ಗಜಲ್ ಜುಗಲ್ ಬಂದಿ-==04
ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ
ಗಜಲ್-04
ಈಗ ಅರ್ಥವಾಯಿತು ನೀ ಬಯಸಿದ್ದು ಇಷ್ಟೇ ಎಂದು
ನನ್ನೊಳಗು ಅರುಹಿತು ನೀ ಕಂಡಿದ್ದು ಇಷ್ಟೇ ಎಂದು
ನೀನಿತ್ತ ಪಾತ್ರೆಯ ಆಳವರಿಯದೆ ನಾ ವಾಸಿಯಾದೆ
ಹೊರಚೆಲ್ಲಿದಾಗ ತಿಳಿಯಿತು ನೀ ಬೇಡಿದ್ದು ಇಷ್ಟೇ ಎಂದು
ಮೋಡಗಳ ಕಂಡು ಬುವಿ ಹಿಗ್ಗಿ ಸಜ್ಜಾಗುವುದು ತಪ್ಪೇ?
ಇದ್ದ ಸಾರವೂ ಒಣಗಿ ಕೂಗಿತು ನೀ ಇಳಿದಿದ್ದು ಇಷ್ಟೇ ಎಂದು
ಬೀದಿಯಲಿ ಕಿನ್ನರಿ ನುಡಿಸುವ ಗೊಲ್ಲ ಒಳಮನೆಯಲಿ ನಿಲ್ಲುವನೇ..?
ಮನಕ್ಕಿಳಿಯದ ರಾಗ ಹೇಳಿತು ನೀ ಹಾಡಿದ್ದು ಇಷ್ಟೇ ಎಂದು
ಏನನ್ನೂ ಸುತ್ತಿ ಬಯಸದ ‘ರೇಖೆ’ ನಿನ್ನೇನ ಬೇಡಿತು ಹೇಳು
ಹೃದಯ ಸೋತು ನುಡಿಯಿತು ನೀ ದಕ್ಕಿದ್ದು ಇಷ್ಟೇ ಎಂದು
ರೇಖಾ ಭಟ್…
***********
ಎಂದೋ ಅರಿತಿದ್ದೆ ನಿನ್ನ ಪ್ರೀತಿ ಇಷ್ಟೇ ಎಂದು
ನನ್ನ ಸೋಲಿಗೂ ಒಳಗಿನ ನೀತಿ ಇಷ್ಟೇ ಎಂದು/
ಮುಚ್ಚಿದ ಕೆಂಡದ ಬಿಳಿ ನುಣುಪು ಅರ್ಥವಾಗಲಿಲ್ಲ
ಸನಿಹ ಬಂದು ಬೆಚ್ಚಿದೆ ನನ್ನ ಗತಿ ಇಷ್ಟೇ ಎಂದು/
ಹೇಳುತ್ತಾರೆ ಮಳೆಯು ಕೊಳೆ ತೊಳೆಯುತ್ತದೆ ಎಂದು
ಮರೆತ ಅಬ್ಬರದಲಿ ತಿಳಿದೆ ನಿನ್ನ ಮತಿ ಇಷ್ಟೇ ಎಂದು/
ಎದೆ ಕದವ ತೆರೆದು ಬರಮಾಡಿಕೊಂಡಿದ್ದು ಮೋಜಿಗಲ್ಲ
ಮಮತೆ ಇರದ ಹೃದಯ ಮೀಟಿದ ಜತಿ ಇಷ್ಟೇ ಎಂದು/
ನಿನ್ನನ್ನೇ ಕಾದುಕುಳಿತ “ಸ್ಮಿತ”ಮೌನವಾಗಿದೆ ಇಂದು
ಅರಿತೆ ಅನಂತ ಪ್ರೀತಿಗೆ ಸಿಗುವ ಅಣತಿ ಇಷ್ಟೇ ಎಂದು/
ಸ್ಮಿತಾ ಭಟ್
ಪದಗಳ ಜೋಡಣೆ ತುಂಬಾ ಸೋಗಸಾಗಿದೆ. ಅರ್ಥ ಪೂರ್ಣ ಲೇಖನ.
ಬಹಳ ಚೆಂದ ಇದೆ ಇಬ್ಬರ ಜುಗಲ್ ಬಂದಿ.
ಬಹಳ ಚಂದದಜುಗಲ್ಬಂದಿ
ಚೆಂದದ ಜುಗಲ್ಬಂದಿ
ಚಂದದ ಜುಗಲ್ ಬಂದಿ
Sundarvagide shubhavagali
ಓಹ್.. ತುಂಬಾ ಚಂದ ಈ ಗಜಲ್ ಬಂಧ. ಇಬ್ಬರಿಗೂ ಅಭಿನಂದನೆಗಳು