವಾಗಿ ಕಾಡಿದ

ಮನತನವೆಂಬ ಬಳ್ಳಿಗೆ ಬಿದಿರಂತೆ ಆಸರೆಯಾಗಿ
ಬಿಡದೆ ಬಳ್ಳಿಯಲಿ ನಗುವ ಹೂವ ಅರಳಿಸಲು
ರಾತ್ರಿಯಿಡಿ ನಿದ್ದೆಯಿಲ್ಲದೇ ಹೊರಳಾಡಿದ
ಅಪ್ಪ ಬಹುವಾಗಿ ಕಾಡಿದ

ಅಪ್ಪನೆಂದರೆ ಹೀಗೇ ಭದ್ರಗೋಡೆ
ಅಚಲತೆಯ ಬೆಟ್ಟ ಸ್ವಾಭಿಮಾನದ ಬಯಲು
ಉತ್ತಷ್ಟು ಫಸಲು ನೀಡಿದ ಹೊಲ
ಉಡಿಯ ತುಂಬ ಪರಿಮಳವಾಗಿ ಅಪ್ಪ ಬಹುವಾಗಿ ಕಾಡಿದ

*****

13 thoughts on “ಅಪ್ಪ ಕಾಡಿದ

  1. ಕಾಡುವ ಅಪ್ಪನ ನೆನಪುಗಳನ್ನು ಬರಹದಲ್ಲಿ ಮಾರ್ಮಿಕವಾಗಿ
    ಜೋಡಿಸಿದಿರಿ.
    ಅಪ್ಪ ನು ತಾಯಿಯೊಂದಿಗಿನ ಸಂಬಂಧವನ್ನು ಕೂಡ ತುಂಬಾ ಸೂಕ್ಷ್ಮ ವಾಗಿ ಹೊಣೆಗಾರಿಗೆ ಯನ್ನು ಸಂಬಳದಲ್ಲಿ ಮತ್ತು ಒಲವಿಗಾಗಿ ಮಲ್ಲಿಗೆಯ ಪರಿಮಳದೊಂದಿಗೆ ಅಪ್ಪನನ್ನು ಕವಿತೆಯಲ್ಲಿ ಕಟ್ಟು ಹಾಕಿದಿರಿ.
    ನಿಜಕ್ಕೂ ಅಪ್ಪ ಕವಿತೆಯಲ್ಲಿ ಓದುಗನಿಗೂ ಕಾಡುವುದಂತು ಸತ್ಯ.

  2. ಕಾಡುವ ಅಪ್ಪನ ನೆನಪುಗಳನ್ನು ಬರಹದಲ್ಲಿ ಮಾರ್ಮಿಕವಾಗಿ
    ಜೋಡಿಸಿದಿರಿ.
    ಅಪ್ಪ ನು ತಾಯಿಯೊಂದಿಗಿನ ಸಂಬಂಧವನ್ನು ಕೂಡ ತುಂಬಾ ಸೂಕ್ಷ್ಮ ವಾಗಿ ಹೊಣೆಗಾರಿಗೆ ಯನ್ನು ಸಂಬಳದಲ್ಲಿ ಮತ್ತು ಒಲವಿಗಾಗಿ ಮಲ್ಲಿಗೆಯ ಪರಿಮಳದೊಂದಿಗೆ ಅಪ್ಪನನ್ನು ಕವಿತೆಯಲ್ಲಿ ಕಟ್ಟು ಹಾಕಿದಿರಿ.
    ನಿಜಕ್ಕೂ ಅಪ್ಪ ಕವಿತೆಯಲ್ಲಿ ಓದುಗನಿಗೂ ಕಾಡುವುದಂತು ಸತ್ಯ.

    1. ಕವಿತೆಯ ಅಂತರಾಳದ ಭಾವ ಗ್ರಹಿಕೆಗೆ ಧನ್ಯವಾದಗಳು

      1. ಅಪ್ಪ ಕಾಡಿದ ಈ ಕವಿತೆ ತುಂಬಾ ಚೆನ್ನಾಗಿದೆ

  3. ತುಂಬಾ ಚೆನ್ನಾಗಿದೆ, ಅಪ್ಪನ ಜೀವನ ಯಾನ ಹಾಗೆ

Leave a Reply

Back To Top