ಹೀಗೊಂದು ಅ’ಮರ’ ಕಥೆ

ಅಪ್ಪನ ದಿನ

ಹೀಗೊಂದು ಅ’ಮರ’ ಕಥೆ

ಮಮತಾ ಶಂಕರ್

Father Son - Madison Gregory | Father art, Father images, Mom art

-1-
ಆಳವಾಗಿ ಬೇರುಬಿಟ್ಟು ವಿಶಾಲವಾಗಿ ಹರಡಿಕೊಂಡ
ಹಿರಿಯ ಮರವೊಂದು ಅಪ್ಪನ ಮುಖ ಹೊತ್ತು ಕಾಡಲಾರಂಬಿಸಿತು
ಗಟ್ಟಿ ಬೇರು ನೆಟ್ಟು ನೆಲ ಭದ್ರ ಹಿಡಿದು
ನಿಂತ ಮರಕ್ಕೆ ಗೆದ್ದಲು ಹತ್ತಿದ್ದು
ಒಳಗಿಂದ ಎಲ್ಲಿ ಹೇಗೆ….ಯಾವಾಗ?

ಆಹಾರ ಔಷಧಗಳ ನಿಯಮಕ್ಕೆ
ಹೌಹಾರಿ ದಣಿದ ದೇಹ ಸೋಲೊಪ್ಪದ ಮನಸು
ಯಾರು ಎಷ್ಟೇ ಕೊಡಲಿಪೆಟ್ಟು ಕೊಟ್ಟರೂ
ಮತ್ತೆ ಮತ್ತೆ ಚಿಗುರೊಡೆದು ಹೂ ಹಣ್ಣು ನೀಡಿ
ಬೆಳೆದು ಹರಡಿ ತಣ್ಣೆಳಲು ಚೆಲ್ಲಾಡಿ
ನೂರಾರು ಗೂಡುಗಳಿಗೆ ನೆಲೆಯಾಗಿ ನಿಂತು ನಕ್ಕ ಮರ
ಒಳಗೊಳಗೆ ಕುದಿವ ನದಿಯ ಎದೆಗೆ
ಹರಿಯ ಬಿಟ್ಟುಕೊಂಡಿದ್ದು ಹೇಗೆ ಯಾವಾಗ ?


-2-
ಮನೆಯ ಒಡನಾಡಿಗಳು ಒಬ್ಬೊಬ್ಬರಾಗಿ ಚಿರವಾಗಿ
ಶಾಂತವಾಗುವ ವೇಳೆ ಹೃದಯ ವೇದನೆ
ಮೀರಿ ಹೆಣಗಳಿಗೆ ಹೆಗಲಾಗಿ
ದುಃಖ ಮೀರಿದ್ದು ಹೇಗೆ?
ಇನ್ನಷ್ಟು ಮತ್ತಷ್ಟು ಗಟ್ಟಿ ಕಾಲೂರಿ
ಬದುಕಲ್ಲಿ ಬರುವುದು ಬರುತಿರಲಿ ಸಾಗಿಯೇ ತೀರುವೆನೆಂದು
ಕರುಳ ಕುಡಿಗಳ ಹೊತ್ತು ನೆಲೆಗಾಣಿಸುವೆ ಎಂದು
ನಡೆದೇ ನಡೆದ…. ಹಾದಿ ಮಸುಕಾಗುವ ತನಕ
ಜೀವ ದಣಿಸಿ, ಕಾಲು ಸೋಲಿಸಿದ ಸಮಯ
ದುಡಿದು ಬಳಲಿದ ಒಡಲಿಗೆ
ಅಂಟಿಕೊಂಡು ಜೊತೆಯಾದ ಒಂದೊಂದೇ
ರೋಗ… ನಿತ್ರಾಣ, ಬಳಲಿಕೆಗೆ
ದೂಡಿ ದಣಿಸಿತು ವಿಧಿ ಹೇಗೆ ಯಾವಾಗ ?


-3-
ಸತ್ತರೂ ಸುಡಲಾಗದು ಸ್ವಾಭಿಮಾನದ ಮಂತ್ರ,
ಕೊಂಚ ಮೊಂಡು , ಬುದ್ಧಿ ಜಿದ್ದಿನ ಜೀವ
ನೋವಿಗೆ ಕರಗಿ ಹೋಗುವ ಬೆಣ್ಣೆ ಹೃದಯ
ತಾಯಂತ ಮಮಕಾರ, ಪ್ರೀತಿ ಒಲವಿಗೆ ಮೆಲ್ಲಗೆ
ತಲೆಬಾಗಿ ಶರಣಾಗುವ ಸಿಟ್ಟು, ಹಟಮಾರಿ ಅಹಂಕಾರ…
ಅರಿತವರಿಗೆ ಅರಸ ನನ್ನಪ್ಪ
ಅರಿಯದವರಿಗೆ ಕೇವಲ ಮನುಷ್ಯ ….
ಒಳಗೊಳಗೆ ನೋಯುವ ಬೇಯುವ ನಾಜೂಕು ಮನಸು
ತೋರಿಕೆಗೆ ಕಟುಮಾತು; ಎದೆಯೊಳಗೆ ಮಿದುಭಾವ
ಮುಗ್ಧ ಮಗುವಿನ ನಗುವ ರೂಪ


-4-
ಸದಾ ಮಾತಿಗೆ ಹಪಹಪಿಸುವ ದನಿಯೊಂದು
ಇನ್ನು ಮಾತು ಸಾಕೆಂದು ನಿಲ್ಲಿಸಿದೆ
ಸದಾ ಎಚ್ಚರಿಸುವ ಎಚ್ಚರಿಕೆಯ ಗಂಟೆ
ಇನ್ನು ಸದ್ದಿಲ್ಲದೆ ಮಲಗಿದೆ
ಸದಾ ಸಾಂತ್ವನ ಭರವಸೆಗಳಿಗೆ ತೆರೆದ ಹೃದಯ
ಇನ್ನು ನೆನಪುಗಳ ಮಡಿಲಿಗೆ ಸೇರಿದೆ
ಸದಾ ಬೆಳಗುವ ಮನೆಯ ನಂದಾದೀಪ
ಇನ್ನು ಎಣ್ಣೆ ತೀರಿ ತಣ್ಣಗಿದೆ
ಸದಾ ಮನೆಯ ಕಾಯ್ವ ದೈವರೂಪ
ಇನ್ನು ದೇವರಾಗೇ ಹೋಗಿದೆ

ದೇವರಿಲ್ಲದ ಗರ್ಭಗುಡಿ ನನ್ನ ತವರೀಗ
ಕಾಲಗರ್ಭದಲಿ ಎಲ್ಲ ಲೀನವಾಗುವುದು
ಪ್ರಭುವೆ,
ಈ ನೋವು,ಈ ಸಾವು
ಅಡಗಲಿ ಮರೆವಿನ ಬಾಗಿಲಾಚೆ
ಮತ್ತೆ ನನ್ನಪ್ಪ ತವರಿನ ತನ್ನ
ಕುಡಿಗಳಲಿ ಸದಾ ಉಸಿರಾಗಿ ಅರಳಲಿ
ಕನಸು ಚಿಗುರೊಡೆದು ತಂಬೆಲರ ತೀಡಲಿ
ಅಲ್ಲಿ ತನಕ ದೇವರೆ
ಜೀಕಲಿ ಈ ಜೀವ ನೆನಪಿನ ಜೋಕಾಲಿಯಲಿ

************************

21 thoughts on “ಹೀಗೊಂದು ಅ’ಮರ’ ಕಥೆ

    1. ತೀವ್ರ ಸಂವೇದನೆಯಿಂದ ಕೂಡಿದ ಕವನ
      -ಪ್ರಿಯಭಾಷಿಣಿ

      1. ಧನ್ಯವಾದಗಳು ಮೇಡಂ ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ

  1. ತುಂಬಾ ಚೆನ್ನಾಗಿದೆ ರಿ
    ಕವಿತೆ

    ಧನ್ಯವಾದಗಳು

    ಯಮುನಾ

  2. ಹೀಗೊಂದು ಅ ಮೂರು ಕಥೆ
    ಕವನದ ಶೀರ್ಷಿಕೆ ಅಷ್ಟೆ ಕವನವು ವಿಶಿಷ್ಟ.ಮರವನ್ನು ಪ್ರತಿಮೆಯಾಗಿ ಬಳಸಿ ಅಪ್ಪನೊಂದಿಗಿನ ಭಾವ ಲೋಕ ತೆರೆದಿಟ್ಟ ಬಗೆ ಅನನ್ಯ. ದೇವರಿಲ್ಲದ ಗರ್ಭ ಗುಡಿಯಿಗ ನನ್ನ ತವರು ಎನ್ನುವ ಸಾಲುಗಳು ಅಪ್ಪನ ಅನುಪಸ್ಥಿತಿಯನ್ನು ಅರಗಿಸಿಕೊಳ್ಳದ ಹೆಣ್ಣು ಮಕ್ಕಳಲ್ಲಿ ಕಣ್ಣಹನಿಯೊಡೆಯುವಂತೆ
    ಮಾಡುತ್ತದೆ….. ಭಾವಸ್ಪರ್ಶೀ ಕವನ

    1. ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ

  3. ಕಾಡುವ ಕವಿತೆ ಮಮತಾ,ಕಣ್ಣಂಚು ಒದ್ದೆಯಾಯಿತು

  4. ನನ್ನದೇ ನೋವು.
    ಅದೇ ಮುಖ.
    ಅದೇ ಮಮತೆ
    ದುಃಖವಾಯ್ತು .
    ಮಮತಾ.

    ಚೆನ್ನಾಗಿ ಕಟ್ಟಿಕೊಟ್ಟಿದ್ದಿರಿ.

    1. ಥ್ಯಾಂಕ್ಯೂ ರೇಖಾ…. ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ

Leave a Reply

Back To Top