ಕವಿತೆ
ಸುಡುತ್ತಾರೆ
ಸುಜಾತ ಲಕ್ಷ್ಮೀಪುರ
ಅರ್ಜುನನ ದಾನದ ಪರಾಕ್ರಮಕೆ ಬಲಿ ಖಾಂಡವವನ.
ದಹನದ ಉರಿ ಉಸಿರುಗಟ್ಟಿಸಿ
ಆಪೋಶನಗೊಳ್ಳಲು ನಿಂತವರೂ ಉರಿದುರಿದು ಬೂದಿಯಾದರೂ..
ಗದ್ದುಗೆ ಆಸೆಗೆ ಯುದ್ದದ ಬೆಂಕಿ
ಕುರುಕ್ಷೇತ್ರವನ್ನೆ ಸುಟ್ಟು ಹೆಣದ ವಾಸನೆ ಆರುವ ಮುನ್ನವೇ
ಪ್ರತಿಷ್ಟೆಯ ಜಾಗತಿಕ ಯುದ್ದಗಳ ಬೆಂಕಿ ಜಗ ಜನಾಂಗವನ್ನೇ ಸುಟ್ಟುಹಾಕಿದೆ.
ಗುಡಿಗೋಪುರ ಮಸೀದಿ ಚರ್ಚ್
ಬಸದಿಗಳು ಸುಟ್ಟು ಬೂದಿಯಾಗಿ ಗಾಳಿಯಲಿ ತೇಲಿ
ಮಾನವನ ಮೆದುಳಲಿ ಧರ್ಮಾಂಧತೆಯ ವಿಷಬೀಜ
ಮೊಳೆತು ಹೆಮ್ಮರವಾಗಿದೆ.
ತಳ್ಳಿದರೂ ಅಗ್ನಿಕುಂಡ ಸುಡದೆ ಬಿಟ್ಟದ್ದು ಜಾನಕಿಯನು ಮಾತ್ರ
ಸತಿಪದ್ದತಿಗೆ ಆಹುತಿಯಾದ ಮಹಾಸತಿಯರೆಷ್ಟೋ
ಸುಟ್ಟುಕೊಳ್ಳುತ್ತಲೆ ಪತ್ನಿಧರ್ಮ ಸಾರಿದ್ದಾರೆ!?
ಪಾಂಚಾಲಿಗೆ ಐವರು ಪತಿಯರಾದರೂ ತುಂಬಿದ ಸಭೆಯಲಿ ಅವಮಾನದ ಬೆಂಕಿ
ಸುಡುವುದನು ತಡೆಯಲಾಗಲ್ಲಿಲ್ಲ ಅಲ್ಲವೆ!?
ನಿತ್ಯ ಸುಟ್ಟುಕೊಂಡೆ ಅಡಿಗೆ
ಮಾಡಿ ಬಡಿಸುವ ಜೀವಗಳನು
ಉದಾಸೀನತೆ ನಿರ್ಲಕ್ಷ್ಯದ
ಕಿಡಿಗಳು ಸುಡುತ್ತಲೇ ಇರುತ್ತವೆ.
ಶತಶತಮಾನದ ದಾಹ ಆರಿಲ್ಲವಿನ್ನೂ..
ಸುಟ್ಟು ಬೂದಿಯಾಗಿಸುವ ಚಾಳಿ ಸುಟ್ಟುಹೋಗಿಲ್ಲವಿನ್ನೂ..
ಸುಡುವುದೇ ಸಂತಸವೆಂಬ ವಿಕೃತಿ ಮಾಡಿಕೊಂಡವರ ನಡುವೆ
ಪುಸ್ತಕದ ರಾಶಿ ಸುಡುವುದೇನೂ ಕಠಿಣವಲ್ಲ.
ಜ್ಞಾನ ಸುಟ್ಟವರನ್ನು ಅಜ್ಞಾನಿ ಎನ್ನಬಹುದೇ.!?
ಸುಡುವುದಕ್ಕೂ ಅರಿವಿರಬೇಕಲ್ಲವೇ.
ಸುಡುವುದೂ ನಾಶಗೈವುದೂ
ಪ್ರತಿಷ್ಠೆ ಆಗಿಹೋಗಿದೆ
ಸುಡುವುದಾದರೆ..
ನಮ್ಮೊಳಗಿನ ಕೆಡುಕನು ಸುಟ್ಟು ದುಷ್ಟತನ ಬೂದಿಯಾಗಿಸಿದರೆ
ಜೀವ ಜಗತ್ತು ಉಳಿದು ಬೆಳೆದು ಮಾನವತೆ ಮೆರೆದೀತು.
*************************
ಸುಡುವುದೂ
ನಾಶಗೈವುದೂ ಪ್ರತಿಷ್ಠೆಯಾಗಿಹೋಗಿದೆ..
ಎಂಥಹಾ ಸಾಲುಗಳು ಸುಜಾತಾ…
ಮಾನವಕುಲದ ದುರಂತವ ಎಷ್ಟು ಸರಳವಾಗಿ ಹೇಳಿರುವಿರಿ.ಸೂಪರ್
ಬಹಳ ಚೆನ್ನಾಗಿದೆ… ಸುಡುವ ಪ್ರಕ್ರಿಯೆಯನ್ನು ಹೇಗೆಲ್ಲಾ ವಿವಿಧ ರೂಪಕಗಳಲ್ಲಿ ಕಟ್ಟಿರುವಿರಿ.. ಕವಿತೆ ಇಷ್ಟವಾಯ್ತು.
ಶತಮಾನಗಳು ಕಳೆದರೂ ಸ್ವಾರ್ಥಕ್ಕಾಗಿ ಸುಟ್ಟು ಬೂದಿ ಮಾಡುವ ಚಾಳಿ ಬದಲಾಗುವುದೇ ಇಲ್ಲ ಮಾನವನಿಗೆ…ಮನುಷ್ಯತ್ವದ ಅರಿವೊಂದೆ..ಅದ್ಭುತ ಸಂದೇಶ ಸುಜಾತ.
A beautiful poem
ಸುಡುವುದು ನಾಶಮಾಡುವುದು ಪ್ರತಿಷ್ಟೆಯಾಗಿ ಹೋಗಿದೆ.
ಸುಡುವುದಾದರೆ ನಮ್ಮಲ್ಲಿಯ್ ಕೆಡುಕನ್ನು ಸುಟ್ಟು ಬೂದಿಮಾಡು ಅದ್ಬುತ ಸಾಲುಗಳು
ಧನ್ಯವಾದಗಳು ಮೇಡಮ್
Chandrashekharhadapad@gmail.com