ತವರು ತಾರಸಿಯಾಗುತ್ತಿದೆ

ವಾರದ ಕವಿತೆ

ತವರು ತಾರಸಿಯಾಗುತ್ತಿದೆ

” ಮನೆ ಕಂಬಳ” ಮುಗಿಸಿ, ಕರಿ ಹೊತ್ತು
ಕತ್ತು ನೋವೆದ್ದ
ದಿನಗಳೆಲ್ಲ ಕಳೆದು
ಹಂಚಿನ ಮಾಡೊಂದ ಮನೆ ” ಕೋಳು”
ಕಂಡಕ್ಷಣ
ಅವ್ವ ” ಈ ಜನ್ಮಕ್ಕಿಷ್ಟು ಸಾಕು” ಎಂದಿದ್ದಳಂತೆ
ಅವಳ ಬಸಿರಲ್ಲಿ ನಾನು ಮಿಂದೆದ್ದು
ಮುಳುಗೇಳುತಿದ್ದುದನ್ನು ಮರೆತು.

ಆ ಸಗಣಿ ಸಾರಣೆಯ ” ನಂದ ಗೋಕುಲ’ದಲ್ಲೇ.. ನನ್ನ
ಬಾಲ್ಯ ಜಾರಿ ಬಾಳೆದಿಂಡಾಗಿ
ಬಿತ್ತಕ್ಕಿ ಬೀರಿ ನಾ..
ಹೊರಟ ಘಳಿಗೆ
ಬಿಕ್ಕಿ ಉಮ್ಮಳಿಸಿದ್ದೆ
ಮನೆಯೇ ತವರಾದುದನ್ನು ಅರಿತು.

ತವರೀಗ’ ತಾರಸಿ’ ಯಾಗುವ ಹೊತ್ತು
ಇಳಿಸ ಬೇಕಿದೆ ಒಂದೊಂದೇ ನೆನಪುಗಳನ್ನು
ಸೇರಿಸಿಟ್ಟ ಬೈನೆ ಅಟ್ಟದಿಂದ!

ಬಿದಿರು ತೊಟ್ಟಿಲೊಳಗಿನ ನನ್ನ
ಹಾಲು ಬಟ್ಟಲಿಗೆ ತಾವಿದ್ದೀತೆ..
ತಾರಸಿಯ ನುಣುಪು ನಾಗಂದಿಗೆಯೊಳಗೆ?

ಅಜ್ಜನ ಕೋಲು, ಅಜ್ಜಿಯ ಕುಟ್ಟೊರಳು
ಮಜ್ಜಿಗೆ ಕಡಗೋಲು , ಬೆತ್ತದ ಕಣಜಕೆ
ಅಲ್ಯಾವ ಮೂಲೆ.
ಬೀಸೋ… ತಿರಿಸೋ ಕಲ್ಲು ಸೇರಿ
ಅವ್ವನ ಈಚಲು ಚಾಪೆಯ
ಒಪ್ಪಿಕೊಂಡಿತೇ ಅಣ್ಣನ ಗ್ರ್ಯಾನೈಟ್ ನೆಲ?

ಹೌದು,
ಆಚೆ ಎತ್ತಿ ಈಚೆಗಿಡುವುದು
ಒಂದೇ ಎರಡೇ..?
ತವರೆಂದರೆ ಬರಿ ಹಂಚಿನದ್ದೊಂದು ಮಾಡೆ?
ಯಾವುದಕ್ಕೂ…
ಹಳೆ ಮನೆಯ ಕೋಳಿಳಿಸುವ ಮೊದಲೊಮ್ಮೆ
ಹೋಗಿ ಬರಬೇಕು
ಅಟ್ಟವನೊಮ್ಮೆ ಏರಿ
ಕೋಳುಗಂಬಕೆ ಕಟ್ಟಿದ
ನನ್ನ ” ಸಿರಿದೊಂಡಲಿನ” ಮುತ್ತು ಮಣಿಗಳನ್ಬೆಲ್ಲ
ಒಂದೊಂದೂ ಬಿಡದೆ
ಆರಿಸಿ ತರಬೇಕು.


***************************

ಶೋಭಾ ನಾಯ್ಕ.ಹಿರೇಕೈಕಂಡ್ರಾಜಿ

9 thoughts on “ತವರು ತಾರಸಿಯಾಗುತ್ತಿದೆ

 1. ಚೆಂದ ಕವಿತೆ. ಗ್ರಾಮವೊಂದರ ಹಳೆಯ ಹೆಂಚಿನ ಮನೆ ತಾರಸಿಯಾಗುವುದೆಂದರೆ ಆಧುನಿಕತೆಯ ಪ್ರವೇಶ ಹಾಗೂ ಭೌತಿಕ ಸುಖದತ್ತ ಹಳ್ಳಿ ವಾಲುತ್ತದೆ ಎಂಬ ಆತಂಕ ಕವಯಿತ್ರಿಗೆ .ಜೊತೆಗೆ ಭಾವನಾತ್ಮಕ ಸಂಬಂಧಗಳು ಮರೆತು ಹೋಗುವ ಆತಂಕ.‌ ಭಾವನಾತ್ಮಕ ಸಂಬಂಧ ಉಳಿಸಿಕೊಳ್ಳಬೇಕು ಎಂಬ ಕಳಕಳಿ.‌ಕೊಳ್ಗಂಬಕ್ಕೆ ಕಟ್ಟಿದ್ದ ಬಾಸಿಂಗ ಹಾಗೂ ಅದರ ಮಣಿಗಳನ್ನು ಆರಿಸಿ, (ಅಟ್ಟದ ಮೇಲಿಂದ) ಜೋಪಾನವಾಗಿ ತರಬೇಕು ಎಂಬ‌ ಆಶಯ ಮಹತ್ವದ್ದು. ಹೆಣ್ಣಿನ ‌ಭಾವಕೋಶ ‌ಸದಾ ತಾಯ್ತನದ್ದು ಎಂಬುದು ನನ್ನ ಕಾಡಿತು. ತುಂಬಾ ಒಳ್ಳೆಯ ಕವಿತೆ. ಅಭಿನಂದನೆಗಳು ‌ಶೋಭಾ….

 2. ಕವಿತೆ ತುಂಬಾ ಚೆನ್ನಾಗಿದೆ.. ಶೋಭಾ ಅವರ ಕವಿತೆಗಳು ಅದರಲ್ಲಿ ಬರುವ ದೈನಂದಿನ ವಿವರಗಳನ್ನೊಳಗೊಂಡ ಪ್ರತಿಮೆಗಳು ತೀರ ಆಪ್ತವಾಗುತ್ತವೆ.
  ತವರು ತಾರಸಿಯಾಗುವುದು ಅಂದರೆ ಕಾಡು ಕಾಂಕ್ರೀಟ್ ಕಾಡಾಗುವುದರ ಬಗ್ಗೆ ಕವಯಿತ್ರಿಯ ಕಳವಳವಿದೆ.ಮೂಲೆ ಸೇರುತ್ತಿರುವ ಕಣಜ,ಬೈನೆ ಅಟ್ಟ,ಕೋಳಗಂಭ,ಮನೆಕಂಬಳ ಇವೆಲ್ಲ ನೇಪತ್ಯಕ್ಕೆ ಸರಿದ ಜೀವದ ಭಾಗಗಳನ್ನು ಮರೆಯುವುದು ಹೇಗೆ ಎಂಬ ಪ್ರಶ್ನೆ ಕವಯಿತ್ರಿಯನ್ನು ಕಾಡಿದೆ.ಚಂದ ಪದ್ಯ
  @ ಫಾಲ್ಗುಣ ಗೌಡ ಅಚವೆ

 3. ಸರಳ ಮತ್ತು ಸಹಜವಾಗಿ ಬರೆಯುವ ಶೋಭಾಳ ಕವಿತೆಗಳು ಬಲು ಬೇಗ ಹೃದಯಕ್ಕೆ ಇಳಿದು ಬಿಡುತ್ತದೆ.ಅಭಿನಂದನೆ ಶೋಭಾ

 4. ಬಹಳ ಆಪ್ತವಾದ ಕವಿತೆ…. ಸರಳ ಸುಂದರ….ಅಭಿನಂದನೆಗಳು ಶೋಭಾ ಅವರೇ….

 5. ನೆನಪುಗಳ ಹೊತ್ತು ಬಂದ ಕವಿತೆ ಸುಂದರವಾಗಿದೆ,

 6. ತುಂಬಾ ಚೆನ್ನಾಗಿದೆ.
  ಸಗಣಿ ಸಾರಿದೆ ನೆಲ
  ಮಜ್ಜಿಗೆ ಕಡಿಗೋಲು
  ಒರಳು ಒನಕೆ
  ಬೇವು ತುರಿಕೆ
  ಎಲ್ಲವೂ ನೆನಪಾದವು

 7. ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು

 8. ತುಂಬಾ ಸುಂದರವಾದ, ಮನಸ್ಸಿಗೆ ಆಪ್ತವಾಗುವ ಬರಹ

Leave a Reply

Back To Top