ಜಾಗ ಖಾಲಿ ಮಾಡುವುದೊಂದೆ ಬಾಕಿ

ಕವಿತೆ

ಜಾಗ ಖಾಲಿ

ಮಾಡುವುದೊಂದೆ ಬಾಕಿ

ಹಾರೋಹಳ್ಳಿ ರವೀಂದ್ರ

ನನ್ನದೇ ಹೊಲದ ಮೇಲೆ
ಸಾಲುಗುಂಟ ಬಂಗಲೆಗಳು ತಲೆ ಎತ್ತಿವೆ
ಕೈಯಲ್ಲಿ ಕರಣಿ ಹಿಡಿದು ನಿಂತಿರುವೆ
ಗಗನಚುಂಬಿ ಗೋಡೆಗಳು ಮಾತನಾಡುತಿವೆ
ನಾನು ಮಾತ್ರ ಮೌನಿ
ಮಾತು ಬಾರದ ಊರಲ್ಲಿ
ನಾನಿರುವೆ

ನನ್ನದೇ ಹೊಲದ ಮೇಲೆ
ಕಂಪನಿಗಳು ತಲೆ ಎತ್ತಿವೆ
ವಿದ್ಯುತ್ ಸಂಪರ್ಕಕ್ಕೆ ಕಂಬ ಹೊರುತ್ತಿರುವೆ
ಅಲ್ಲಿ ಕರೆಂಟುಕಂಡ ಕಂಪ್ಯೂಟರ್ ಮಾತನಾಡುತಿದೆ
ನಾನು ಮಾತ್ರ ಮೌನಿ
ಮಾತು ಬಾರದ ಊರಲ್ಲಿ
ನಾನಿರುವೆ

ನನ್ನದೇ ಹೊಲದ ಮೇಲೆ
ಹೈವೆಯೊಂದು ತಲೆ ಎತ್ತಿದೆ
ಬರಿಗಾಲಲ್ಲಿ ದಾರಿಗುಂಟ ನಡೆಯುತಿರುವೆ
ಸಿರಿವಂತರ ಕಾರುಗಳು ಮಾತನಾಡುತಿವೆ
ನಾನು ಮಾತ್ರ ಮೌನಿ
ಮಾತು ಬಾರದ ಊರಲ್ಲಿ
ನಾನಿರುವೆ

ನನ್ನದೇ ಹೊಲದ ಮೇಲೆ
ಆಸ್ಪತ್ರೆಗಳು ತಲೆ ಎತ್ತಿವೆ
ರೋಗ, ರುಜುನಗಳಿಂದ ಗೇಟಿನಾಚೆ ನಿಂತಿರುವೆ
ಯಂತ್ರ, ಲಸಿಕೆಗಳು ಮಾತನಾಡುತಿವೆ
ನಾನು ಮಾತ್ರ ಮೌನಿ
ಮಾತು ಬಾರದ ಊರಲ್ಲಿ
ನಾನಿರುವೆ

ನನ್ನದೇ ಹೊಲದ ಮೇಲೆ
ಸ್ಕೂಲುಗಳು ತಲೆ ಎತ್ತಿವೆ
ನನ್ನ ಮಕ್ಕಳ ನಾಲಿಗೆಯ ಮೇಲೆ ಅಕ್ಷರವಿಲ್ಲ
ಒಳಗೆ ಶುಲ್ಕ ಮಾತನಾಡುತಿದೆ
ನಾನು ಮಾತ್ರ ಮೌನಿ
ಮಾತು ಬಾರದ ಊರಲ್ಲಿ
ನಾನಿರುವೆ

ಕಟ್ಟಡಗಳು
ಹೈವೆಗಳು
ಯಂತ್ರಗಳು
ಕಾರುಗಳು
ಹಣವಷ್ಟೆ ಮಾತನಾಡುತಿವೆ
ಸೃಷ್ಟಿಯಲ್ಲಿಯೇ ಮೊದಲು ಮಾತುಕಂಡ
ನರಮಾನವನಿಗೆ ಈಗ ಮಾತಿಲ್ಲ

ಮಾತು ಬಾರದ ಊರು ನನ್ನದು
ನಿಮ್ಮಲ್ಲಿ ಮಾತುಗಳಿಲ್ಲ
ಊರು ನನ್ನದಾಗಿ ಉಳಿದಿಲ್ಲ
ಜಾಗ ಖಾಲಿ ಮಾಡುವುದೊಂದೆ ಬಾಕಿ

*********************

One thought on “ಜಾಗ ಖಾಲಿ ಮಾಡುವುದೊಂದೆ ಬಾಕಿ

Leave a Reply

Back To Top