ಕವಿತೆ
ಸಾಯಬೇಡಿ…ಜೋಕೆ
ಡಾ. ಅರಕಲಗೂಡು ನೀಲಕಂಠ ಮೂರ್ತಿ.
ಸಾಯಬೇಡಿ ಜೋಕೆ
ಇದು ಸಾಯಲು ಸೂಕ್ತ ಸಮಯವಲ್ಲ!
ಯಾರಿಗೂ ಈ ಸಮಯ
ಸಾವಾಗದಿರಲಿ
ವಯೋಧಿಕ್ಯ ಕಾರಣಕೂ ಕೂಡ!
ಸದ್ಯ ಸತ್ತವರ ಮನೆಯ ಸುತ್ತ
ನೆರೆಹೊರೆಯ ಗುಮಾನಿ
ಪಿಸು ಪಿಸು ಗುಮ್ಮದನಿ
ಎಲ್ಲ ಹಾಗಿರಲಿ
ಗಾಳಿಯೂ ಸಹ ಬೆದರಿ
ಬೀಸುವುದನೆ ನಿಲ್ಲಿಸೀತು
ಅಥವಾ ಭಯದಿ ರಭಸ ಸುತ್ತೀತು…
ಸತ್ತ ದುರ್ದೈವಿಯ ಹೊರಲು
ಭುಜಗಳ ಎಣಿಕೆಯ ಮಾತಂತಿರಲಿ
ನರಪೇತಲರೂ ಅನುಮಾನ
ನೀವೇ ಭುಜಗಳಾಗಿ
ಹೊತ್ತೊಯ್ಯಬೇಕು ಬಹುಶಃ ಜೋಪಾನ!
ಇನ್ನು ಈ ಇಂಥ ಹೊತ್ತಲೂ
ಸಮಯವೇ ಸಂದರ್ಭವೇ
ಅಥವಾ ಸೂಕ್ತ ತಾಣವೇ
ಸಾವೆಂಬ ಸೈತಾನನ ಆಕ್ರಮಣಕೆ…
ಈಗಂತೂ ಕುಣಿವ ಕರೋನ
ಬೀಭತ್ಸ ಕೇಕೆ!
ಆಸ್ಪತ್ರೆಯಲೆ ಉಸಿರು ನಿಂತರಂತು
ಮನೆಗೂ ಶವ ಬರದು ಯಾರದು
ಮುಗಿಸುವರು ದಫನ್ ಎಂದು
ಒಟ್ಟೊಟ್ಟಿಗೆ ಕಸಕ್ಕಿಂತ ಕಡೆಯಾಗೆಸೆದು
ದೂರ ಎಲ್ಲೋ ಊರ ಹೊರಗೆ
ಸಾಮೂಹಿಕ ಗುಂಡಿಯೊಳಗೆ…!
ಸೊಳ್ಳೆ ಜಿರಲೆಗಳನೂ ಕೂಡ
ಒಂದೊಂದೆ ತಾಳ್ಮೆಯಲಿ
ಸಂದಿಗೊಂದಿಗಳಲಿ
ಕೆದಕಿ ಬೆದಕಿ ಚಚ್ಚುವವರು
ಕಸದ ಬುಟ್ಟಿಗೆಸೆವವರು ನಾವು!
ಸತ್ತವರೇನೋ ಹೊರಟು ಹೋದರು ನಿಜ
ನೀವು-ನಾವು ಕಳೆದುಕೊಂಡವರು?
ದುಃಖದ ಮಡು ತುಂಬಿದವರು?
ವರುಷ ವರುಷವೂ ಇನ್ನು
ವಿಚಿತ್ರ ವಿಚಿಕಿತ್ಸೆಯ ರೀತಿಗೆ ಹೀಗೆ
ನಮ್ಮ ನಿಮ್ಮಮನೆ ಮೈಲಿಗೆ!
ಕಾಗೆ ಕೂಗು ಕೂಡ
ಈಗ ಬಹು ದೂರ ನಿಮಗೆ ನಮಗೆ
ಬಹುಷಃ…
ಅದಕೂ ಸೂತಕದ ಮರುಳು!
ಮತ್ತದೂ ಸಹ ಕೂರದು
ನಿಮ್ಮ ನಮ್ಮ ಐಬು ಛಾವಣಿ ಮೇಲೆ
ಹಾಗೂ ಹಾರದಿನ್ನು ಸುತ್ತಮುತ್ತ ಗಿರಕಿ ಎಂದೆಂದಿಗೂ…
ಆದ್ದರಿಂದ
ಜೋಕೆ ಯಾರೂ ಸಾಯಬೇಡಿ
ದಯಮಾಡಿ
ಯಾರಿಗೂ ಈ ಸಂದಿಗ್ಧ ಸಮಯ
ಸಾವಾಗದಿರಲಿ
ವಯೋಧಿಕ್ಯ ಕಾರಣಕೂ ಕೂಡ
ಇದು ಸೂಕ್ತ ಸಮಯ ಅಲ್ಲವೇ ಅಲ್ಲ…!
********************************
ಅದ್ಬುತ! ಇದು ವೇ ಸತ್ಯ!
ಆದರೂ ! ಮನುಷ್ಯತ್ವ ಇರಬೇಕು!