ಕವಿತೆ
ಊಹೇನ ಗಡಿವೊಡೆದು
ಬೆಂಶ್ರೀ ರವೀಂದ್ರ
ಕಾಳಗರ್ಭದಲ್ಲಿ ತಲೆಕೆಳಗಾಗಿ ತೂಗಿತೊ
ಹುಡುಕಿ ಹುಡುಕಿ ಹೊಸತು ಕೇಡು
ಉಡುಕಿಯಾಗಿ ಊಡಿತೊ
ಊಹೇನ ಗಡಿವೊಡೆದು
ಕಟ್ಟೆ ಮುರಿದು ಏರನೇರಿ
ಛಕ ಛಕನೆ ಹಬ್ಬಿತೊ
ಜಗದ ಮೂಲೆ ಮೂಲೆ ತಬ್ಬಿತೊ
ಗಾಳಿಯಲ್ಲಿ ಸೇರಿ ಹಾರಿ
ಎದೆಯನ್ನು ಹೊಕ್ಕಿತೊ
ಗಾಳಿಯೊಡನೆ ಬೆಂಕಿಯಾಗಿ
ಜೀವವನ್ನೆ ಬಸಿಯಿತೊ
ಕೈಯ ತಪ್ಪಿ ಜಾರಿತೊ
ನಳಿಗೆಯೊಳಗೆ ಗುರಿಯನಿಟ್ಟು
ನರಮೇಧಕೆ ಅಣಿಯಿಟ್ಟಿತೊ
ಬಿಲ್ಲನಾಟ ಗೇಟನ್ನು ತೆರೆದಿತೊ
ಫಾಸಿಯಾಟ ಪಾಸಿಯನೆಸೆದಿತೊ
ಟ್ರಂಪನಾಟ ಝ್ಸೀಯ ಕಾಟವಾಯಿತೊ
ನಾನೆ ಮೇರು ನಾನೆ ಸೂರು
ನೋಡು ನನ್ನ ಆಟವ
ಜಗದ ಅಟ್ಟವೆನದೆ
ಆಡುವೆ ಮೇಲಾಟವ
ಕಬ್ಬಿಣ ತೆರೆಮರೆಯಲಿ
ಹೆಣೆದು ಬಿಟ್ಟ ಜಾಲವ
ಹೂಣ ಜಾಣ ತಾಣ ಚಾಣ
ಕಾಣದಾಗಿ ಹೋದೆವೊ
ಸ್ತಬ್ದವಾದ ಜಗದಲಿಂದು
ಹಿಮಾಲಯವು ಕೆಂಪಾಯಿತೊ
ಕೆನ್ನಾಲಗೆ ಚಾಚಿತೊ
ಯಾರು ಯಾರು ಏನು ಏನು
ಅನ್ನುವಷ್ಟರಲ್ಲಿ ಜಿಗಿದು
ಕುತ್ತಿಗೆಗೆ ಕುತ್ತಾಯಿತೊ
ಮಾಡಿದಂಥ ತಪ್ಪನೆಲ್ಲ ಒಪ್ಪಮಾಡು
ಮಗನೆಯೆಂದು ನೇಣು ಬಿಗಿಯಿತೊ
ಅಲ್ಲಿ ಇಲ್ಲಿ ಕಲ್ಲಿ ಚೆಲ್ಲಿ ಮೇಲೆ ಕೆಳಗೆ
ಎನ್ನುವಲ್ಲಿ ನೆಲಸಮವಾಯಿತೊ
ಹಳ್ಳದೊಳಗೆ ಡಬ್ಬಡಬ್ಬ ಸೇರಿಹೋಯಿತೊ
ಕೋಟಿ ಕೋಟಿ ನೋಟು ಬಾಟು
ಬರಡು ಬೊಂಬೆಯಾಯಿತೊ
ಚಿಗುರು ಚುರುಚುರು ಅಂದಿತೊ
ಅಲ್ಲಿ ತಬ್ಬು ಇಲ್ಲಿ ಎಬ್ಬು
ಬವಣೆ ಬೊಬ್ಬೆಯಾಯಿತೊ
ಆನು ತಾನು ನಾನು ನೀನು
ಏನೂ ಅರಿದಾಯಿತೊ
ಕುರುಡರೆಲ್ಲ ಆನೆ ತಬ್ಬಿ
ಕಂಬ ಗಿಂಬ ಬಾಗಿ ಬಳಸು
ಹಾರೆ ಮೊರವು ಎಂದರೊ
ಗಂಟಲನ್ನು ಹರಿದರೊ
ಕಂಠನಾಳ ಪ್ರನಾಳದಲ್ಲಿ
ದ್ರವವ ಸ್ರವಿಸಿ ಹಿಡಿದರೊ
ಅಲೆಯ ಮೇಲೆ ಅಲೆಯ ಫೇರಿ
ಸುತ್ತಲೆಲ್ಲ ಬರಿಯ ಗೋರಿ
ಲಗೋರಿ ಕಾಣದಾಯಿತೊ
ಬಟ್ಟೆ ಬಯಲೆ ಬಟಾ ಬಯಲು
ಮೌನರಾಜ್ಯವಾಳಿತೊ
ಹುಂ… ಊಹುಂ.. ಉಡುಗಿತೊ
ಉಸಿರಿಗಾಗಿ ಮನೆಯು ಮಾರು
ಎಲ್ಲಾ ಸೋರಿ ಹೋಯಿತೊ
ಕಳೆದ ಉಸಿರ ಸಿರಿಯು
ಕತ್ತಲನ್ನೆ ತುಂಬಿತೊ
ಸ್ಯಾಮ ಶ್ಯಾಮ ಗೋಮ ಭೀಮ
ಅರಿತು ಮರೆತ ಅರ್ಥಾನಾರ್ಥವೊ
ನತ್ತು ಗಮ್ಮತ್ತು ಗಬ್ಬುನಾತವಾಯಿತೊ
ಹೊಲಿಗೆ ಹರಿದು ತೂತು ಮಾತು
ಹೊಲಸು ಹರಡಿತೊ
ಬೀಡಿನಲ್ಲಿ ಹಾಡಿ ಕುಹೂ
ಹಾಡಿ ಹಸನು ಎಂತೊ
ಕಾಳಸಂತೆಕೋರರೆಲ್ಲ ಚಕೋರರಾದರೊ
ಚಕಾರವನ್ನೆತ್ತಿದವರ ಚಕಚಕನೆ ಹರಿದರೊ
ಬಕಬಕನೆ ಉಂಡರೊ
ಜೀವ ಹೀರಿ ಬರಿದು ಮಾಡಿ
ಹಾರಿ ಹಾರಿ ಮಸಣದಲ್ಲಿ
ಸಾಲು ಹೆಣದ ಮಾಟವೊ
ಹಳೆಯ ಕಳೆಯ ಹೊಸದು
ವಡೆದು ವಡೆದು ಕೂಡಿ ವಡೆದು
ಹೊಸದು ಹೊಸೆದು ಬಿಮ್ಮನೆ
ನಿತ್ಯದಾಟ ಮಾರಿ ಹೆಮ್ಮಾರಿ
ಇದುವೆ ಬ್ರಹ್ಮ ಇದುವೆ ವಿಷ್ಣು
ಇದುವೇ ಶಿವನ ತಾಂಡವ
ಹುರಿದು ಮುಕ್ಕಿ ಖಾಂಡವ
ಅಂದು ಕುಣಿದ ಇಂದು ಕುಣಿದ
ಹೆಜ್ಜೆ ಹೆಜ್ಜೆ ತಾಳದ ಅರಿವು
ಅರಳಲಿಹುದೊ ಬಾಳ ಚೆಲುವು
ನನಗೆ ನಾನೆ ನಾನೆ ದೇವ
ಬಿಡುವೆನೆ ವಿತಂಡವ
ತಂಡದಲಿ ತಂಪು ಕಂಡು
ಬೆಳಕು ಮಾಡು ತಾಣವ
ಇದು ಕವಿಚಿದ ರಣಘೋಷವೊ
************************