ಫಲ-ಪುಷ್ಪಗಳು

ಕವಿತೆ

ಫಲ-ಪುಷ್ಪಗಳು

ಬಾಪು ಖಾಡೆ

assorted flower and vegetable lot

.

.

.

.

.

ದೇವರ ಜಗುಲಿಯಲಿ ನೀರು ತುಂಬಿಸಿದ
ಕಲಶದ ಮೇಲಿನ ತೆಂಗು
ಅಂಕುರಿಸಿ ಚಿಗುರೊಡೆದು ಸಸಿಯಾಯಿತು
ಕುತೂಹಲಕ್ಕೆ ಮಗಳು
ಹೋಗಿ ನೆಟ್ಟಳು ತೋಟದ ಅಂಚಿನಲ್ಲಿ
ಈಗ ಫಲ ನೀಡುತ್ತಿದೆ ಕಲ್ಪತರುವಾಗಿ

ಮಕ್ಕಳು ತಿಂದು ಬಿಸಾಡಿವೆ ಮಾವು
ಉಳಿದಿವೆ ಗೊರಟುಗಳು
ಹೂಕುಂಡದಲಿ ನೆಟ್ಟು ಮಗಳು ಬೆಳೆಸಿದಳು
ಅಂದಿನ ಸಸಿಗಳು ಇಂದು ತೋಟದಲ್ಲಿ
ಮಾವಿನ ಮರವಾಗಿ ಫಲ ನೀಡಿ
ಕೂಲಿಯಾಳುಗಳ ದನ-ಕುರಿಗಾಯಿಗಳ
ಸುತ್ತಲಿನ ಹೊಲದವರ ಹೊಟ್ಟೆ ತುಂಬಿಸುತ್ತಿವೆ

ಹಿತ್ತಲಲಿ ಬೆಳೆದ ಹೂ ಬಳ್ಳಿ ಹಣ್ಣು
ಆಗಾಗ ನಮಗೂ ಕೆಲವೊಮ್ಮೆ ಪರರಿಗೂ
ಮತ್ತೊಮ್ಮೆ ಕೋತಿಗಳ ಪಾಲಾಗುತ್ತಿವೆ
ಅಮೃತ ಬಳ್ಳಿಯಲಿ ಗುಬ್ಬಚ್ಚಿಗಳು
ಗೂಡು ಕಟ್ಟಿ ಮರಿ ಮಾಡಿ
ಹಾರುತ್ತಿವೆ ಸ್ವಚ್ಛಂದವಾಗಿ ಬಾನಂಗಳದಿ

ಗಿಡ ಮರ ಪ್ರಾಣಿ ಪಕ್ಷಿ ಕೂಗಿ ಹೇಳುತ್ತಿವೆ
ನಮಗೂ ಬದುಕಲು ಅವಕಾಶ ಕೊಡಿ
ನಿಜ ಅಲ್ಲವೇ ಇವು
ಪ್ರತಿಫಲ ಬಯಸದ ಫಲಪುಷ್ಪಗಳು?

**********************

Leave a Reply

Back To Top