ಕವಿತೆ
ಒತ್ತುಗುಂಡಿ
ಅಕ್ಷತಾರಾಜ್ ಪೆರ್ಲ
ಉಸಿರಿಗೂ ಒಂದು ರೀಸ್ಟಾರ್ಟ್ ಇರಬೇಕಿತ್ತು
ಒಮ್ಮೆ ಸ್ತಬ್ದವಾದುದೆಲ್ಲ ಉಸಿರಾಡಲು,
ನಿಂತವುಗಳು ಮತ್ತೆ ನಡೆದಾಡಲು
ಯಾಕಿಲ್ಲ ಮರು ಒತ್ತುಗುಂಡಿ ಉಸಿರಿಗೆ!?
ಎಲ್ಲವನ್ನೂ ಕಳೆದುಕೊಂಡು ಬೆತ್ತಲಾಗುತ್ತೇವೆ
ತುಂಬಿಸಿಟ್ಟ ದಾಖಲೆಗಳು ಏಕಾಏಕಿ ಕಾಣೆಯಾಗುತ್ತದೆ
ಇದ್ದಲ್ಲೇ ನೇಣು ಹಾಕಿಬಿಡುತ್ತದೆ
ಒತ್ತಿದರೂ, ಅದುಮಿದರೂ ಮಿಸುಕಾಡುವುದೇ ಇಲ್ಲ !
ಒಮ್ಮಿಂದೊಮ್ಮೆಗೆ ಪರದೆ ಕಪ್ಪಾಗುತ್ತದೆ
ಯಾವುದೂ ಕಾಣದೆಯೇ ಕಂಗಾಲಾಗುವಂತೆ
ಇರುತ್ತಿದ್ದರೆ ಹೀಗೊಂದು ರೀಸ್ಟಾರ್ಟ್ ವ್ಯವಸ್ಥೆ
ಬೇಕಾದುದಕ್ಕಿಂತ ಬೇಡವಾದವುಗಳೇ ತುಂಬಿಕೊಳ್ಳುತ್ತಿದ್ದವೇನೋ ?
ಎಲ್ಲಿ ಕಲಿತನೋ ಕಾಲ ಈ ಮಾದರಿಯ ಜೋಡಣೆ ?
ಮರೆತುಬಿಟ್ಟಿರಬೇಕು ಒಂದು ಒತ್ತುಗುಂಡಿ
ಹೌದು ಇರಬೇಕು ! ಎಂದುಕೊಳ್ಳುವಾಗಲೇ
ಮತ್ತೊಂದು ವ್ಯವಸ್ಥೆಯೂ ರೀಸ್ಟಾರ್ಟ್ ಆಗದಂತೆ ಮುಚ್ಚಿಕೊಂಡಿತು.
*********************
ಒಳ್ಳೆಯ ಕವಿತೆ
Nice one
Keep it up
Good luck