ಹಾಸ್ಯ ಲೇಖನ
ನಾನೂ ಇಡ್ಲಿ ಮಾಡಿದೆ.
ಸಮತಾ.ಆರ್
ಇದೇನಪ್ಪಾ “ನಾನೂ,ಡ್ರೈವಿಂಗ್ ಕಲಿತೆ, ಡಿಗ್ರಿಗಳ ಮೇಲೆ ಡಿಗ್ರೀ ಪಾಸ್ ಮಾಡಿದೆ, ಎವರೆಸ್ಟ್ ಹತ್ತಿದೆ, ಇಡೀ ಪ್ರಪಂಚ ಸುತ್ತಿದೆ,ಮನೇ ಕಟ್ಟಿದೆ,ಮಕ್ಕಳ ಮದುವೆ ಮಾಡಿದೆ,ಹೊಸ ಉದ್ಯಮ ಶುರು ಮಾಡಿ,ಹಣ ಮಾಡಿ ಗುಡ್ಡೆ ಹಾಕಿದೆ”ಅಂತೆಲ್ಲ ಸಾಧಕರು ಕೊಚ್ಚಿಕೊಳ್ಳುವ ಈ ಕಾಲದಲ್ಲಿ ಇವಳೇನು ಜುಜುಬಿ ಇಡ್ಲಿ ಮಾಡಿದ್ದನ್ನು ಕೊಚ್ಚಿ ಕೊಳ್ಳುತ್ತಿದ್ದಾಳಲ್ಲ ಅಂತ ನಗೆ ಬಂತೆ ನಿಮಗೆ?ಹೌದು ರೀ,ನನಗೆ ನಾನು ಪರ್ಫೆಕ್ಟ್ ಆದ ಇಡ್ಲಿ ಮಾಡಲು ಕಲಿತದ್ದು ಮೇಲಿನ ಯಾವ ಸಾಧನೆಗಳಿಗಿಂತ ಕಮ್ಮಿ ಇಲ್ಲ ಬಿಡಿ.ಯಾಕೆಂದರೆ ನಾನು ಈ ವಿದ್ಯೆ ಕಲಿಯಲು ಪಟ್ಟಿರುವ ಶ್ರಮ, ತೊಡಗಿಸಿರುವ ಸಮಯ ಅಷ್ಟಿಷ್ಟಲ್ಲ.
ಇದೊಂದು ಇಡ್ಲಿಯನ್ನು ಪಳಗಿಸಿ ಕೊಳ್ಳುವುದರಲ್ಲಿ ನನಗೆ ವರ್ಷಗಳೇ ಹಿಡಿದು ಬಿಟ್ಟವು.
ಇಡ್ಲಿ ಅನ್ನೋದು ಏನು ಬಿಡಿ,ಕೇವಲ ಒಂದು ಸಾಧಾರಣ ತಿಂಡಿ ಅನ್ನೋ ಭಾವನೆ ಬಹಳಷ್ಟು ಮಂದಿಗಿದೆ.ಆದರೆ ನಿಮಗೆ ಗೊತ್ತೇ,ಇತ್ತೀಚೆಗೆ ಕೆಲವು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜರುಗಿದ ,’ ಪ್ರಪಂಚದ ಅತ್ಯುತ್ತಮ,ಬೆಳಗಿನ ಉಪಾಹಾರ ಯಾವುದು”ಎನ್ನುವ ಸರ್ವೆಯಲ್ಲಿ ,ಹಲವಾರು ದೇಶ ವಿದೇಶಗಳ ತಿಂಡಿ ತಿನಿಸುಗಳ ಹಿಂದಿಕ್ಕಿ ಮೊದಲ ಸ್ಥಾನ ಹೊಡೆದು ಕೊಂಡದ್ದು ನಮ್ಮ ಇಡ್ಲಿ ,ಚಟ್ನಿ,ಸಾಂಬಾರ್ ಅಂತ ಗೊತ್ತೇ ನಿಮಗೆ?
ರೋಗಿಗಳಿಗಂತು, ಔಷ್ದಿ, ಗಿಷ್ದಿ,ಆಪ್ರೇಶನ್ನು,ಸೂಜಿ,ಗ್ಲುಕೋಸ್,ಎಲ್ಲಾ ಆಗಿ ಒಂಚೂರು ಸುಧಾರಿಸಿಕೊಂಡ ಮೇಲೆ ಡಾಕ್ಟರ್ ಹೇಳುವುದು,”ಮೊದಲು ಸ್ವಲ್ಪ ಗಂಜಿ ಕೊಡಿ,ಆಮೇಲೆ ಒಂದೆರಡು ದಿನ ಇಡ್ಲಿ ಕೊಡಿ”ಅಂತಲೇ. ಈ ಕರೋನ ಕಾಲದಲ್ಲಿ ಹೇಳೋದು ಸರಿಯಲ್ಲವೇನೋ, ಆದ್ರೂ,ಎಲ್ಲಾ ಸರಿಯಾದ ಮೇಲೆ
ಬೇಕಾದರೆ ಯಾವುದಾದರೂ ಆಸ್ಪತ್ರೆಗೆ ಹೋಗಿ ನೋಡಿ,ರೋಗಿಗಳ ಸಾಮಾನ್ಯ ಬೆಳಗಿನ ತಿಂಡಿ ಬ್ರೆಡ್ಡು,ಕಾಫೀ ಮತ್ತು ಇಡ್ಲಿಯೇ ಆಗಿರುತ್ತದೆ.
ಮತ್ತೆ ಇಡ್ಲಿ ಜೊತೆ ತಿನ್ನಲುಇಂತಹದೇ ಚಟ್ನಿ, ಸಾಂಭಾರೇ ಆಗಬೇಕು ಅಂತ ಏನೂ ಇಲ್ಲ.ಯಾವುದಾದರೂ ತರಕಾರಿ ಗೊಜ್ಜು ಆಗಬಹುದು.ಮಾಂಸಾಹಾರಿಗಳು ಮಟನ್ ಸಾರಿನೊಡನೆ ಬಾರಿಸುತ್ತಾರೆ.ಯಾವುದಾದರೂ ಮಿಲ್ಟ್ರಿ ಹೋಟೆಲ್ ಎದುರಿನ ಬೋರ್ಡ್ ನಲ್ಲಿ”ಇಡ್ಲಿ, ಬೋಟಿಗೋಜ್ಜು ದೊರೆಯುತ್ತದೆ”ಅಂತಾ ಇರುವುದು ಸರ್ವೇ ಸಾಮಾನ್ಯ.ನಮ್ಮ ಊರು ಕಡೆ ಮದುವೆ ನಂತರದ ಬೀಗರೂಟದ ಮೆನುವಿನಲ್ಲಿ ಈ ಇಡ್ಲಿ , ಬೋಟಿಗೊಜ್ಜು ಐಕ್ಯವಾಗಿ ಬಿಟ್ಟಿವೆ.ನನಗಂತೂ ಮದುವೇಲಿ ಮಾಡೋ ನೂರೆಂಟು ತರಹದ ಸಿಹಿ,ಸಪ್ಪೆ ತಿಂದು ಕೆಟ್ಟಿರೋ ನಾಲಿಗೆ ,ಬೀಗರೂಟದ ಇಡ್ಲಿ ಬೋಟಿ ಗೊಜ್ಜು ತಿಂದ ಮೇಲೆಯೇ ರಿಪೇರಿಯಾಗುವುದು.
ಮೇಲೆ ಹೇಳಿದ ಯಾವುದೂ ಇಲ್ಲವೋ,ಸ್ವಲ್ಪ ತುಪ್ಪಕ್ಕೆ ಸಕ್ಕರೆ ಬೆರೆಸಿಕೊಂಡು ತಿನ್ನಬಹುದು. ಅದೂ ಇಲ್ಲವೇ,ಕಾಫೀ ಇಲ್ಲವೇ ಟೀ ಗೆ ಅದ್ದಿಕೊಂಡು ತಿನ್ನುವವರನ್ನು ಕೂಡ ನೋಡಿದ್ದೇನೆ.
ಅಕಸ್ಮಾತ್ ಇಷ್ಟೆಲ್ಲಾ ವ್ಯಂಜನಗಳ ಜೊತೆ ಸೇರಿಸಿ ಕೊಂಡು ತಿಂದ ಬಳಿಕವೂ ಮಿಕ್ಕಿ ಹೋಯಿತೇ?.ಯೋಚಿಸಬೇಡಿ ,ಉಳಿದಿರುವ ಇಡ್ಲಿಗಳನ್ನು ಸಣ್ಣಸಣ್ಣ ಚೂರುಗಳ ಮಾಡಿ ಒಂದು ಚಿತ್ರಾನ್ನದ ವಗ್ಗರಣೆ ಕೊಟ್ಟು ಬಿಟ್ಟರೆ ಸಂಜೆ ಟೀ ಜೊತೆ ತಿನ್ನಲು ಸುಲಭದ ಇಡ್ಲಿ ಉಪ್ಪಿಟ್ಟು ತಯಾರಾಗಿ ಬಿಡುತ್ತದೆ.
ಮದುವೆ ಮನೆಗಳಲ್ಲಿ ಬೆಳಗಿನ ತಿಂಡಿಗೆ ಬಡವರಾಗಲಿ ಇಲ್ಲವೇ ಶ್ರೀಮಂತರ ಮನೆ ಮದುವೆ ಆಗಿರಲಿ ಕಡ್ಡಾಯವಾಗಿ ಇಡ್ಲಿ ವಡೆ ಇದ್ದೇ ಇರುತ್ತದೆ.ಹೆಚ್ಚಿನ ಅನುಕೂಲ ಇರುವವರು ಇದರ ಜೊತೆ, ಪೊಂಗಲ್ಲೋ,ಕೇಸರಿ ಬಾತೋ, ಉಪ್ಪಿಟ್ಟೋ ಇಲ್ಲವೇ ಶಾವಿಗೆ ಬಾತೋ ಮಾಡಿಸುತ್ತಾರೆ.ಆದರೆ ಇಡ್ಲಿ ವಡೆ ಮಾತ್ರ ಕಡ್ಡಾಯ ಅಂದ್ರೆ ಕಡ್ಡಾಯ.
ಬರೀ ಮನೆಯಲ್ಲಿ ತಿನ್ನಲು ಮಾತ್ರವಲ್ಲ,ಹೊರಗೆ ಹೋಟೆಲ್ಗಳಲ್ಲಿ ಕೂಡ ಜನಪ್ರಿಯ ಉಪಾಹಾರ ಅಂದರೆ ಇಡ್ಲಿ ವಡೆ ಸಾಂಬಾರ್ ಆಗಿದೆ.ಯಾವುದೇ ಊರಲ್ಲಿ ನೋಡಿದ್ರೂ,ನೂರೆಂಟು ದರ್ಶಿನಿಗಳು ಮೂರೊತ್ತೂ ಈ ಇಡ್ಲಿ ವಡೆ ಮಾರಿಯೇ ದುಡ್ಡು ಬಾಚಿ ಗುಡ್ಡೆ ಹಾಕ್ತವೆ. ದಕ್ಷಿಣ ಭಾರತದ ಯಾವುದೇ ಹೋಟೆಲ್ ಗೆ ಹೋಗಿ ನೋಡಿ ಅಲ್ಲಿ ಇಡ್ಲಿ ಸಿಗದೇ ಇದ್ದರೆ ಅದು ಪ್ರಪಂಚದ ಎಂಟನೇ ಅದ್ಭುತವೇ ಸರಿ. ಇಡ್ಲಿಗಳಲ್ಲೂ ತಟ್ಟೆ ಇಡ್ಲಿ,ರವೆ ಇಡ್ಲಿ,ಬಟನ್ ಇಡ್ಲಿ ಅಂತ ತರಹಾವರಿ ವಿಧಗಳಿವೆ.ರವೆ ಇಡ್ಲಿಯನ್ನ ,ರವೆ ಮೊಸರು ಬಳಸಿ ಮಾಡಿ,ಕ್ಯಾರಟ್ ತುರಿ,ವಗ್ಗರಣೆ ಎಲ್ಲಾ ಹಾಕಿ ಅಲಂಕಾರ ಮಾಡಿರುತ್ತಾರೆ,ನೋಡಿದರೆ ಸಾಕು ತಿನ್ನುವ ಅನ್ನಿಸಬೇಕು ಹಾಗಿರುತ್ತೆ.
ಮೈಸೂರು ಕಡೆ ಹೋಟೆಲ್ಗಳಲ್ಲಿ ಸಿಗುವ ಮಲ್ಲಿಗೆ ಇಡ್ಲಿ , ಮಲ್ಲಿಗೆಗಿಂತಲೂ ಬಿಳಿ,ಇನ್ನೂ ಮೃದು, ಬಾಯಲ್ಲಿಟ್ಟರೆ ಸಾಕು ಹಾಗೇ ಕರಗಿ ಹೋಗುತ್ತದೆ. ತಟ್ಟೆ ಇಡ್ಲಿ ಹೆಸರೇ ಹೇಳುವಂತೆ ತಟ್ಟೆಗಳಿಗೆ ಹಿಟ್ಟು ಹೊಯ್ದು,ತಟ್ಟೆ ಇಡ್ಲಿ ಸ್ಟ್ಯಾಂಡ್ ಗೆ ಇಟ್ಟು ಹಬೆಯಲ್ಲಿ ಬೇಯಿಸಿ ಮಾಡುವುದು.ಮಾಮೂಲು ಇಡ್ಲಿಗಿಂತ ಗಾತ್ರದಲ್ಲಿ ದೊಡ್ಡದು ಆದರೆ ರುಚಿಯಲ್ಲಿ ಏನು ಅಂತ ವ್ಯತ್ಯಾಸ ಕಾಣೋದಿಲ್ಲ.ಹೆದ್ದಾರಿಗಳಲ್ಲಿ ಯಾವಾಗಲಾದರೂ ಪ್ರಯಾಣಿಸುವಾಗ ಗಮನಿಸಿ ನೋಡಿ ತಟ್ಟೆ ಇಡ್ಲಿ ಹೋಟೆಲ್ಗಳು ರಸ್ತೆ ಬದಿಯಲ್ಲಿ ಊರಿಗೊಂದಾದರೂ ಇದ್ದೇ ಇರುತ್ತವೆ.ಬೆಳಿಗ್ಗೆ ಬೆಳಗ್ಗೆಯೇ ಎದ್ದು ಪ್ರಯಾಣಿಸುವವರಿಗೆ ಈ ಹೋಟೆಲುಗಳು ಒಂದು ವರದಾನವೇ ಸರಿ. ಇಂತಹ ಕೆಲವು ಹೋಟೆಲುಗಳ ಎದುರು,ಕಾರು,ಬೈಕುಗಳು, ಮುತ್ತಿಕೊಂಡಿರುತ್ತವೆ.ಜನ ಉದ್ದನೆಯ ಕ್ಯೂ ನಲ್ಲಿ ನಿಂತು ,ಕಾಯ್ದು ,ತಿಂದು ಹೋಗುತ್ತಾರೆ.ಇಲ್ಲಿ ತಟ್ಟೆ ಇಡ್ಲಿ ಮೇಲೆ ನಿಂಬೆ ಗಾತ್ರದ ಬೆಣ್ಣೆ ಹಾಕಿ ಚಟ್ನಿ ಸಾಂಬಾರ್ ಸಹಿತ ಕೊಡುತ್ತಾರೆ.ಒಂದು ಪ್ಲೇಟ್ ತಿಂದು,ಒಂದೆರಡು ಗ್ಲಾಸ್ ಬಿಸಿ ಬಿಸಿ ಕಾಫಿ ಇಲ್ಲ ಟೀ ಕುಡಿದುಕೊಂಡರೆ ಸಾಕು ಎಷ್ಟು ಹೊತ್ತು ಬೇಕಾದರೂ ಆಯಾಸವಾಗದಂತೆ ಮುಂದೆ ಸಾಗಬಹುದು.
ಬರೀ ಹೋಟೆಲ್ಗಳಲ್ಲಿ ಮಾತ್ರವಲ್ಲ,ರಸ್ತೆ ಬದಿ ತಳ್ಳೋ ಗಾಡಿಗಳಲ್ಲಿ ತಿಂಡಿ ಊಟ ಮಾರುವವರು ಕೂಡ ಫರ್ಸ್ಟ್ ಕ್ಲಾಸ್ ಇಡ್ಲಿವಡೆ ಮಾಡಿಕೊಡುತ್ತಾರೆ. ಉಳ್ಳವರು ದೊಡ್ಡ ದೊಡ್ಡ ಹೋಟೆಲುಗಳ ಮೊರೆ ಹೋದರೆ,ಬೆಳಿಗ್ಗೆ ಮುಂಜಾನೆ ಎದ್ದು ಕೆಲಸಕ್ಕೆ ಹೋಗುವವರಿಗೆ ಸುಲಭ ದರದಲ್ಲಿ ತಿಂಡಿ,ಕಾಫಿ ಈ ತಳ್ಳೋ ಗಾಡಿಗಳು ಒದಗಿಸುತ್ತವೆ..ಉಳಿದ ದೋಸೆ, ಪೂರಿ,ಬಾತು, ಅಂತಹ ತಿಂಡಿಗಳ ರುಚಿ ಬೇರೆ ಬೇರೆ ಹೋಟೆಲುಗಳ ಸ್ಟ್ಯಾಂಡರ್ಡ್ಗಳಿಗೆ ತಕ್ಕ ಹಾಗೆ ಬೇರೆ ಬೇರೆ ಆಗಿರಬಹುದೇನೋ ಆದರೆ ಇಡ್ಲಿ ಮಾತ್ರ ಎಲ್ಲಿಗೆ ಹೋದರೂ,ಎಲ್ಲಿ ತಿಂದರೂ,ಇಡ್ಲಿ ಇಡ್ಲಿಯೇ.
ಯಾವುದಾದರೂ ಊರಿಗೆ ಪ್ರಯಾಣ ಕೈಗೊಂಡಾಗ ತಿಂಡಿ,ಊಟಕ್ಕೆ, ಯಾವುದಾದರೂ ಹೋಟೆಲ್ ಬಳಿ ಗಾಡಿ ನಿಲ್ಲಿಸಿದಾಗ ನನ್ನ ಮೊದಲ ಆದ್ಯತೆ ಇಡ್ಲಿ ವಡೆ ಸಾಂಬಾರ್ ಆಗಿರುತ್ತದೆ.ಬೇರೆ ಮಸಾಲೆ ದೋಸೆ,ಪೂರಿ ಅಂತೆಲ್ಲ ಎಣ್ಣೆ ತಿಂಡಿಗಳಿಗೆ ಮಕ್ಕಳು ಬೇಡಿಕೆ ಇಟ್ಟರೂ ಪ್ರಯಾಣಿಸುವಾಗ ನಾ ಕೊಡಿಸಲಾರೆ.ಎಣ್ಣೆ ಪಸೆ ತಿಂದರೆ ಪ್ರಯಾಣದಲ್ಲಿ ತಲೆ ಸುತ್ತು,ವಾಂತಿ ಬರುವ ಹಾಗೆ ಆಗುತ್ತೆ ಎಂದು ಮಕ್ಕಳಿಗೆ ಕೊಡಿಸುವುದಿಲ್ಲ.ಆದರೂ ನನ್ನ ಮಕ್ಕಳು ಕಮ್ಮಿ ಇಡ್ಲಿ ಹೆಚ್ಚು ವಡೆ ಆರ್ಡರ್ ಮಾಡಿ,ತಿಂದು ನನ್ನ ಎಣ್ಣೆ ತಿಂಡಿ ನಿರ್ಬಂಧ ಮುರಿದು ಹಾಕುತ್ತಾರೆ.
ಇಂತಿಪ್ಪ,ಮಾಡಲು ಕಡಿಮೆ ಸಾಮಗ್ರಿ ಬೇಡುವ,ಹುದುಗಿಸಿ,ಹಬೆಯಲ್ಲಿ ಬೇಯಿಸುವದರಿಂದ ಪೋಷಕಾಂಶಗಳ ಆಗರವಾಗಿರುವ,ಯಾವುದೇ ರೀತಿಯ ಚಟ್ನಿ,ಸಾಂಬಾರ್ ಗೆ ಸುಲಭಕ್ಕೆ ಹೊಂದಿಕೊಳ್ಳುವ,ಬಡವ ಬಲ್ಲಿದರೆಲ್ಲರ ಕೈಗೆಟಕುವ ದರದ ಇಡ್ಲಿ ಪ್ರಪಂಚದ ಅತ್ಯುತ್ತಮ ಉಪಾಹಾರವಾಗದೆ ಇನ್ಯಾವುದೇ ಬೇರೆ ತಿಂಡಿ ಆಗಲು ಸಾಧ್ಯವೇ ಹೇಳಿ. ಅಲ್ಲದೇ ಇದು ಮನೆಯ ಚಿಕ್ಕವರಿಂದ ಹಿಡಿದು, ದೊಡ್ಡವರೆಲ್ಲರಿಗೂ ರುಚಿಸುವ,ಸುಲಭಕ್ಕೆ ಅರಗುವ ತಿಂಡಿ. ಯಾವಾಗಲೂ ಮಕ್ಕಳ ಆರೋಗ್ಯ,ಗಂಡನ ಫಿಟ್ನೆಸ್ಸೂ ,ತಮ್ಮ ಫಿಗರ್ರೂ ಅಂತೆಲ್ಲ ತಲೆ ಕೆಡಿಸಿ ಕೊಳ್ಳುವ ಈಗಿನ ಕಾಲದ ಅಮ್ಮಂದಿರ ಹೆಲ್ದಿ ಚಾಯ್ಸ್ ಈ ಇಡ್ಲಿ ಬ್ರೇಕ್ ಫಾಸ್ಟೂ.
ಇಡ್ಲಿ ತಯಾರು ಮಾಡುವುದು ಎಂದು, ಎಲ್ಲಿ ಪ್ರಾರಂಭಿಸಿದರೋ,ಅದರ ಅನ್ವೇಷಕರು ಯಾರೋ ಅನ್ನುವ ಇತಿಹಾಸ ಯಾರಿಗೂ ತಿಳಿಯದು.ಆದರೆ ಬಹಳ ಪುರಾತನ ಕಾಲದಿಂದಲೂ ಇಡ್ಲಿ ನಮ್ಮ ದಕ್ಷಿಣ ಭಾರತೀಯರ ಅಡುಗೆ ಮನೆಯಲ್ಲಿ ಝಂಡಾ ಊರಿದೆ.ಕನ್ನಡದ ಯಾವುದೋ ಅತ್ಯಂತ ಪ್ರಾಚೀನ ಗ್ರಂಥದಲ್ಲಿ ಕೂಡ ಇಡ್ಡಲಿಗೆ ಎಂದು ಇಡ್ಲಿಯ ಉಲ್ಲೇಖ ಇದೆಯಂತೇ ಎಂದರೆ ಇಡ್ಲಿ ಈ ಕಾಲದ್ದಂತೂ ಅಲ್ಲ ಬಿಡಿ.
ಇಷ್ಟೆಲ್ಲಾ ಇಡ್ಲಿಯ ಪುರಾಣವನ್ನ ಹೇಳಿದ ಮೇಲೆ,ಇಂತಹ ಅದ್ಭುತ ತಿಂಡಿಯನ್ನು ಮಾಡಲು ನಾನು ಕಲಿತ ಬಗ್ಗೆಯೂ ಹೇಳದೆ ಹೋದರೆ ಆದೀತೆ.
ಚಿಕ್ಕಂದಿನಲ್ಲಿ ಅಮ್ಮ ಮನೆಯಲ್ಲಿ ಮಾಡುವಾಗ ಹದ ನೋಡಿ ಕೊಂಡಿದ್ದೆ.
ಇಡ್ಲಿ ಮಾಡಲು ಬೇಕಿರುವುದು ಅಕ್ಕಿ,ಉದ್ದು,ಉಪ್ಪು ಇದಿಷ್ಟು ಮಾತ್ರ.ಅದರಲ್ಲೂ ಅಕ್ಕಿ ಯಾವುದಾದರೂ ನಡೆಯುತ್ತೆ.ದುಬಾರಿ ಬೆಲೆಯ ಸಣ್ಣಕ್ಕಿ,ಬಾಸುಮತಿ ಅಂತಾ ಏನೂ ಬೇಡ.ಕಡಿಮೆ ಬೆಲೆಯ ದಪ್ಪಕ್ಕಿ,ಇಲ್ಲ ಸೊಸೈಟಿ ಅಕ್ಕಿ ಆದ್ರೂ ಸಾಕು.ನಿಜ ಹೇಳ್ಬೇಕು ಅಂದ್ರೆ ದಪ್ಪಕ್ಕಿಯಲ್ಲಿ ಇಡ್ಲಿ ಆಗೋ ಅಷ್ಟು ಚೆನ್ನಾಗಿ ಸಣ್ಣಕ್ಕಿಯಲ್ಲಿ ಆಗೋದಿಲ್ಲ.ಒಂದಷ್ಟು ಕುಚ್ಚಲಕ್ಕಿ ಸೇರಿಸಿದರೆ ಇನ್ನೂ ಚೆನ್ನ. ಕೆಲವೊಂದು ಅಂಗಡಿಗಳಲ್ಲಿ ಇಡ್ಲಿ ಅಕ್ಕಿ,ಇಡ್ಲಿ ತರಿ ಅಂತಾನೆ ಸಿಗುತ್ತೆ.ತರಿ ತಂದ್ರೆ ಕೆಲಸ ಇನ್ನೂ ಸುಲಭ, ರುಬ್ಬಿದ ಉದ್ದು , ತರಿ ಕಲಸಿ ಇಟ್ಟರೆ ಸಾಕು.
ಮನೆಗಳಲ್ಲಿ ರಾತ್ರೆ ಅನ್ನ ಏನಾದರೂ ಮಿಕ್ಕಿ ಹೋಗಿದ್ದರೆ ಅದಕ್ಕೊಂದು ಗತಿ ಕಾಣಿಸಲು,ನನ್ನ ಮಗಳ ಪ್ರಕಾರ, ಆ
ಚಿತ್ರಾನ್ನ ಅನ್ನೋ ಮನೆಯಿಂದ ಗಡಿಪಾರು ಮಾಡಲು ಯೋಗ್ಯವಾದಂತಹ ತಿಂಡಿ ಮಾಡೋಕ್ಕಿಂತ
ಇಡ್ಲಿಗೆ ನೆನೆ ಹಾಕುವುದೇ ವಾಸಿ.
ಮೊದಲು ಅಕ್ಕಿ ಮೂರು,ಉದ್ದು ಒಂದು ಇಷ್ಟು ಅನುಪಾತದಲ್ಲಿ ಸುಮಾರು ಎಂಟು ಗಂಟೆಗಳ ಕಾಲ ನೆನೆ ಹಾಕಿ,ನಂತರ ರುಬ್ಬುವಾಗ ಸ್ವಲ್ಪ ನೆನೆಸಿದ ಅವಲಕ್ಕಿಯೋ,ಇಲ್ಲ ಅನ್ನವನ್ನೋ ಸೇರಿಸಿ ರುಬ್ಬಿ ಹುದುಗು ಬರಲು ಇಡೀ ರಾತ್ರಿ ಬಿಡಬೇಕು. ಹುದುಗು ಅಂದಾಗ ನೆನಪಾಯಿತು ನೋಡಿ. ಆ ಮಹಾನ್ ಸೂಕ್ಷ್ಮಾಣು ಜೀವಿ ಶಾಸ್ತ್ರಜ್ಞ ಲೂಯಿ ಪಾಶ್ಚರ್ ಗಿಂತ ಮುಂಚಿತವಾಗಿಯೆ ನಮ್ಮ ದೇಶದ ಗೃಹಿಣಿಯರಿಗೆ ಸೂಕ್ಷ್ಮಾಣು ಜೀವಿಗಳ ಪ್ರಯೋಜನಗಳು ಗೊತ್ತಿದ್ದವು.ಪಾಪ ಸರಿಯಾದ ಮಾರ್ಗದರ್ಶನ,ಸಲಹೆ ಇಲ್ಲದೆ ತಮ್ಮ ಆವಿಷ್ಕಾರಗಳ ಬಗ್ಗೆ ಅವರಿಗೆ ಪೇಟೆಂಟ್ ಪಡೆಯಲಾಗಿಲ್ಲ ಅಷ್ಟೇ. ಇರಲಿಬಿಡಿ,ಪೇಟೆಂಟ್ ಸಿಕ್ಕರೆಷ್ಟು ಬಿಟ್ಟರೆಷ್ಟು,ಜನಕ್ಕೆ ಒಂದು ಉತ್ತಮ ಗುಣ ಮಟ್ಟದ ಆಹಾರ ಒದಗಿಸುವ ಪುಣ್ಯದ ಕೆಲಸ ಮಾಡುತ್ತಿಲ್ಲವೇ?
ಹೂಂ ಸರೀ,ಈಗ ಬೆಳಿಗ್ಗೆಗೆ ಹುದುಗು ಬರಿಸಿದ್ದಾಯಿತು.
ನಂತರ ಇಡ್ಲಿ ತಟ್ಟೆಗಳಿಗೆ ಇಡ್ಲಿ ಹಿಟ್ಟು ಹಾಕಿ ಇಡ್ಲಿ ಪಾತ್ರೆಗೆ ಹಾಕಿ ಹಬೆಯಲ್ಲಿ ಹತ್ತು ನಿಮಿಷ ಬೇಯಿಸಿದರೆ ಆಯಿತು.ಬಿಸಿ ಬಿಸಿಯಾದ ಹಬೆಯಾಡುವ ಇಡ್ಲಿ ಸಿದ್ಧ.
ಛೇ ಇಷ್ಟು ಸುಲಭದ ಕೆಲಸ ಆಗಿದ್ದಿದ್ದರೆ ನಾನ್ಯಾಕೆ ಈ ಲೇಖನ ಬರೀತಿದ್ದೆ ಹೇಳಿ.ನಾನು ಎಷ್ಟೇ ಪ್ರಯತ್ನ ಪಟ್ಟರೂ ನಾನು ಮಾಡುತ್ತಿದ್ದ ಇಡ್ಲಿ ಗಟ್ಟಿ ಅಂದ್ರೆ ಗಟ್ಟಿ.ಒಂದು ದಿನವೂ ಮೃದುವಾಗುತ್ತಿರಲಿಲ್ಲ.
“ನಾಳೆ ತಿಂಡಿಗೆ ಇಡ್ಲಿ ಮಾಡ್ತೀನಿ” ಅಂತ ನಾನು ಏನಾದರೂ ಅಂದ್ರೆ ಮುಗೀತು.ನನ್ನ ಗಂಡ ಮಕ್ಕಳು ಮುಖ ಮುಖ ನೋಡಿಕೊಂಡು ನಿಟ್ಟುಸಿರು ಬಿಡುತ್ತಿದ್ದರು.ನನ್ನ ಗಂಡ ಹಿಂದಿನ ರಾತ್ರಿಯೇ”ಸ್ವಲ್ಪ ಅನ್ನ ಜಾಸ್ತಿ ಮಾಡಿ ಬಿಡೆ,ನಾಳೆ ಬೆಳಗ್ಗೆ ಸ್ವಲ್ಪ ಬೇಗ ಕಾಲೇಜ್ ಗೆ ಹೋಗಬೇಕು,ಬೆಳಿಗ್ಗೆ ಅನ್ನ ಮೊಸರು ತಿಂದು ಹೋಗುತ್ತೇನೆ”ಎಂದು ತಪ್ಪಿಸಿ ಕೊಳ್ಳುವ ಉಪಾಯ ಹೂಡುತ್ತಿದ್ದರು.ನಾನು ಬಿಡುತ್ತೇನೆಯೆ?ಇಲ್ಲ ಅಂದ್ರೆ ಇಲ್ಲ.ಮಾರನೇ ಬೆಳಿಗ್ಗೆಗೆ ಸ್ವಲ್ಪವೂ ಅನ್ನ ಮಿಕ್ಕದ ಹಾಗೆ ಮಾಡಿ, ಇಡ್ಲಿಯೇ ಮಾಡಿ,ಅವರು ತಿನ್ನುವವರೆಗೆ ಅವರ ಪಕ್ಕವೇ ನಿಂತು,ಬಿಡದೆ ತಟ್ಟೆಯಲ್ಲಿ ಹಾಕಿರುವ ಎಲ್ಲಾ ಇಡ್ಲಿ ಖಾಲಿ ಮಾಡಿಸಿಯೆ ಕಳಿಸುವುದು.ಮಕ್ಕಳಿಗೆ ಪುಸಲಾಯಿಸಲು,ಬೆಲ್ಲ ತೆಂಗಿನ ಸಿಹಿ ಚಟ್ನಿ ಮಾಡಿ,ಪೂಸಿ ಮಾಡಿ ತಿನ್ನಿಸಿ ಕಳಿಸುವಷ್ಟರಲ್ಲಿ ಸಾಕು ಸಾಕಾಗುತ್ತಿತ್ತು.ನನ್ನ ಗಂಡ”ಅಲ್ಲ ಕಣೇ,ಇಷ್ಟೊಂದು ಕಷ್ಟ ಬೀಳುವ ಬದಲು, ಅದೇ ಹಿಟ್ಟಿನಲ್ಲಿ ದೋಸೆ ಮಾಡಿದರಾಗದೆ”ಅಂದರೂ ನನ್ನ ಮನಸ್ಸು ಅಷ್ಟು ಸುಲಭದಲ್ಲಿ ಶಸ್ತ್ರಾಸ್ತ್ರ ಗಳ ಕೆಳಗಿಳಿಸಲು ಒಪ್ಪುತ್ತಿರಲಿಲ್ಲ.ನಾನೆಷ್ಟು ಪ್ರಯತ್ನಪಟ್ಟು ಮಕ್ಕಳಿಗೆ ಮನೆಯಲ್ಲಿ ತಿನ್ನಿಸಿ ಕಳಿಸಿದ್ದರೂ,ಮಧ್ಯಾಹ್ನದ ಲಂಚ್ ಬಾಕ್ಸ್ ಗೆ ಹಾಕಿ ಕಳಿಸಿದ್ದು ಹಾಗೆ ವಾಪಸ್ ಬರುತ್ತಿತ್ತು.ಮಕ್ಕಳ ಕೇಳಿದರೆ ಇಡ್ಲಿ ಮಾಡಿದಾಗೆಲ್ಲಾ “ಸ್ಕೂಲ್ನಲ್ಲಿ ಲಂಚ್ ಗೂ ಬಿಡದೆ ಸ್ಪೆಷಲ್ ಕ್ಲಾಸ್ ತೊಗೊಂಡ್ರು ಅಮ್ಮ” ಅನ್ನುವ ಉತ್ತರ ಯಾವಾಗಲೂ ಬರುತ್ತಿತ್ತು.
ಇರಲಿ ಬಿಡಿ ಮಕ್ಕಳು ತಿನ್ನದೆ ಹೋದರೆ ಏನಾಯಿತು,ನನ್ನ ಮಿಕ್ಕಿರುವ ಅಡಿಗೆಗೆ ಗತಿ ಕಾಣಿಸಲು ಎಂದೇ ಮನೆಯೆದುರು ಒಂದು ನಾಯಿ ಮರಿಗೆ ಅನ್ನ ಹಾಕಿಕೊಂಡು ಸಾಕಿ ಕೊಂಡಿದ್ದೇನೆ.ಅವನೋ ನಮ್ಮ ಮನೆ ಗೇಟ್ ಬಳಿಯೇ ಸುಳಿದಾಡಿಕೊಂಡು,ನನ್ನ ಅಡಿಗೆಯ ಪಳೆಯುಳಿಕೆಗಳಿಗೆ ಗತಿ ಕಾಣಿಸಿಕೊಂಡು,ರಾತ್ರಿ ಹೊತ್ತು ಮನೆ ಕಾಯ್ದುಕೊಂಡು ಇದ್ದಾನೆ.ಒಂದು ಸಂಜೆ ಹೀಗೆ ಮಕ್ಕಳು ಶಾಲೆಯಿಂದ ಮರಳಿ ತಂದಿದ್ದ ಲಂಚ್ ಬಾಕ್ಸ್ ನಲ್ಲಿದ್ದ ಇಡ್ಲಿಗಳ ತಂದು ಮಾಮೂಲಿನಂತೆ ನಮ್ಮ ನಾಯಿಮರಿ ತಟ್ಟೆಗೆ ಹಾಕಿದೆ.ಅವನೋ ದೂರದಿಂದಲೇ ಬಾಲ ಅಲ್ಲಾಡಿಸಿಕೊಂಡು,ಉತ್ಸಾಹದಿಂದ ಓಡಿ ಬಂದವನು,ಇಡ್ಲಿ ನೋಡಿ,ಮೂಸಿ ನೋಡಿ ಹಾಗೆಯೇ ಮರಳಿ ಓಡಿ ಹೋಗಿ ಬಿಟ್ಟ.ನೋಡುತ್ತಿದ್ದ ನನ್ನ ಮಕ್ಕಳಿಬ್ಬರೂ ಹೊಟ್ಟೆ ಹಿಡಿದುಕೊಂಡು ನಗ ಲಾರಂಭಿಸಿದರು.ನಾನು ಉಕ್ಕಿ ಬಂದ ಸಿಟ್ಟು ತಡೆಯ ಲಾರದೆ ಕಟ ಕಟನೆ ಹಲ್ಲು ಕಡಿದು “ಇನ್ನೊಂದು ದಿನ ನಿನಗೆ ಅನ್ನ ಹಾಕಿದ್ರೆ ನೋಡು”ಎಂದು ಮರಿಯನ್ನು ಶಪಿಸಿ ಒಳ ಬಂದೆ.ನನ್ನ ಗಂಡ ಅಪಾರ ಕರುಣೆ,ಕನಿಕರದಿಂದ”ನಿನಗ್ಯಾಕೆ ಇಷ್ಟು ಕೆಟ್ಟ ಹಠ,ಇಡ್ಲಿ ನಿನಗೆ ಮಾಡಲು ಬರುವುದಿಲ್ಲ ಅನ್ನೋದು ನೀನ್ಯಾಕೆ ಒಪ್ಪಿಕೊಳ್ಳುವುದಿಲ್ಲ,ಬೇರೆ ಅಡುಗೆ ಚೆನ್ನಾಗೇ ಮಾಡ್ತಿಯಲ್ಲ,ಇದೊಂದು ಬರದಿದ್ದರೆ ಏನಾಯಿತು ಬಿಡು,ತಿನ್ನಲೇಬೇಕು ಅನ್ನಿಸಿದರೆ ಹೋಟೆಲ್ ನಿಂದ ತಂದರಾಯಿತು”ಎಂದು ಸಂತೈಸಿದರು. ನಾನೂ ಸಮಾಧಾನದಿಂದ ಹಾಗೇ ಅಂದುಕೊಂಡು ಸುಮ್ಮನಾಗಿದ್ದೆ.
ಆದರೆ ಒಂದು ದಿನ ಶಾಲೆಯಲ್ಲಿ ಸಹೋದ್ಯೋಗಿ ಯೊಬ್ಬರು, ಮೆದು ಮೆದು ಇಡ್ಲಿಗಳು ಜೊತೆಗೆ ಪುದೀನಾ ಚಟ್ನಿ ಮಾಡಿ ತಂದು ಎಲ್ಲರಿಗೂ ಕೊಟ್ಟರು. ಸವಿಯುತ್ತಾ , ಅಚಾನಕ್ ಎಂದು”ಇವರ ಬಳಿಯೇ ರೆಸಿಪಿ ಕೇಳುವ”ಅನ್ನಿಸಿ ಕೇಳಿದೆ.ತೊಗೊ ಕೇಳಿದ್ದು ಒಬ್ಬರನ್ನು ಆದರೆ ಉಳಿದ ಎಲ್ಲಾ ಆರು ಜನರು ಒಂದೊಂದು ರೀತಿಯ ಇಡ್ಲಿಗಳ ರೆಸಿಪಿಗಳ ದಯ ಪಾಲಿಸಿದರು.ಜೊತೆಗೆ,ಹಿಟ್ಟು ರುಬ್ಬುವ ವಿಧಾನದಿಂದಾ ಹಿಡಿದು, ಎಂತಹ ಅಕ್ಕಿ ಬಳಸಬೇಕು,ಸಾಮಗ್ರಿಗಳ ಅನುಪಾತ,ಎಷ್ಟು ಹೊತ್ತು ನೆನೆ ಹಾಕಬೇಕು,ಯಾವ ಹದದ ತರಿ ಬರುವ ಹಾಗೆ ರುಬ್ಬಬೇಕೂ,ಸರಿಯಾಗಿ ಎಷ್ಟು ಹೊತ್ತು ಹುದುಗು ಬರಿಸಬೇಕು ಅಂತೆಲ್ಲ ದೊಡ್ಡ ಮಟ್ಟದ ಚರ್ಚೆಯೇ ನಡೆದು ಹೋಯಿತು.
ಸರಿ ಹೊಸ ಹುಮ್ಮಸ್ಸಿನಿಂದ ಮಾರನೇ ದಿನವೇ ಎಲ್ಲರ ಸಲಹೆ ಸೂಚನೆಗಳ ಪಾಲಿಸಿ,ಸಾಮಗ್ರಿಗಳ ನೆನೆಸಿ,ರುಬ್ಬಿ, ಹುದುಗು ಬರಿಸಿ ಮಾರನೆ ದಿನ ಇಡ್ಲಿ ಮಾಡಿದಾಗ ಸರಿಯಾಗಿ ಆಯಿತೇ? ಇಲ್ಲ. ಅದೇ ಗಟ್ಟಿ ಕಲ್ಲಿನ ಇಡ್ಲಿಗಳೆ!ನನಗೆ ಅಳುವುದೊಂದು ಬಾಕಿ.ಜೀವನದಲ್ಲಿ ಎಂತೆಲ್ಲ ಪರೀಕ್ಷೆಗಳ ಪಾಸ್ ಮಾಡಿದ್ದೇನೆ,ಎಂತೆಲ್ಲ ಕಷ್ಟಗಳ ನೀಸಿದ್ದೇನೆ ಆದರೆ ಇದೊಂದು ಇಡ್ಲಿ ನನ್ನ ಹಿಡಿತಕ್ಕೆ ಸಿಗುತ್ತಿಲ್ಲವಲ್ಲ ಎಂದು ಅಪಾರ ದುಕ್ಕವಾಯಿತು.
ಶಾಲೆಗೆ ಹೋಗಿ ಗೆಳತಿಯರಿಗೆ ಹೇಳಿಕೊಂಡು ಕೊರಗಿದೆ.ಅವರು ಸಮಾಧಾನಿಸಿ “ನೀವು ಕಲಿಯುವವರೆಗೆ ನಾವು ದಿನಾ ಒಬ್ಬೊಬ್ಬರು ಇಡ್ಲಿ ಮಾಡಿ ತಂದು ಕೊಡ್ತೀವಿ.ಸಮಾಧಾನ ತಂದುಕೊಳ್ಳಿ” ಎಂದು ಸಂತೈಸಿದರು.ಆದ್ರೆ ಎಷ್ಟು ದಿನ ಅಂತ ಪರಾವಲಂಬಿ ಆಗೋದು ಸರಿ ಹೇಳಿ? ಮತ್ತೆ ಛಲ ಬಿಡದ ತ್ರಿವಿಕ್ರಮನಂತೆ ಮತ್ತೆ ಮತ್ತೆ ಮೆದುವಾದ ಇಡ್ಲಿಗಳ ಮಾಡುವ ತಂತ್ರಗಳ ಹುಡುಕಲಾರಂಭಿಸಿದೆ.
ನನ್ನ ಸ್ನೇಹಿತೆಯೊಬ್ಬಳು”ಅಲ್ಲಾ ಕಣೆ ಮಿಕ್ಸಿಯಲ್ಲಿ ಹಿಟ್ಟು ಆಡಿಸಿ ಮಾಡ್ತಾ ಇದ್ದಾಗ ನಮ್ಮನೆಯಲ್ಲಿ ಕೂಡ ಇಡ್ಲಿ ಚೆನ್ನಾಗಿ ಆಗ್ತಾ ಇರ್ಲಿಲ್ಲ.ಆಮೇಲೆ ನಮ್ಮಮ್ಮ ಹೇಳಿದ ಹಾಗೆ ಒಂದು ಗ್ರೈಂಡರ್ ತೊಗೊಂಡು ರುಬ್ಬಲು ಶುರು ಮಾಡಿದೆ.ಈಗ ಯಾವ ಹೋಟೆಲ್ ಇಡ್ಲಿಗೂ ಕಮ್ಮಿ ಇಲ್ಲದ ಹಾಗೆ ಮಾಡ್ತೀನಿ ಗೊತ್ತಾ”ಎಂದು ಬೀಗಿದಳು.
ಸರಿ ಅಷ್ಟರಲ್ಲಿ ನಮ್ಮ ಮನೆಯ ಗೃಹಪ್ರವೇಶದ ಸಮಯ ಬಂತು.ನನ್ನ ಕಸಿನ್ ಒಬ್ಬ “ಅಕ್ಕ ಮನೆಗೆ ಏನು ಉಡುಗೊರೆ ಬೇಕು ಕೇಳು “ಎಂದಾಗ,ನಾಚಿಕೆ ಬಿಟ್ಟು “ಒಂದು ಗ್ರೈಂಡರ್ ಕೊಡಿಸೋ” ಎಂದು ಕೇಳಿ ತೆಗೆಸಿ ಕೊಂಡೆ.ಪುಣ್ಯಕ್ಕೆ ನನ್ನ ಗಂಡನಿಗೆ ನಾನು ಕೇಳಿ ಪಡೆದು ಕೊಂಡದ್ದು ಈ ಗ್ರೈಂಡರ್ ಅನ್ನೋದು ಇನ್ನೂ ಗೊತ್ತಾಗಿಲ್ಲ.ಗೊತ್ತಾದರೆ ಅಷ್ಟೇ, ಉಗಿದು ಉಪ್ಪಾಕುತ್ತಾರೆ.
ಆದರೇನು ಬಿಡಿ , ಮಿಕ್ಸಿಲಿ ರುಬ್ಬಿದ್ರೇನು,ಗ್ರೈಂಡರ್ ನಲ್ಲಿ ರುಬ್ಬಿದ್ದರೇನು,ನನ್ನ ಇಡ್ಲಿ ಮೆದುವಾಗಲೇ ಇಲ್ಲ.
ಆದರೆ ನನ್ನ ಪ್ರಯತ್ನಗಳನ್ನು ಕೈ ಬಿಡಲು ಮನಸು ಬಾರದೆ ಆಧುನಿಕ ತಂತ್ರಜ್ಞಾನಕ್ಕೆ ಮೊರೆ ಹೋದೆ.
ಈ ಆಧುನಿಕ ತಂತ್ರಜ್ಞಾನದ ಯುಗದಲ್ಲಿಹುಡುಕಿದರೆ ಗೂಗಲ್ನಲ್ಲಿ ದೇವರೊಬ್ಬನನ್ನು ಬಿಟ್ಟು ಇನ್ನೆಲ್ಲಾ ಸಿಕ್ಕಿ ಬಿಡುತ್ತದೆ.ಅಂತೆಯೇ ಗೂಗಲನ ಮೊರೆ ಹೋದಾಗ ಯೂ ಟ್ಯೂಬ್ ನಲ್ಲಿ ಇಡ್ಲಿ ಮಾಡುವ ವಿಡಿಯೋಗಳು ನೂರಾರು ತೆರೆದುಕೊಂಡವು.ದಿನಾ ಬಸ್ನಲ್ಲಿ ಪ್ರಯಾಣ ಮಾಡುವಾಗ ನಿದ್ದೆ ಹೊಡೆಯುವ ಬದಲು ಸುಮಾರು ಇಡ್ಲಿ ವಿಡಿಯೋಗಳನ್ನು ನೋಡಿದೆ.ಬೇರೆ ಬೇರೆ ರೀತಿಯ ಅಕ್ಕಿ ಬಳಸಿ ಮತ್ತೆ ಮತ್ತೆ ಮಾಡಿದೆ.ಮಕ್ಕಳು ಮುಷ್ಕರ ಹೂಡಿದರೂ,ಗಂಡ ಮುನಿಸಿಕೊಂಡರೂ ವಾರಕ್ಕೊಮ್ಮೆ ಛಲ ಬಿಡದೇ ಮಾಡಿದೆ. ಫಲ ಮಾತ್ರ ಕಾಣಲಿಲ್ಲ.ಕೊನೆಗೆ ಬೇರೆ ದಾರಿ ಕಾಣದೆ ಇಡ್ಲಿ ಇನ್ನೆಂದೂ ಮಾಡಬಾರದು ಎಂದು ದೃಢ ನಿರ್ಧಾರ ಕೈಗೊಂಡು ಸುಮ್ಮನಾದೆ.
ಹಾಗೆ ಮನೆಯಲ್ಲಿ ಇಡ್ಲಿ ಮಾಡದೇ ಒಂದೆರಡು ವರ್ಷ ಕಳೆದು ಹೋದವು.ಒಮ್ಮೆ ಫೇಸ್ಬುಕ್ ನಲ್ಲಿ ಜಾಲಾಡುವಾಗ ತಮಿಳುನಾಡಿನ ಒಂದು ಹಳ್ಳಿಯಲ್ಲಿ ಅಜ್ಜಿಯೊಬ್ಬರು ಹಲವು ವರ್ಷಗಳಿಂದ ಒಂದುರೂಪಾಯಿಗೆ ಒಂದು ಇಡ್ಲಿಯಂತೆ ಮಾರುತ್ತಾ, ಜನ ಸೇವೆ ಮಾಡುವ ಕಥೆ ಕುತೂಹಲ ಮೂಡಿಸಿತು.ಒಂದು ದೊಡ್ಡ ಸೌದೆ ಒಲೆ,ಒಂದು ಅಲ್ಯೂಮಿನಿಯಮ್ ಇಡ್ಲಿ ಪಾತ್ರೆ,ಹಿಟ್ಟು ಚಟ್ನಿ ರುಬ್ಬಲು ಒಂದು ದೊಡ್ಡ ಒರಳು ಮತ್ತು ಗುಂಡು ಕಲ್ಲು,ಇವಿಷ್ಟೇ ಅಜ್ಜಿಗಿದ್ದ ಸೌಕರ್ಯ. ಎಷ್ಟೇ ವರ್ಷಗಳಾದರೂ ಲಾಭದ ಆಶೆ ಮಾಡದೆ,ಒಂದು ರೂಪಾಯಿಗೆ ಒಂದು ಇಡ್ಲಿ ಯಂತೇ ಮಾರುವ,ಅಜ್ಜಿ ಯ ಅನುಭವಗಳು ನಿಜಕ್ಕೂ ಮನಸ್ಸು ತಟ್ಟಿದವು. ಎಷ್ಟೋ ಜನ ದಿನನಿತ್ಯ ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗುವವರು ಖಾಯಂ ಆಗಿ ಅಜ್ಜಿ ಹೋಟೆಲ್ನಲ್ಲಿ ತಿಂಡಿ ತಿಂದು ಹೋಗುತ್ತಾರಂತೆ.
ಬಡತನವಾಗಲಿ, ದೈಹಿಕ ಶ್ರಮವಾಗಲೀ ಅಜ್ಜಿಯ ಜೀವನೋತ್ಸಾಹವನ್ನ ಕುಗ್ಗಿಸಿರಲಿಲ್ಲ. “ಇದೇ ಕೆಲಸ ಯಾಕೆ ಮಾಡ್ತೀರಾ ಅಜ್ಜಿ” ಅಂತ ಸಂದರ್ಶಕರು ಕೇಳಿದ್ದಕ್ಕೆ ಅಜ್ಜಿ,”ಇದೇ ಕೆಲಸ ನನಗೆ ಇಷ್ಟ,ಎಷ್ಟೊಂದು ಜನಕ್ಕೆಸಹಾಯ ಆಗಿದೆ. ಇದೇ ನನಗೆ ನೆಮ್ಮದಿ ಕೊಡುತ್ತೆ”ಎಂದು ಹೇಳಿದ್ದರು.ತಕ್ಷಣ ನನ್ನ ಮನಸ್ಸಿಗೆ ಹೊಳೆದಿದ್ದು “ಯಾವುದೇ ಕೆಲಸ ಆಗಲಿ,ಹಠ ಹಿಡಿದು ಆಗಲೇಬೇಕೂ ಅಂತ ಮಾಡುವುದಕ್ಕಿಂತ,ಪ್ರೀತಿಯಿಂದ ಮಾಡಬೇಕಲ್ಲವೇ.”
ನಂತರ ಮನೆಗೆ ಬಂದು ಇಡ್ಲಿ ಚೆನ್ನಾಗಿ ಆಗಲೇಬೇಕು ಅನ್ನೋ ನಿರೀಕ್ಷೆ ಹಠ ಇಲ್ಲದೆ,ಚೆನ್ನಾಗಿ ಆಗಲಿ ಎಂದು ಆಶಿಸುತ್ತಾ ಸಮಾಧಾನದಿಂದ ಮಾಡಿದೆ.ಇಡ್ಲಿ ತಿಂದ ನನ್ನ ಮಕ್ಕಳು”ಅಮ್ಮ,ಇಡ್ಲಿ ಇವತ್ತು ಸೂಪರ್ ಆಗಿದೆ”ಎಂದು ಕೋರಸ್ ನಲ್ಲಿ ಕಿರುಚಿಕೊಂಡರು.
***************
idliyashte chandada lekhana
ನಿಮ್ಮ ಅನುಭವದ ಸಾಹಿತ್ಯ ಕಣ್ಣಿಗೆ ಕಾಣುವ ರೀತಿಯಲ್ಲಿ ಇಡ್ಲಿ ಕಥಾ ಲೋಕಕ್ಕೆ ಕರೆದೊಯ್ಯುವ ಪರಿಕಲ್ಪನೆ, ಅತ್ಯದ್ಭುತ.
Nimma anubhavagala saramale suuuuuper
ಎಂದಿನಂತೆ ಚೆಂದದ ಬರೆಹ ಸಮತಾ
ಲೇಖನದ ಸಾರ ಸೊಗಸಾಗಿದೆ…. ನನಗೂ ಇಡ್ಲಿ ಚಟ್ನಿ ತಿನ್ನುವ ಮನಸ್ಸಾಗಿದೆ….
ಇಡ್ಲಿ ಪುರಾಣ ಸೊಗಸಾಗಿ ಮೂಡಿ ಬಂದಿದೆ
Congratulations Samatha..
Ur experience n experiment on achieving accurate idly’s is so Very relatable to mine…that I started bursting out with laughter…
Fully fermented idly story
ಓದುಗರಿಗೆ ಇಡ್ಲಿಯನ್ನು ಅಚ್ಚುಕಟ್ಟಾಗಿ ಬಡಿಸಿದ ಲೇಖನ .
ಪ್ರಕಟಿಸಿದ ಸಂಗಾತಿಗೆ ಹಾಗೂ ಓದಿ ಅಭಿಪ್ರಾಯಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು
ಸಮತಾ…
ನೀವು ಛಲಬಿಡದ ಸಾಧಕಿ. ಸಾಧಿಸುವವರೆಗೂ ಸಾಧನೆಯ ಹಾದಿಯಲ್ಲಿ ಮುನ್ನಡೆಯುವ ನಿಮ್ಮ ಗುಣ ಮೆಚ್ಚುಗೆಗೆ ಪಾತ್ರವಾಗಿದೆ. ನಿಮ್ಮ ಇಡ್ಲಿಯ ಕೈರುಚಿ ನಮಗೂ ಬೇಕಾಗಿದೆ. ಬರಹದಲ್ಲಿನ ಪದಗಳು ಮೊಗ್ಗಿನ ಜಡೆಯಂತೆ ಒಂದೊಂದು ಪದಗಳು ಸುಂದರವಾಗಿ ಮೂಡಿ ಬಂದು ಅದ್ಭುತವಾದ ಲೇಖನವಾಗಿದೆ.
ನೀವೂ ಇಡ್ಲಿಯೂ ಚೆಂದ ಮಾಡ ಬಲ್ಲಿರಿ,ಜೊತೆಗೆ ಇಡ್ಲಿ ಕುರಿತ ಲೇಖನವನ್ನೂ ಚೆಂದಕ್ಕೆ ಲಹರಿಯಂತ ಬರೆಯ ಬಲ್ಲಿರಿ.ಒಳ್ಳೆಯ ಬರಹ ಸಮತಾ
Lekhana thumba chanaagide, feel like a part of the article