ಅಂತಿಮ ನಮನ
ದಲಿತ ಚಳುವಳಿಯ
ಕ್ರಾಂತಿಯ ಕಿಡಿ ನಂದಿತು
ನಾಡಿನ ಕ್ರಾಂತಿಕಾರಿ ಕವಿ ಸಿದ್ದಲಿಂಗಯ್ಯ ನಮ್ಮನ್ನು ಅಗಲುವ ಮೂಲಕ ನಾಡಿನ ದಲಿತ ,ಶೋಷಿತರ ಚಳುವಳಿಯ ಕಿಡಿಯೊಂದು ನಂದಿದಂತಾಗಿದೆ . ಸಿದ್ದಲಿಂಗಯ್ಯ ಅವರ ನಿಧನಕ್ಕೆ ಸಂಗಾತಿ ಸಂತಾಪ ಸೂಚಿಸುತ್ತದೆ. ಕವಿ ಸಿದ್ದಲಿಂಗಯ್ಯ ನವರು ವ್ಯಕ್ತಿತ್ವ ದಿಂದ ತಣ್ಣನೆಯ ಸ್ವಭಾವದವರು. ಆದರೆ ಬರಹ ಮಾತ್ರ ಬೆಂಕಿಯ ಉಂಡೆಯಂತಿತ್ತು.
1975 ರಲ್ಲಿ ಬಂದ ಹೊಲೆಮಾದಿಗರ ಹಾಡು, 1978 ರಲ್ಲಿ ಬಂದ ಸಾವಿರಾರು ನದಿಗಳು ಕವನ ಸಂಕನಗಳಿಂದ ಕನ್ನಡ ಪ್ರಾಧ್ಯಾಪಕ ಸಿದ್ದಲಿಂಗಯ್ಯ ಹೋರಾಟಗಾರರ ಮನೆಮಾತಾದರು. ಅವರ ಕವಿತೆಗಳು ಪ್ರತಿ ಹೋರಾಟಗಾರರ ,ಚಳುವಳಿಗಾರರ ಕ್ರಾಂತಿಯ ಹಾಡುಗಳಾಗಿದ್ದವು. ಆದರೆ ಸಿದ್ದಲಿಂಗಯ್ಯ ವಿಧಾನ ಪರಿಷತ್ ಪ್ರವೇಶಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದರು. ಪಂಪ ಪ್ರಶಸ್ತಿ ಬರುವ ಹೊತ್ತಿಗೆ ಅವರು ಅಕ್ಷರಶಃ ಮೌನಿಯಾದರು. ಕವಿಯ ಬದುಕು ಆಗಾಲೇ ವ್ಯವಸ್ಥೆ ಜೊತೆ ರಾಜಿಯಾಗಿತ್ತು.
ಅವರ ಕವಿತೆಗಳನ್ನು ಓದಿದವರು ಮಾತ್ರ ಇಂದಿಗೂ ಕ್ರಾಂತಿಕಾರಿ ಆಗುತ್ತಾರೆ, ವ್ಯವಸ್ಥೆಯ ಅನ್ಯಾಯದ ವಿರುದ್ಧ ಸಿಡಿದು ನಿಲ್ಲುತ್ತಾರೆ. ಅದೇ ಸಿದ್ದಲಿಂಗಯ್ಯನವರ ಕಾವ್ಯದ ಶಕ್ತಿ. ಕನ್ನಡ ಸಾಹಿತ್ಯ ಅಧ್ಯಯನ ದಲ್ಲಿ ಸಿದ್ಧಲಿಂಗಯ್ಯ ನವರನ್ನು ಕಡೆಗಣಿಸುವಂತಿಲ್ಲ.ಹಾಗೆ ಅವರ ಬರಹ ಕನ್ನಡಿಗರನ್ನು ಸದಾ ಜಾಗೃತಸ್ಥಿತಿಯಲ್ಲಿಟ್ಟಿರುತ್ತದೆ. ಹೋರಾಟದ ಹಾದಿಗೆ ಸಾವಿರಾರು ನದಿಗಳನ್ನು ಕರೆ ತರುತ್ತದೆ .
ಊರು ಕೇರಿ, ಗ್ರಾಮದೇವತೆಗಳು …ಈ ಪುಸ್ತಕಗಳನ್ನು ಸಾಹಿತ್ಯ ಆಸಕ್ತರು ಓದಬೇಕು.
ಕಪ್ಪು ಕಾಡಿನ ಹಾಡು, ನನ್ನ ಜನಗಳು ಮತ್ತು ಇತರೆ ಕವಿತೆಗಳು, ಅಲ್ಲಿ ಕುಂತವರು ಕವನ ಸಂಕಲನಗಳು ಸಹ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಪಡೆದಿವೆ.
ಪಂಚಮ ,ನೆಲಸಮ,ಏಕಲವ್ಯ ನಾಟಕಗಳ ಪೈಕಿ ಏಕಲವ್ಯ ಗಮನಸೆಳೆದಿದೆ. ಶ್ರವಣ ಬೆಳಗೊಳದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಆ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ಸಾಹಿತಿ ದೇವನೂರು ಮಹಾದೇವ ತಾತ್ವಿಕ ,ಸೈದ್ದಾಂತಿಕ ಕಾರಣಗಳಿಗೆ ತಿರಸ್ಕರಿಸಿದ್ದರು. ಆದರೆ ಸಿದ್ಧಲಿಂಗಯ್ಯ ಅನಾಯಾಸವಾಗಿ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡಿದ್ದರು. ಇದೇ ದೇವನೂರು ಮತ್ತು ಸಿದ್ದಲಿಂಗಯ್ಯ ನವರ ನಡುವೆ ಇರುವ ವ್ಯಾತ್ಯಾಸ.
…..
ಸಂಗಾತಿ ಸಂಪಾದಕ ಬಳಗ
ಬೇಸರ ವಾಗ್ತಿದೆ