ಮನದ ಮಲ್ಲಿಗೆ

ಕವಿತೆ

ಮನದ ಮಲ್ಲಿಗೆ

ನಾಗರಾಜ್ ಹರಪನಹಳ್ಳಿ

ಮಲ್ಲಿಗೆ ಮುಡಿದವಳೆ
ಮಲ್ಲಿಗೆಯಂಥವಳೆ
ಮಲ್ಲಿಗೆಯಂತೆ ಮೆಲ್ಲಗೆ
ಕಿವಿಯಲ್ಲಿ ಉಸಿರಿದವಳೆ
ಮತ್ತೆಂದು ಕಾಣುವೆ
ಮಲ್ಲಿಗೆಯೇ ಆಗೋಣ
ಇಬ್ಬರೂ ಪರಿಮಳದ ಮಾತಾಡೋಣ


ಮಲ್ಲಿಗೆ ಮೃದುತ್ವ ನಿನ್ನ
ಕತ್ತಿನ ಗತ್ತಿಗೆ
ತುಟಿಗಳು ಸೋತದ್ದು
ಮಲ್ಲಿಗೆ ಮೊಗ್ಗಿಗೋ
ಕೊರಳ ಇನಿದನಿಗೋ
ಈಗಲೂ ಗೊಂದಲವಿದೆ ನನಗೆ
ನಿನಗೆ ?


ಮಲ್ಲಿಗೆ ಎಂದರೆ ಇಬ್ಬರಿಗೂ ಪ್ರಾಣ
ಮಲ್ಲಿಗೆ ನೆಪದಲ್ಲಿ
ಒಂದಾಗಿ
ಮಾತು ಆಡುತ್ತಲೇ ಇದ್ದೇವೆ ; ಹಾಗೂ
ಕಾದಿದ್ದೇವೆ ಒಂದೇ ಒಂದು ಭೇಟಿಗೆ ,ಮತ್ತಿನ್ನೊಂದು ಮಾತಿಗೆ ;
ಅದಿನ್ನೂ ಕನಸಾಗಿಯೇ
ಇದೆ
**


ಬೊಗಸೆ ತುಂಬಾ ಮುತ್ತಿಟ್ಟಿದ್ದೆ
ಮಲ್ಲಿಗೆ ತುಟಿಗಳ ಕಂಪು
ಬೊಗಸೆಯಿಂದ ಕಂಗಳಿಗೆ
ವಲಸೆ ಹೊರಟಿವೆ
ನನ್ನೂರು ನಿನ್ನೂರ ಬೆಸೆದದ್ದು
ಇದೇ ಮಲ್ಲಿಗೆ ಮಾಲೆ ನೋಡು
**


ಮಲ್ಲಿಗೆ ಮಾಲೆಯ ಸ್ಥಾನ
ನನಗೆ ಯಾವಾಗ ಹೇಳು
ಕಾದು ಕಾದು ನನಗೆ ಸಾಕಾಗಿದೆ
**


ಮುಡಿಯೇರುವುದೆಂದರ
ಸಮಾನ್ಯವೇ
ಅದು ನಾನು ನಿನ್ನ ತಲೆ ಏರಿದಂತೆ ಅಥವಾ
ನೀನೇ ನನ್ನ ತಲೆಯ ಮೇಲೆ
ಕುಳ್ಳಿರಿಸಿ ಕೊಂಡಂತೆ
*


ಮಲ್ಲಿಗೆ ಮುಡಿದು
ನೀ ಊರೆಲ್ಲಾ ಸುತ್ತಿ ಬಂದೆ ಎಂದರೆ
ಅದು ಪ್ರೇಮದಲ್ಲಿ ಬೀಗಿದಂತೆ‌
*


ಮಲ್ಲಿಗೆ ಮುಡಿದ ನಿನ್ನ ಬಿಂಕಕೆ
ಊರೇ ಕೊಂಕಿದೆ
ವಾರಿಗೆಯವರು ತುಟಿ ಕಚ್ಚಿ ಕೊಂಕಾಡಿದರೆ
ಅದು ಪ್ರೇಮದ ಗೆಲುವು
********************

Leave a Reply

Back To Top