ಗಜಲ್ ಜುಗಲ್ ಬಂದಿ-==03
ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ
ಗಜಲ್-3
ಒಂದು ಕುಡಿ ನೋಟಕ್ಕಾಗಿ ನೂರು ನೋಟಗಳ ಎದುರಿಸುತ ಕಾಯಬೇಕು/
ನಿನ್ನ ದಿವ್ಯ ಪ್ರೀತಿಗಾಗಿ ಹಲವು ನೋವುಗಳ ಹುದುಗಿಸುತ ಕಾಯಬೇಕು/
ನೀ ಸಿಗುವೆ,ಸಿಗಬೇಕು ಎನ್ನುವ ತಪನೆ ಮತ್ತು ನಿರೀಕ್ಷೆ ನಿರಂತರ.
ಇದ್ದೂ ಇರದಂತಾದ ಭೂತ ಭವಿಷ್ಯಗಳ ಮರೆಯುತ ಕಾಯಬೇಕು/
ಜಗದ ಆದಿಯಲ್ಲೇ ಜಾರಿಯಾದ ಪ್ರೇಮಕ್ಕೂ ಮುಗಿಯದ ಭಯ
ನಿನ್ನ ನೆರಳಾಗಿ ಹಿಂಬಾಲಿಸಲು ಗಡಿ ಗೆರೆಗಳ ಮೀರುತ ಕಾಯಬೇಕು/
ಒಲವೆನ್ನುವುದು ಅಗಲಿಕೆಯಲ್ಲೇ ಮುಗಿವ ಮಾತೇನು?
ಅರೆಗಳಿಗೆ ಜೊತೆಯಾಗುವ ಕನಸುಗಳ ಹಿಡಿಯುತ ಕಾಯಬೇಕು /
ಎಷ್ಟೊಂದು ಹಾತೊರೆಯುತ್ತದೆ ಈ ಜೀವ,ಭಾವ “ಸ್ಮಿತ” ಮನಸೇ
ನಿನ್ನೊಳಗೇ ಐಕ್ಯವಾಗಲು ಅದೆಷ್ಟು ಜನ್ಮಗಳ ಕಳೆಯುತ ಕಾಯಬೇಕು
@ಸ್ಮಿತಾ ಭಟ್
ಗಜಲ್-3
ನಿನ್ನ ಬರುವಿಗಾಗಿ ಅದೆಷ್ಟೋ ಕನಸುಗಳ ಕಡೆದು ಕಾಯಬೇಕು
ಸೊಗದ ನಾಳೆಗಾಗಿ ಬೆಳಕಿನ ಹಾಡುಗಳ ಬರೆದು ಕಾಯಬೇಕು
ಕಾಡಿನಿಂದ ಹೊರಟ ಬಿದಿರು ಚೆಂದದ ಕೊಳಲಾದಂತೆ ನೀನು
ಕೊಳಲ ನಾದ ಕಾಡ ತಣಿಸಲೆಂದು ಕಿವಿಗಳ ತೆರೆದು ಕಾಯಬೇಕು
ನಿರೀಕ್ಷೆಯ ಒಡ್ಡು ಒಡೆಯದಂತೆ ಸೈರಿಸುವುದು ಅಷ್ಟು ಸುಲಭವೇ ?
ಎದೆಯ ಉಮ್ಮಳ ಸರಿಸಿ ನಿಟ್ಟುಸಿರುಗಳ ಹಡೆದು ಕಾಯಬೇಕು
ವಿರಹದ ಮುಳ್ಳ ಹೂವಾಗಿಸಲು ಸವಿನೆನಪ ಹಾಜರಿಯೊಂದೆ ಸಾಕೆ
ಎದೆಯ ಬೆಂಗಾಡಾಗಿಸದೆ ತಪದಿ ಹೂಗಿಡಗಳ ಬೆಳೆದು ಕಾಯಬೇಕು
ಅನಂತದಲಿ ಸಂಧಿಸುವ ಬಿಂದು ನೀನೆಂದು ‘ರೇಖೆ’ಗೆ ಅರಿವಾಗಿದೆ
ನಿನ್ನ ಸೇರುವ ಗಳಿಗೆಗಾಗಿ ಭವದ ಮಿತಿಗಳ ತೊರೆದು ಕಾಯಬೇಕ
@ ರೇಖಾಭಟ್
******************************************
ಜುಗಲ್ ಬಂದಿ ಗಜಲ್ ಗಳು ಸೊಗಸಾಗಿ ವೆ
ಸುಂದರ ಗಜಲ್ ಗಳು
ಜೀವ ಭಾವಗಳು ಜೊತೆಯಾದ ಜುಗಲ್ ಬಂದಿ
ನಿಜಕ್ಕೂ ಅಪರೂಪದ ಜುಗಲ್ ಬಂದಿ. ನವಿರು ಭಾವನೆಗಳನ್ನು ಸುಂದರವಾಗಿ ಕಟ್ಟಿಕೊಡುವ ಇಬ್ಬರು ಕವಯತ್ರಿಗಳನ್ನು ಒಂದು ವೇದಿಕೆಯಲ್ಲಿ ಒಟ್ಟಿಗೆ ತರುವ ಸಾರ್ಥಕ ಪ್ರಯತ್ನ ಮಾಡಿರುವ ಸಂಗಾತಿ ಪತ್ರಿಕೆಗೆ ಧನ್ಯವಾದಗಳು. ಎರಡೂ ಗಜಲ್ ಗಳು ತುಂಬಾ ಚೆನ್ನಾಗಿವೆ.