ನಾನಾಗಿ ಉಳಿದಿಲ್ಲ‌‌!

ಕವಿತೆ

ನಾನಾಗಿ ಉಳಿದಿಲ್ಲ‌‌…!

ಶಿವಲೀಲಾ ಹುಣಸಗಿ

a couple holding hands with a wedding ring visible

ನಾನು ನನಗಾಗಿ ಉಳಿದಿಲ್ಲ
ಅವೆಲ್ಲವನ್ನೂ ಗಾಳಿಗೆ ತೂರಿದ್ದೆನೆ
ದೇಹದ ಕಣಕಣಗಳು ನನ್ನದಾಗಿಲ್ಲ
‌ಬೆಸೆದಿದ್ದೆನೆ ಧೂಳಿನ ಕಣಗಳೆಲ್ಲ

ನೂರುಭಾವಗಳು ನನ್ನದಾಗಿಲ್ಲ
ಅವೆಲ್ಲವನ್ನೂ ಕಾಮನಬಿಲ್ಲಿಗೆ ಸೇರಿಸಿದ್ದೆನೆ
ಪುಟ್ಟ ಹೃದಯ ಮಿಡಿದು ಒದ್ದಾಡಿದಾಗೆಲ್ಲ
ಅದನು ಘಾಸಿಗೊಳಿಸಿದ ನೆನಪಲ್ಲಿ

ಅನುವಿಗಲ್ಲದ್ದು ತನುವಿಗೆ ದಕ್ಕಲಿಲ್ಲ
ಮನಕೊಲಿಯದ ಕನಸುಗಳ ಚಲ್ಲಿದ್ದೆನೆ
ಹರವಿಕೊಂಡು ಬಿದ್ದರೂ ನೋಡಲಿಲ್ಲ
ಆಗಸದ ನಕ್ಷತ್ರಗಳ ಎಣಿಸಲು ನಾನಿಲ್ಲವಲ್ಲ

ಮೋಡಕವಿದು ಮಳೆ ಬರಬಹುದಲ್ಲ
ಅದು ಬೇಡವೆಂದರೂ ಒಡಲಿಗಿಳಿಸಿದ್ದೆನೆ
ಅಕಾಲಿಕವಾದರೂ ಸುರಿದುದೆಲ್ಲ ಮಳೆಯಲ್ಲ
ಕೊಚ್ಚಿಹೋಗಲಿ ನನ್ನದೆಂಬ ಭಾವವೆಲ್ಲ

ಹುಚ್ವು ವ್ಯಾಮೋಹ ದಕ್ಕದ ಪ್ರೀತಿಯೆಲ್ಲ
ನನದೆಂಬ ಭ್ರಮೆಯಲಿ ಕುಸಿದಿದ್ದೆನೆ
ಋತುಗಳು ತಮ್ಮಷ್ಟಕ್ಕೆ ತಾವು ಬಂದಿವೆಯಲ್ಲ
ಯಾವ ಬಂಧನಕೂ ನಿಲುಕದ ರೀತಿಯಲ್ಲಿ

ಗಡಿಗಳಾಚೆಯ ಶತ್ರುಗಳ ತಡೆದಿದ್ದೆನಲ್ಲ
ಎದೆಯೊಳಗೆ ಅವಿತ ನಿನ್ನ ಮುಚ್ಚಿಟ್ಟಿದ್ದೆನೆ
ಮಂಕುದಿನ್ನೆಯಂತೆ ಅಂಗಲಾಚಿದಾಗೆಲ್ಲ
ಮೋಡಕವಿದ ವಾತಾವರಣ ಸುತ್ತಲೆಲ್ಲ

ನನಗೆ,ನೀನು ಬೇಡವೆಂದೆನಿಸಿದೆಯಲ್ಲ
ಕೈಗೆಸಿಗದ ಅಂಬರಕೆ ಏಣಿಯಿಟ್ಟಿದ್ದೆನೆ
ನಾನೋ ಧರೆಯಲ್ಲಿ‌ ಹುದುಗುತ್ತಿರುವೆನಲ್ಲ
ಕಳೆದು ಹೋದ ಮೇಲೆ ನನ್ನದೆನಿಲ್ಲ

ಗಾಳಿಗುಂಟ ತೇಲಿ ಹೋದ ಗಾಳಿಪಟ
ಕನ್ನಡಿಯಲಿ ಕಂಡ ನನ್ನ ಮುಖಪಟ
ನಿನ್ನದಾಗಲಿಲ್ಲ,ನೀನು ಉಳಿಸಲಿಲ್ಲ
ಧರೆಯಾಚೆ ಪಡೆಯಲು ನಾನುಳಿದಿಲ್ಲ….

ಕೈಚೆಲ್ಲಿ ಕುಳಿತ ಮನದ ದುಗುಡವನೆಲ್ಲ
ನೀಲಿಯಂಬರಕೆ ಬಣ್ಣ ಬಳಿದಿದ್ದೆನೆ
ಕಣ್ಣಂಚಲಿ ಪ್ರೀತಿ ಹುಟ್ಟಿ ಕರಗಿತಲ್ಲ
ಎದೆಗಪ್ಪಿಕೊಂಡು ಒಮ್ಮೆ ಮುದ್ದಾಡಲಿಲ್ಲ….

ಕನಸಿನಾಚೆಯ ಲೋಕದಲ್ಲಿ ನಿನ್ನ ಸುಳಿವಿಲ್ಲ‌
ಭ್ರಮೆಯಲ್ಲಿ ತೇಲಿದ್ದೆ ಬಂತು ನನಸಾಗಲಿಲ್ಲ
ಪ್ರೇಮದ ಅಂಬರಕೆ ಚಂದಿರನಿಲ್ಲ
ಪ್ರೀತಿ ತುಂಬಿದಾ ಬಂಧನ ನನದಾಗಲಿಲ್ಲ

***************************

5 thoughts on “ನಾನಾಗಿ ಉಳಿದಿಲ್ಲ‌‌!

  1. ಸೊಗಸಾಗಿ ಮೂಡಿ ಬಂದಿದೆ.
    ಮನಮುಟ್ಟುವ ಸಾಲುಗಳು ಮೇಡಂ

  2. ಈ ಕವನ ತುಂಬಾ ಭಿನ್ನವಾಗಿ ದೆ.. ಚೆನ್ನಾಗಿ ಮೂಡಿಬಂದಿದೆ

  3. ಸೊಗಸಾಗಿದೆ…. ಚೆಂದವಾಗಿ ಬರೆದಿದ್ದಿರಿ ಮೆಡಮ್

Leave a Reply

Back To Top