ಅಂಕಣ ಬರಹ

ದೀಪದ ನುಡಿ

ಗೆಲ್ಲುವುದು ಬೆಳಕೇ

Hands, Open, Candle, Candlelight, Prayer

ಒಳಿತು-ಕೆಡುಕುಗಳು‌ ಇಲ್ಲದೆ ಈ ಜಗತ್ತಿಲ್ಲ. ಇಲ್ಲಿ ಅಳತೆಗಳು ಮಾತ್ರಾ ಸಾಪೇಕ್ಷವೇ ಹೊರತು ಒಳತು-ಕೆಡುಕುಗಳಲ್ಲ. ಒಳಿತು ಕೆಡುಕುಗಳಿಲ್ಲವೇ ಇಲ್ಲ ಎಂದು ವಾದಿಸುವವರೂ ಇದ್ದಾರೆ ನಮ್ಮ ನಡುವೆ. ಆದರೆ ಹಾಗೆ ವಾದಿಸಿದವರೆಲ್ಲ ಬಹುತೇಕ ಯಾವುದೋ ಸಂದರ್ಭದಲ್ಲಿ ಕೆಡುಕಿಗೆ ಬಲಿಯಾಗಿ ನೋಯಬಹುದು ಅಥವಾ  ಇತರರಿಗೂ ಕೆಡುಕು ಮಾಡಲೂಬಹುದು.

ಮಾನಸಿಕವಾಗಿ, ದೈಹಿಕವಾಗಿ , ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂಸಿಸುವುದನ್ನೇ ಕೆಡುಕು ಎಂದು ಬಹಳ ಸರಳವಾಗಿ ಹೇಳಬಹುದು.ದೊಡ್ಡ ದೊಡ್ಡ ವ್ಯಾಖ್ಯಾನದ ಅವಶ್ಯಕತೆಯೇ ಇಲ್ಲ. ಬಹಳಷ್ಟು ಸಲ ಸಜ್ಜನರೇ ಕೆಡುಕಿಗೆ ಬಲಿಯಾಗಿ ಪರಿತಪಿಸುವುದು. ದುರ್ಜನರ ಅಟ್ಟಹಾಸಕ್ಕೆ ಸಾಕ್ಷಿಯಾಗುವುದು. ಇಷ್ಟೆಲ್ಲ ಕೆಡುಕು ಮಾಡಿದವರು ಚೆನ್ನಾಗಿಯೇ ಇದ್ದಾರೆ .ನಾನು ಯಾರಿಗೂ ಏನೂ ಕೆಡುಕು ಮಾಡದಿದ್ದರೂ ,ಕೆಡುಕ ಬಯಸದಿದ್ದರೂ ನನಗೇ ಈ ಕಷ್ಟ? ಜಗತ್ತಿನಲ್ಲಿ ಯಾವಾಗಲೂ ಒಳ್ಳೆಯತನವೇ ಕಷ್ಟಕ್ಕೆ ಈಡಾಗುವುದೇಕೆ ಎನ್ನುವುದು ಬಹಳ ಜನ ನೊಂದವರ ಪ್ರಶ್ನೆ.

   ಕೆಡುಕು ಮೊದಲು ವಿಜೃಂಭಿಸಿದರೂ ಕೊನೆಗೆ  ಗೆಲ್ಲುವುದು ಒಳಿತೇ. ಕೆಡುಕಿಗೆ ಹೇಗೆ  ಬೆಂಬಲವಿದೆಯೋ ಹಾಗೇ  ಜಗತ್ತಿನಲ್ಲಿ ಒಳಿತಿಗೂ ಬೆಂಬಲವಿದೆ.ಒಳತು ನಿರಾಸೆಗೊಳಗಾಗಬೇಕಾದ ಅವಶ್ಯಕತೆಯಿಲ್ಲ..ಒಳಿತಿನಿಂದ ಏನೂ ಲಾಭವಿಲ್ಲ ಬರಿದೆ ಕಷ್ಟ ಎಂದುಕೊಂಡು ಕೆಡುಕಿನ ಹಾದಿ ತುಳಿದರೆ ಅಲ್ಲಿಗೆ ಕೆಡುಕು ಮತ್ತೂ ಅಟ್ಟಹಾಸಗೈಯುತ್ತದೆ. ಒಳಿತಿನ ಗೆಲುವಿಗೆ  ಸಂಯಮ ಬೇಕು.ದೃಢ ಮನಸ್ಸು ಬೇಕು, ಗೆಲ್ಲುವ ಛಲ , ಆತ್ಮವಿಶ್ವಾಸ ಬೇಕು..ಇದಾವುದೂ ಕೆಡುಕಿನ ಬಳಿ‌ಖಂಡಿತಾ ಇಲ್ಲ.ಕೆಡುಕಿನ ಮಿತ್ರರೆಂದರೆ ಅಹಂಕಾರ, ಸುಳ್ಳು ವಂಚನೆ ಭಯ ಮಾತ್ರಾ.  ಸಂಜೆ ಅಸ್ತವಾದ ಸೂರ್ಯ ಮತ್ತೆ ಮುಂಜಾವು ಉದಯಿಸುವಂತೆ ಕೆಲಕಾಲ ಒಳಿತು ಮರೆಗೆ ಸರಿದರೂ ಯುಕ್ತ ಕಾಲ ಬಂದಾಗ ಹೊರಹೊಮ್ಮಿ  ನಸುನಗುತ್ತದೆ.

  ಒಳೆತನ್ನೂ ಬೆಳಕಿಗೂ ,ಕೆಡುಕನ್ಮೂ ಕತ್ತಲೆಗೂ ಹೋಲಿಸುವು ತೀರಾ ಸಹಜ..ಈ ಹಿನ್ನಲೆಯಲ್ಲಿ ಈ ಒಂದು ಪುಟ್ಟ ಕಥೆ ನೆನಪಾಗುತ್ತಿದೆ.

ಅಲ್ಲೊಂದು ದೀಪ ಇತ್ತು. ಆ ದೀಪ‌ ಬೆಳಗಕ್ಕೆ ಬೇಕಾದ ಎಣ್ಣೆ ಬತ್ತಿ ಗಾಳಿ ಎಲ್ಲಾ ದೀಪದಿಂದಲೇ ಉತ್ಪತ್ತಿ ಆಗ್ತ ಇತ್ತು. ಜೊತೆಗೇ ದೀಪದ ಬೆಳಕು ಬೇಕೆನ್ನುವವರೂ ಹೇರಳವಾಗಿ ಎಣ್ಣೆ , ಬತ್ತಿ ಎಲ್ಲಾ ಕೊಡ್ತಾ ಇದ್ದರು.ದೀಪ ಸದಾ ಶಾಂತವಾಗಿ ಬೆಳಕು ಬೀರುತ್ತಾ ತನ್ನ ಪಾಡಿಗೆ ತಾನು ಇರುತ್ತಿತ್ತು. ಕತ್ತಲಿಗೆ ದೀಪವನ್ನು ಕಂಡರಾಗದು .ಏನಾದರೂ ಮಾಡಿ ಈ ದೀಪವನ್ನು ಅದರ ಬೆಳಕಿನ ಸಮೇತ ನಾಶ ಮಾಡಬೇಕೆನ್ನುವ ವಿನಾಕಾರಣದ ಮತ್ಸರ,  ದ್ವೇಷ ಕತ್ತಲಿನದ್ದು. ದೀಪ ಎದುರಿಗೆ ಬಂದು ನಿಂತರೆ ಅಸ್ತಿತ್ವವೇ ನಾಶ ಆಗೋ ಭಯ ಕತ್ತಲಿಗಿತ್ತು. ಹಾಗಾಗಿ ಅದು ಸದಾ ದೀಪದ ಬುಡದಲ್ಲೇ ಅವಿತುಕೊಂಡು ಸಮಯ ಕಾಯ್ತಾ ಇರುತ್ತಿತ್ತು.

      ಅರೇ, ಬಂದವರೆಲ್ಲ ಈ ದೀಪದ ಬೆಳಕನ್ನೇ ನೋಡುತ್ತಾರಲ್ಲ.ನಾನಿವರ ಕಣ್ಣಿಗೆ ಕಾಣುವುದೇ ಇಲ್ಲವೇ …ಜಗತ್ತೆಂದರೆ ಬೆಳಕು ಮಾತ್ರವೆ? ಕತ್ತಲೆಗೆ ಬೆಲೆಯೇ ಇಲ್ಲವೇ ..ಇಲ್ಲ ಈ ದೀಪ ಎಲ್ಲರನ್ನೂ ಮರುಳು‌ ಮಾಡಿಬಿಟ್ಟಿದೆ …ಎಲ್ಲರೂ ತನ್ನ ಬಳಿಗೇ ಬರುತ್ತಾರೆಂಬ ಅಹಂಕಾರ ಬಹಳ ಇದೆ. ಏನಾದರೂ ಮಾಡಿ ಇದನ್ನ ಆರಿಸಿ ಬುದ್ಧಿ ಕಲಿಸಬೇಕು ಎಂದು ಬಹಳ ಯೋಚಿಸಿತು.ಕೊನೆಗೆ ಒಂದು ಉಪಾಯ ಹೊಳೆದು 

” ಗಾಳಿಯೇ ಜೋರಾಗಿ ಬೀಸಿ ಬಿಡು , ಈ ದೀಪ ಆರಿ ಹೋಗಲಿ‌” ಅಂತ  ಕತ್ತಲೆ ಒಮ್ಮೆ ಗಾಳಿಯನ್ನು ಕೇಳಿತು.

        ಗಾಳಿ ನಸು ನಕ್ಕಿತು. ” ಅಯ್ಯಾ ಕತ್ತಲೆಯೇ ನಾನು ಯಾರ ಅಣತಿಯ ಮೇರೆಗೂ ಚಲಿಸುವವನಲ್ಲ..ಇಷ್ಟಕ್ಕೂ ನಾನು ಜೋರಾಗಿ ಬೀಸಿದರೆ ಹತ್ತಾರು ಕೈಗಳು ಆ ದೀಪವನ್ನ ರಕ್ಷಿಸುತ್ತವೆ. ಬೆಳಕನಾರಿಸುವ ಬಯಕೆ ಒಳ್ಳೆಯದಲ್ಲ ಬಿಡು ” ಎಂದು ಹೇಳಿ ಮೆಲುವಾಗಿ  ಹಾರಿ ಹೋಯಿತು.

      ಕತ್ತಲೆಗೆ ನಿರಾಸೆಯಾದರೂ ದ್ವೇಷ ಮಾತ್ರಾ ತಣಿಯಲಿಲ್ಲ. ” ಬತ್ತಿಯೇ ನೀನು ಕರಟಿಹೋಗು …ಈ ದೀಪ‌ ಆರಿ ಹೋಗಲಿ ” ಎಂದು ಕತ್ತಲೆ ಒಮ್ಮೆ ಬತ್ತಿಯನ್ನು ಕೇಳಿತು.

      ಬತ್ತಿ ನಸು ನಕ್ಕಿತು.” ಅಯ್ಯಾ ಕತ್ತಲೆಯೇ ನಾನಿರುವುದೇ ಉರಿಯಲು..ಹೇಗೆ ಕರಟಲಿ? ಕರಟಿದರೆ ನಾನೇ ಬೂದಿಯಾಗುವೆನಲ್ಲ…ಬೆಳಕ ನಂದಿಸಲು ಹೋಗಿ ನಾನೇ ಇಲ್ಲವಾಗಿಬಿಡುವೆ ..ಅಷ್ಟಕ್ಕೂ ಇಂತಹಾ ದುರ್ಬುದ್ಧಿ ನಿನಗೇಕೆ ? ” ಎಂದು ಕೇಳಿತು.

       ಕತ್ತಲೆ ಉತ್ತರಿಸದೆ ಮೊಗ ತಿರುವಿತು.

“ಎಣ್ಣೆಯೇ ನೀನು ಈ ಬತ್ತಿಗೆ ಶಕ್ತಿ ಕೊಡುವುದನ್ನು ನಿಲ್ಲಿಸಿಬಿಡು ..ಹಾಗಾದರೂ ದೀಪ‌ ಆರಿ ಹೋಗಲಿ” ಎಂದು ಕತ್ತಲೆ ಒಮ್ಮೆ ಎಣ್ಣೆಯನ್ನು ಕೇಳಿತು.

     ಎಣ್ಣೆ ಗಲಗಲನೆ ನಕ್ಕಿತು.” ಅಯ್ಯಾ ಕತ್ತಲೆಯೆ ಈ ಬತ್ತಿಯನ್ನು ನಾನು ಎದುರಿಸುವುದೆ? ನನ್ನ ಅಸ್ತಿತ್ವವೇ ಈ ಬತ್ತಿ..ಬತ್ತಿಯಿಲ್ಲದಿರೆ ನಾನೇನೂ ಅಲ್ಲ..ಅಷ್ಟಕ್ಕೂ ಬೆಳಕ ಕಂಡರೆ ನಿನಗೇಕೆ ದ್ವೇಷ? ಬಿಟ್ಟು ಬಿಡು” ಎಂದು ಬುದ್ಧಿ ಹೇಳಿತು.   

        ಕತ್ತಲೆಗೆ ಅಸಹಾಯಕತೆ , ರೋಷ ಎಲ್ಲಾ ಸೇರಿ ಮೈ ಪರಚಿಕೊಳ್ಳುವಂತಾಯಿತು. ಬಹಳಷ್ಟು ಯೋಚಿಸಿ ಅಲ್ಲೇ ಹರಿಯುತ್ತಿದ್ದ ನೀರಿನ ಬಳಿಗೆ ಹೋಯಿತು.

” ನೀರೇ ನೀರೇ …ನೀನಾದರೂ ನನಗೆ ಸಹಾಯ ಮಾಡು. ಬೆಳಕಿದ್ದರೆ ನಿನ್ನಲ್ಲಿನ ಕಸ ಕಡ್ಡಿ ಎಲ್ಲಾ ಕಾಣುತ್ತದೆ .ಅದೇ ಕತ್ತಲೆ , ನಾನಿದ್ದರೆ ನಿನ್ನ‌ ನಿಜರೂಪ ಕಾಣುವುದೇ ಇಲ್ಲ..ಒಮ್ಮೆ ಉಕ್ಕಿ ಆ ದೀಪದ ಮೇಲೆ ಹರಿದು ಬಿಡು …” ಎಂದು ಕೇಳಿಕೊಂಡಿತು.

         ನೀರಿಗೇನು ? ಯಾವ ಪಾತ್ರೆಗೆ ಹಾಕಿದರೂ ಅದರ ಆಕಾರ ತಳೆವುದಷ್ಟೆ ಗೊತ್ತಿತ್ತು.. ಅದಕ್ಕೆ ಉರಿಯುತ್ತಿರುವ ದೀಪದ ಮೇಲಾವ ಮತ್ಸರವೂ ಇರಲಿಲ್ಲ. ಆದರೂ ಹರಿವುದೇ ಸ್ವಭಾವವಾಗಿ ಕತ್ತಲಿನ ಮಾತಿಗೆ ಹೂಂಗುಟ್ಟಿ ಒಮ್ಮೆಲೇ ಉಕ್ಕಿ ಹರಿಯಿತು.ಅಲ್ಲಿಯವರೆಗೂ ಶಾಂತವಾಗಿ ಬೆಳಗುತ್ತಿದ್ದ ದೀಪ ನೀರಿನ ಆರ್ಭಟ ಎದುರಿಸಲಾಗದೇ ಫಕ್ಕನೇ ಆರಿಹೋಯಿತು.

                ಕೂಡಲೇ ಹತ್ತಾರು ಕೈಗಳೆದ್ದು ಬಂದವು ..ಅದೇ ನೀರಿನಿಂದ ಮಣ್ಣ ಕಲೆಸಿ ದೀಪ ಮಾಡಿದವು.ಗಾಳಿ ನೀರನ್ನೆಲ್ಲ ಹೀರಿ ಒದ್ದೆ ದೀಪವ ಒಣಗಿಸಿತು.ನೋಡನೋಡುತ್ತಿದ್ದಂತೇ ದೀಪದಲ್ಲಿ ಎಣ್ಣೆ , ಬತ್ತಿ ಮೂಡಿದವು..ದೀಪ‌ ಮತ್ತೆ ಎಂದಿನಂತೆ ಉರಿಯತೊಡಗಿತು…

         ಕತ್ತಲೆ ಮತ್ತೆ ದೀಪದ ಬುಡದಲ್ಲಿ ಅವಿತು ಕುಳಿತು ಸಂಚು ಮಾಡತೊಡಗಿತು.

       ಅಂದಿನಿಂದಲೂ ಒಂದು ದೀಪವಾರಿದರೂ ಇನ್ನೊಂದು ದೀಪ ಉರಿಯುತ್ತಲೇ ಇದೆ. ಒಂದಲ್ಲ ,ಹತ್ತಲ್ಲ ನೂರಲ್ಲ ,ಸಾವಿರ ದೀಪಗಳುರಿದರೂ ಅವುಗಳ ಬುಡದಲ್ಲಿ ಕತ್ತಲೆ ಅವಿತು ಕುಳಿತು ಬೆಳಕನಾರಿಸಲು ಹೊಂಚು ಹಾಕುತ್ತಲೇ ಇದೆ..

             ಬೆಳಕಿಗೂ ಕತ್ತಲೆಗೂ ನಿರಂತರ ಯುದ್ಧ ನಡೆಯುತ್ತಲೇ ಇದೆ.

          ದೀಪ ಬೆಳಗುತ್ತಲೇ ಇದೆ.

ಕತ್ತಲೆಯನ್ನು ತುಳಿದೇ ನೆಳಕು ನಿಲ್ಲಬೇಕು

ಕತ್ತಲೆಯನ್ನು ಸೀಳಿಯೇ ಬೆಳಕು ಹೊಮ್ಮಬೇಕು.

************************

                                    ದೇವಯಾನಿ

ಕಾಲೇಜು ದಿನಗಳಿಂದ ದೇವಯಾನಿ ಹೆಸರಿನಲ್ಲಿ ಕಥೆ ,ಕವನ ,  ಅನುವಾದಿತ ಕಥೆ , ಪ್ರಬಂಧ ಬರೆಯುತ್ತಿದ್ದು ತುಷಾರ, ಮಯೂರ ,ಕಸ್ತೂರಿ , ಪ್ರಜಾವಾಣಿ, ವಿಕ್ರಮ , ಉತ್ಥಾನ, ಉದಯವಾಣಿ, ತರಂಗ ,ವಿಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವೃತ್ತಿಯಿಂದ ಗಣಿತ ವಿಜ್ಞಾನ ಪ್ರೌಢಶಾಲಾ ಶಿಕ್ಷಕಿ.ಇಪ್ಪತ್ತನಾಲ್ಕು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಹಲವಾರು ಸಂಪನ್ಮೂಲ ಸಾಹಿತ್ಯವನ್ನು ರಚಿಸಿದ್ದು ಹಲವಾರು ರಾಜ್ಯಮಟ್ಟದ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಶಾಲಾ ಮಕ್ಕಳಿಗಾಗಿ ” ಧರೆಯನುಳಿಸುವ ಬನ್ನಿರಿ, ಮೂರು ವೈಜ್ಞಾನಿಕ ನಾಟಕಗಳು” , “ತುಟಿ ಬೇಲಿ ದಾಟಿದ ನಗು” ಕವನ ಸಂಕಲನ ,  “ತುಂಡು ಭೂಮಿ ತುಣುಕು ಆಕಾಶ”  ಕಥಾ ಸಂಕಲನ ಪ್ರಕಟಿಸಿದ್ದು ಅನುವಾದಿತ ಕಥಾ ಸಂಕಲನ ಅಚ್ಚಿನಲ್ಲಿರುತ್ತದೆ

2 thoughts on “

  1. ಧನ್ಯವಾದಗಳು ಮೇಡಂ., ತಮ್ಮ ಅಭಿಮಾನ ಹೀಗೇ ಇರಲಿ

Leave a Reply

Back To Top