ವಾಕಿಂಗ್..

ಪ್ರಬಂಧ

ವಾಕಿಂಗ್..

ಲತಾಶ್ರೀ ಈಶ್ವರ್


ಮಾನವರ ವಾಕಿಂಗ್ ಕತೆ ,ಅನುಭವ ಎಲ್ಲರಿಗೂ ಸಾದಾರಣ ಗೊತ್ತಿರುತ್ತೆ, ಆದರೆ ಈಗ ನಾನು ನಿಮಗೆ ಹೇಳ ಹೊರಟಿರೋದು ಶ್ವಾನಗಳ ಅಂದರೆ ನಾಯಿಗಳ ವಾಕಿಂಗ್ ಕತೆ.


ಮಲೆನಾಡಿನ ನನ್ನ ತವರು ಮನೆಯ ನನ್ನಣ್ಣ ಶ್ವಾನಪ್ರಿಯ.  ಶ್ವಾನಪ್ರಿಯ ಸಂಘ ಮಾಡಿ  ಅದಕ್ಕೆ ಅಧ್ಯಕ್ಷರನ್ನಾಗಿ ಮಾಡಿದರೂ ತಪ್ಪಾಗಲ್ಲ. ಅವನ ನಾಯಿ ಹೆಸರು ಸೋನು. ಮುಂದೆ ನಾನು ಸೋನು ಅಂತಲೇ ಹೇಳುವೆ,  ಏಕೆಂದರೆ ಸಾಕಿದವರಿಗೆ ನಾಯಿ ಅಂದರೆ ಬೇಸರ ಆಗುತ್ತೆ. ಇದು ನನ್ನ ಅನುಭವದ ಮಾತು.  ನನ್ನ ಗಂಡನ ನ office building owner ನಾಯಿ ಸಾಕಿದ್ದರು. ಅವರಿಗೆ ನಿಮ್ಮ‌ನಾಯಿ ಎಲ್ಲಿದೆ?ಅಂದರೆ ಅವರಿಗೆ ಬಾರೀ ಕೋಪ ಬರುತ್ತಿತ್ತು. ಟೈಗರ್ ಅವನ ಹೆಸರು, ಟೈಗರ್ ಅನ್ನಮ್ಮ, ನಾಯಿ  ಅನ್ನಬೇಡ ಅನ್ನೋರು.



ಇನ್ನು ಮನೆ ನಾಯಿಗಳಿಗೆ ಮನುಷ್ಯ ರ ಹೆಸರಿಡಬೇಡಿ.  ನಮ್ಮ ಮನೆ ನಾಯಿ ಹೆಸರು ಲೋಕಿ . ಇವನನ್ನ ಯಾರೋ ಸಾಕಿದವರು ಬೀದಿಗೆ ಬಿಟ್ಟಿದ್ದರೋ ಅಥವಾ  ಇವನೇ  ಸಾಕಿದವರ ಮನೆಯಿಂದ   ತಪ್ಪಿಸಿಕೊಂಡನೋ ಗೊತ್ತಿಲ್ಲ. ಆಕಸ್ಮಿಕವಾಗಿ10 ತಿಂಗಳ ಮರಿ‌ ನಮ್ಮ‌ಮನೆ ಸದಸ್ಯ ನಾದ.  Marvel ಸಿನೆಮಾ ದಲ್ಲಿ ಬರುವ ಒಂದು ಪಾತ್ರ ಲೋಕಿ( god of mischief). ಲೋಕಿ ಅಂತ ನಾಮಕರಣ ಮಾಡಿದೆವು.  ಆದರೆ ಎಲ್ಲರೂ ಲೋಕೇಶ ಅಂತ ತಿಳಿದುಕೊಳ್ಳುತ್ತಾರೆ. ಅವನ ಹಳೆ ಯಜಮಾನ ಯಾವ ಹೆಸರಿಟ್ಟಿದ್ದರೋ ನಮಗೆ ಗೊತ್ತಿಲ್ಲ.  ನಾವು ನೂರಾರು ಹೆಸರು ಅವನಿಗೆ ಕರೆದು‌ ನೋಡಿದೆವು. ಯಾವ ಹೆಸರಿಗೂ ಅವನು ನಮ್ಮ‌ಕಡೆ ತಿರುಗಿ ನೋಡಲೇ ಇಲ್ಲ.  ಅಂತೂ ಇಂತೂ ಸ್ವಲ್ಪ ದಿನಕ್ಕೆ ಲೋಕಿ ಹೆಸರಿಗೆ ಹೊಂದಿಕೊಂಡ. ಒಂದು ದಿನ ಅಪರಿಚಿತರೊಬ್ಬರು ಮನೆಗೆ ಬಂದರು. ನಾನು ಬಾಗಿಲು ತೆಗೆದು ಅವರನ್ನ ಒಳಗೆ ಕೂರಿಸುವ ಮೊದಲು ಮಗನಿಗೆ ಕೂಗಿ ಹೇಳಿದೆ “ಲೋಕಿನ ಟೆರೇಸ್ನಲ್ಲಿ ಕಟ್ಟಿಹಾಕು” . ಬಂದವರ ಮುಖ ಸಪ್ಪಗಾಯಿತು. ಅರ್ಥ ವಾಗಲಿಲ್ಲ ನನಗಾಗ.  ಅವರು ಹೊರಟು ಹೋದ ಮೇಲೆ  ಗೊತ್ತಾಯಿತು ಅವರ ಹೆಸರು ಲೋಕಿ ಆಲಿಯಾಸ್ ಲೋಕೇಶ್ ಅಂತ. ಮುಖ ಸಪ್ಪಗಾಗುವ ಸರದಿ ನನ್ನದಾಯಿತು ಈಗ.
ಲೋಕಿನ ವಾಕಿಂಗ್ ಕರೆದುಕೊಂಡು ಹೋಗುವ ಕೆಲಸ ನನ್ನದಾಗಿದ್ದರಿಂದ ‍ ನಮ್ಮ ಅಕ್ಕಪಕ್ಕದ ಮನೆ ಮಕ್ಕಳಿಗೆ ನಾನು ಲೋಕಿ ಆಂಟಿ ಯಾಗಿ ಬದಲಾಗಿದ್ದೇನೆ. ನನ್ನ ಮೂಲನಾಮವೇ ಕಾಣೆಯಾಗಿದೆ. ವಾಕಿಂಗ್ ಮಾಡಲು ಜೊತೆಗಾರರಿಲ್ಲ ಅಂತ ಬೇಸರಿಸುತ್ತಿದ್ದೆ. ಈಗ ಲೋಕಿನೇ ನನ್ನ ಜೊತೆಗಾರ.  ಇಷ್ಟು ವರ್ಷ ಅಪರಿಚಿತರಾಗಿದ್ದ  ನಮ್ ಏರಿಯಾ ದ  ಜನರು, ಅವನಿಂದ ನಾವುಗಳು  ಇಡೀ ಏರಿಯಾಕ್ಕೆ ಬಲು ಬೇಗ ಪರಿಚಿತರಾಗಿದ್ದೇವೆ. ಜೊತೆಗೆ ಯಾವ ರೋಡ್ ನಲ್ಲಿ ಬೀದಿನಾಯಿಗಳು ಎಲ್ಲೆಲ್ಲಿ ಇರುತ್ತವೆ? ಅವುಗಳ ಸಂಸಾರದ ಕತೆ, ಯಾರ ಮನೆಯಲ್ಲಿ ಯಾವ ಜಾತಿ ನಾಯಿಗಳಿವೆ?  ಮತ್ತು‌ ಆ ಮನೆಯವರ ಜೊತೆ ಆತ್ಮಿಯತೆ ಶುರುವಾಗಿದೆ. ಹಾಗೆ ಲೋಕಿಗೆ ಮದುವೆ ಮಾಡಿಸಲು ಹುಡುಗಿ ಮನೆಯವರು ಪರಿಚಿತರಾಗುತ್ತಿದ್ದಾರೆ. ಏಕೆಂದರೆ ನಾಯಿ ಸಾಕಿದವರಿಗೆ ಇದರ  ಕಷ್ಟದ ಅರಿವು ಇರುತ್ತದೆ ಎನ್ನುವುದು ನನ್ನ ಅಭಿಪ್ರಾಯ. ನಾವು ಯಾರಿಗೆ ಬೀಗರಾದರೆ ಒಳ್ಳೆಯದು ಅಂತ ಯೋಚಿಸುತ್ತಿದ್ದೇವೆ.



ಈಗ ಸೋನು ಕತೆಗೆ ಬರೋಣ . ವಾಕಿಂಗ್ ಅಂದರೆ ಸೋನುಗೆ ಪಂಚಪ್ರಾಣ. ಎಲ್ಲ ನಾಯಿಗಳಿಗೆ ಮೀನು ಮಾಂಸ ಇಷ್ಟವಾದರೆ ಇವನಿಗೆ ಅವಲಕ್ಕಿ ಸಕ್ಕರೆ ಹಾಲು ಬಲು ಇಷ್ಟ. ರಾತ್ರಿ ಊಟವಾದ ಮೇಲೆ ಛಳಿ ಗಾಳಿ ಮಳೆ ಎನ್ನದೆ. ವಾಕಿಂಗ್ ಹೋಗಲೇ ಬೇಕು. ವಾಕಿಂಗ್ ಬೇಡ ಅಂತ ಅಂದರೆ ಗಲಾಟೆ ಮಾಡಿ ಕೂಗಿ ಬಟ್ಟೆ ಹಿಡಿದು ಎಳೆದು ವಾಕಿಂಗ್ ಹೋಗುವ ತನಕ ಬಿಡಲಾರ.  ಅವನನನ್ನು ಕರೆದುಕೊಂಡು 3-4   ಕಿ.ಮೀ ದೂರ ವಾಕಿಂಗ್  ಹೊರಟರೆ ಅವನಷ್ಟು ಸಂತೃಪ್ತ ಯಾರೂ ಇಲ್ಲ.  ದಾರಿಯ ಎಲ್ಲ ಆಲ್ಫಾ ಬೀದಿ‌ನಾಯಿಗಳಿಗೂ ಇವನು‌ ಪರಿಚಿತ. ವಾಕಿಂಗ್ ಗಷ್ಟೇ ಇವನು‌ ಇಲ್ಲಿ ಬರೋದು. ನಮ್ ಏರಿಯಾ ತಂಟೆಗೆ ಬರೊನಲ್ಲ ಅನ್ನುವ ಅರಿವಾಗಿರೋದ್ದರಿಂದ ಎಲ್ಲ ಬೀದಿನಾಯಿಗಳಿಂದ ಅವನಿಗೆ ರಾಜಮರ್ಯಾದೆ  ಸಿಗುತ್ತದೆ.  ಹಿರಿಯರಾದ ನನ್ನ ತಂದೆ ಜೊತೆಗೆ ರಸ್ತೆ ಯಲ್ಲಿ  ಹೊರಟರೆ ಕೇವಲ 5 ನಿಮಿಷದ ವಾಕಿಂಗ್ ಅಷ್ಟೇ, ಅವನೇ ತಾನಾಗೇ ನನ್ನ ತಂದೆಗೆ ಸಾಕು ಮನೆಗೆ ಹೋಗೋಣ ನಿನಗಾಗಲ್ಲ ಅನ್ನೋ ರೀತಿ ಬೊಗಳಿ ದಾರಿಗೆ ಅಡ್ಡ ನಿಂತು ವಾಪಸ್ ಮನೆ ಕಡೆ ಹೊರಡುತ್ತಾನೆ. ಇನ್ನು ಅಮ್ಮನ ಜೊತೆ ವಾಕಿಂಗ್ ಆದರೆ ಅಂಗಳಕ್ಕೆ ಸೀಮಿತ ಸೋನು ವಾಕಿಂಗ್‌.



ಸೋನು‌ ಮತ್ತು ಪಕ್ಕದ ಮನೆ ನಾಯಿ ಮಿಂಟು ಬಾಲ್ಯ ಗೆಳೆಯರು. ಅವರಿಬ್ಬರ ವಾಕಿಂಗ್ ಬೆಳಗ್ಗೆ 6 ಕ್ಕೆ ಶುರುವಾಗಿ 7.30 ಗೆ ಮುಗಿಸಿ ಮನೆ ಕಡೆ ಬರುತ್ತಾರೆ.   ಮೀನು ಗಾಡಿ ಬರುವ ಸಮಯಕ್ಕೆ ಕಾಯುತ್ತಿರುತ್ತಾರೆ. ಇವರಿಬ್ಬರಿಗೆ ಮೀನು ಕೊಡದೆ  ಗಾಡಿ ಮುಂದೆ ಹೋಗುವ ಹಾಗಿಲ್ಲ , ಅಡ್ಡಗಟ್ಟಿ ಮೀನು ತೆಗೆದುಕೊಳ್ಳುವ ಕಲೆ ಇಬ್ಬರಿಗೂ ಕರಗತವಾಗಿದೆ. ಮಿಂಟು ಮೀನು ತಿನ್ನಲಾರ. ವ್ಯಾನ್ ಮುಂದೆ ಹೋಗುವ ತನಕ ಮೀನು ತಿಂದಂತೆ ನಟಿಸಿ ನಂತರ ತನ್ನ ಪಾಲಿನ ಮೀನನ್ನೂ ಸೋನುಗೆ ಕೊಟ್ಟು, ಸೋನು ತಿನ್ನುವ ತನಕ ಕಾದು ನಂತರ ತನ್ನ ಮನೆಗೆ ಹೋಗುತ್ತಾನೆ ಮಿಂಟು. ಮಿಂಟು ಹಾಗೆ ನಟಿಸಲು‌ ಕಾರಣ ಯೋಚಿಸಲು ನಾನು‌ ಓದುಗರಿಗೇ ಬಿಟ್ಟಿದ್ದೇನೆ.‌  ಪ್ರಾಣಿಗಳಲ್ಲೂ ಭಾವನೆಗಳು ಎಷ್ಟು ಪ್ರಭಾವ ಶಾಲಿಯಾಗಿರುತ್ತದೆ  ಎಂಬುವುದರ ಉದಾಹರಣೆ ಅಷ್ಟೇ ಇದು.


ಇನ್ನು 10 ನಿಮಿಷದ ದಾರಿಯಲ್ಲಿರುವ  ಅಕ್ಕನ ಮನೆಯಲ್ಲಿದ್ದ  ಎಂಟು ತಿಂಗಳ ಮರಿ ಡೋರ , ಕೆಲ ತಿಂಗಳ ಹಿಂದೆ ಅನಾರೋಗ್ಯ ದಿಂದ  ಇಹಲೋಕ ತ್ಯಜಿಸಿದ್ದಳು.  ಡೋರಗೆ ಡ್ರಿಪ್ ಹಾಕಿ ಮಲಗಿ ಸಿದ್ದಾಗ, ಸೋನು ಅವಳ‌ ಪಕ್ಕನೇ ಇರುತ್ತಿದ್ದ. ಈಗಲೂ ವಾರಕ್ಕೊಮ್ಮೆಯಾದರೂ ಅಕ್ಕನ‌ ಮನೆ ತನಕ ವಾಕಿಂಗ್ ಹೋಗಿ ಡೋರ ಳ  ಹುಡುಕಾಡಿ ಮನೆಯವರನ್ನೆಲ್ಲ ಕರುಣಾಪೂರಿತ ಕಣ್ಣು ಗಳಿಂದ ನೋಡಿ ಸುಮ್ಮನೆ ಹೊರಹೋಗುತ್ತಾನೆ.



ವಾಕಿಂಗ್ ಅನ್ನುವುದು ಕೇವಲ ಆರೋಗ್ಯ ದೃಷ್ಟಿ ಯಿಂದ ಒಂದೇ ಅಲ್ಲ ಕೆಲವೊಂದು ಭಾವನಾತ್ಮಕ ಸಂಬಂಧವನ್ನು ಹೊಂದಿಸುತ್ತದೆ. ಪ್ರಾಣಿಗಳಾದರೇನು ಅವುಗಳ ಮನಸಿನ ಮಾತು, ಅವುಗಳ ಇಷ್ಟ ಕಷ್ಟಗಳು  ಅವುಗಳ ಜೊತೆ ಪಳಗಿದಾಗ ನಮಗೆ ಅರ್ಥ ವಾಗುತ್ತದೆ.  ಪ್ರಾಣಿಗಳ ಜೊತೆಗಿನ ಕತೆಗಳು ಮನೆಮನೆಯಲ್ಲಿ, ಪ್ರಾದೇಶಿಕವಾಗಿ  ಬದಲಾಗಬಹುದು. ಅದರೆ  ಅವು ನಮ್ಮೊಂದಿಗೆ ವ್ಯಕ್ತಪಡಿಸುವ ಪ್ರೀತಿ  ವಿಶ್ವಾಸ ಸೀಮಾತೀತ. ಮಾತು ಬಾರದೇ ಇರಬಹುದು, ಅದರೆ ಅವುಗಳು ಕಣ್ಣುಗಳಲ್ಲೆ ಮಾತನಾಡುತ್ತವೆ. ಗುರುತಿಸಲು‌ ನಮ್ಮ‌‌ ಒಳಗಣ್ಣು ತೆರೆದಿರಬೇಕಷ್ಟೆ.

********




5 thoughts on “ವಾಕಿಂಗ್..

Leave a Reply

Back To Top