ಕವಿತೆ
ತಾರೆಗಳು ನಕ್ಕವು
ಡಾ. ಪುಷ್ಪಾ ಶಲವಡಿಮಠ
ತಾರೆಗಳು ನಕ್ಕವು ಹಿತ್ತಲಲಿ
ನೆಲದ ನಂಟಿಗೆ ಅಂಟಿಕೊಂಡು
ಮಣ್ಣ ಪರಿಮಳ ಹೊತ್ತುಕೊಂಡು
ತಾರೆಗಳು ನಕ್ಕವು ಹಿತ್ತಲಲಿ
ಹಸಿರು ಗಿಡದಲಿ ಮೊಸರು ಚೆಲ್ಲಿದಂತೆ
ಮಲ್ಲಿಗೆ ಮೊಗ್ಗುಗಳೆಲ್ಲ ಬಿರಿದು
ಗಂಧ ಪರಿಮಳ ಹೊತ್ತು ತಂದು
ಗಗನ ತಾರೆಗಳು ನಾಚುವಂತೆ
ನೆಲದ ತಾರೆಗಳು ನಕ್ಕವು ಹಿತ್ತಲಲಿ
ಬಟ್ಟಲ ಕಣ್ಣ ಬಟ್ಟಲ ಹೂ
ತುಂಟು ನಗೆಯ ತುಂಬೆ
ಸನ್ನೆ ಮಾಡಿ ಕರೆವ ಸಂಪಿಗೆ
ಕೆನ್ನೆ ಕೆಂಪಿನ ಕನಕಾಂಬರಿ
ದಿಬ್ಬಣ ಬಂದಿವೆ ಹಿತ್ತಲಿಗೆ
ಲಜ್ಜೆ ಭಾರದಿ ಬಾಗಿ ಮಂದಹಾಸ ಬೀರಿ
ಕೈ ಮಾಡಿ ಕರೆವ ದಾಸವಾಳ
ಸಣ್ಣಕಣ್ಣ ಮನದನ್ನೆ ಸೇವಂತಿ
ಚಂಡು ಪಾರಿಜಾತ ಸುಂದರಿ
ಸೂರ್ಯಕಾಂತೆ ಸೂರ್ಯಕಾಂತಿ
ಮುಗಿಲ ಹಂಗು ಹರಿದುಕೊಂಡು
ನೆಲದ ನಂಟಿಗೆ ಅಂಟಿಕೊಂಡು
ಹಸಿರು ತೋಳ ತೊಟ್ಟಿಲ ತುಂಬ ಅರಳಿ
ತಾರೆಗಳು ನಕ್ಕವು ಹಿತ್ತಲಲಿ
****************************