ಕವಿತೆ
ಸತ್ತು ಹೋಗುವುದೇ ಸಾವಲ್ಲ!
ಸಂಗಮೇಶ್ವರ ಶಿ.ಕುಲಕರ್ಣಿ
ಬರೀ ಸತ್ತು ಹೋಗುವುದು
ಮಾತ್ರವೇ ಸಾವಲ್ಲ!
ಉಸಿರು, ಎದೆಬಡಿತ ನಿಂತು ಹೋಗುವುದು
ಮಾತ್ರವೇ ಸಾವಲ್ಲ!!
ಕಣ್ಣ ಮುಂದೆ
ಕಷ್ಟ ಅನುಭವಿಸುವವರ ಕಂಡು
ಮರುಗದಿರುವುದೂ…
ಸಾವೇ.
ಹೆತ್ತವರ ಹೆಸರು
ಮುಕ್ಕು ಮಾಡಿ, ನೆಮ್ಮದಿಗೆ ಹುಳಿ ಹಿಂಡಿ
ನೀ ನಕ್ಕರೆ ಅದೂ…
ಸಾವೇ.
ಕೈಲಾಗದವರು ಕೈಮುಗಿದು,
ಕೆಲಸಮಾಡಿಕೊಡಿ ಎಂದಂಗಲಾಚಿದಾಗ
ಲಂಚದ ಹೇಸಿಗೆಗೆ ಬಾಯ್ದೆರೆದರೂ…
ಸಾವೇ.
ಜಾತಿ ಧರ್ಮದ ಕಿಡಿಯಿಂದ
ಸಮಾಜದ ಸಾಮರಸ್ಯವನ್ನೇ
ನಿನ್ನನುಕೂಲಕ್ಕೆ ಸುಟ್ಟರೆ… ಅದೂ
ಸಾವೇ.
ನೆಲದವ್ವನ ಮಡಿಲಲ್ಲಿ
ಬಿತ್ತಿ ಬೆಳೆತೆಗೆದು ಅನ್ನ ಇತ್ತವನ
ಕಣ್ಣ ತಂಬಲು ಮಾಡಿದರೂ…
ಸಾವೇ.
ಜೀವವೇ ಆಗಿರುವ ಪ್ರಾಣಸಖಿ
ತಾತ್ಸಾರದಲಿ ಬೆನ್ನ ತಿರುಗಿಸಿ
ಮಾತು ಬಿಡುವುದೂ…
ಸಾವೇ.
ಸಾವೆಂದರೆ ಬರೀ
ದೇಹದ ಕೊನೆಯಲ್ಲ,
ಆತ್ಮದ ಕೊಳೆ!
*********