ಅಗಲಿದ ಕವಿ ಸಿದ್ದಲಿಂಗಯ್ಯ
ಅವರಿಗೊಂದು ಪದ ನಮನ
ಅಶ್ವತ್ಥ
ನನ್ನ ಕೂಗು ನಿಮಗೆ ಕೇಳುವುದೂ ಇಲ್ಲ
ಹಾಗಾಗಿ ನಾನು ಕೂಗುವುದೂ ಇಲ್ಲ
ನಿಮ್ಮ ನೋವಿನ ತೃಣಮಾತ್ರವೂ ನನ್ನರಿವಿಗಿಲ್ಲ
ಹೂಮಾಲೆ ಗಂಧದ ಹಾರ ಅದಾವುದೂ
ನಿಮ್ಮನ್ನಿನ್ನೆಂದೂ ಸಂತೈಸುವುದಿಲ್ಲ
ನಿಮ್ಮೀ ಭಾವುಕ ನುಡಿಯ ಭಾವವೆಂದೂ ನನ್ನ ಬಿಡುವುದಿಲ್ಲ
ನಿಮ್ಮ ಗುಣ ನನಗೆ ತಿಳಿದೇ ಇಲ್ಲ
ನೀವೆಂದರೆ ನನಗೆ ಪದ ಮತ್ತು ಪದ್ಯ
ನಿಮ್ಮ ಹೆಸರೇ ಪದ ನಿಮ್ಮ ಭಾವವೇ ಪದ್ಯ
ತಪ್ಪುಗಳೆಣಿಸುವ ಹಂತ ನಾನು ತಲುಪಲೇ ಇಲ್ಲ
ನಿಮ್ಮೆತ್ತರವನು ಕಾಣುವುದಕೆ ತಲೆಯೆತ್ತಬೇಕು
ನಕ್ಷತ್ರವ ನೋಡಲು ಕಣ್ಣರಳಿಸುವ ಹಸುಳೆಯಂತೆ
ನಿಮ್ಮ ಊರುಕೇರಿ ಇಷ್ಟರಲ್ಲಾಗಲೇ ಓದಿಲ್ಲವೆಂದು
ನನ್ನೊಳಗೇ ನನಗೆ ಚಿವುಟಿಕೊಂಡೆ ಬೆಳಗಾದಾಗಿನಿಂದ
ನಿಮ್ಮನುಪಸ್ಥಿತಿಯಲ್ಲಿನ್ನು ತಿಳಿಸಲಾರೆನೂ ಕೂಡ
ಶ್ರದ್ಧಾಂಜಲಿ ಹೇಳುವುದಕೂ ಬರಲಾರೆ
ಅಷ್ಟೊಂದು ದೂರ ನಾನಿರುವ ತೀರ
ಸುಖ ದುಃಖದಾಚೆಗೂ, ಗಂಟಲ ಬಿಗಿದು ನೀವಿದ್ದಿರಲ್ಲ!
ಒಪ್ಪಿದೆ ನಿಮ್ಮ ಹಂಚಿ ಬಾಳುವ ಬದುಕ
ಮಿಂಚಲಿ ಹೊಳೆಯಲಿ, ಮಾಸಿಯೇ ಹೋಗಲಿ
ಬಾಳು ಇರುವುದೇ ಹಂಚಿಕೆಯಲಿ
ಸಹ್ಯ ಅಸಹ್ಯಗಳನೂ ಸರಿಸಿಯಾಚೆಗೆ
ಒಪ್ಪತಕ್ಕುದಕೆ ಹಾರಾಡದೇ ಹೋರಾಡಿ
ಸದ್ದಿಲ್ಲದೇ ತಣ್ಣಗೆ ಹರಿದಾಡುವ ಬದುಕಿಗೆ
ನಿಮ್ಮ ನೆರಳಿಗೆ, ನೀವುಸಿರಿದ ಗಾಳಿಗೆ
ನೀವಾಡಿದ ನುಡಿಗೆ, ನಿಮ್ಮೊಳಗಿನ ಕವಿಗೆ
ಕವಿಯೊಳಗಿದ್ದ ಮನುಷ್ಯತ್ವದ ಆ ದೀವಿಗೆಗೆ
ಓ ಕವಿವರ್ಯ, ಈ ಎರಡು ಪದನಮನ
*************************************
ಅವರಿದ್ದ ಹಾಗಯೇ ಚಿತ್ರಿಸಿದ್ದೀರಿ…
ಎರಡು ಪದ ನಮನದಲಿ ಅಗಲಿದ ಮಹಾನ್ ಚೇತನದ ಬಗ್ಗೆ
ನೂರಾರು ಮನಗಳ ಭಾವ ತೆರೆದಿಟ್ಟಿದ್ದೀರ.
ಮಾಲತಿಶ್ರೀನಿವಾಸನ್
ತುಂಬಾ ಇಷ್ಟವಾಯಿತು … ಪದ ನಮನ