ಅಂಕಣ ಬರಹ

ದೀಪದ ನುಡಿ

ಜಾತಸ್ಯ ಮರಣಂ ಧ್ರುವಂ

Meditation, Spiritual, Yoga, Meditating

            ಹುಟ್ಟಿನೊಂದಿಗೇ ಥಳುಕು ಹಾಕಿಕೊಂಡಿರುವ ಸಾವು ಜಗತ್ತಿನ ಕಟು ಸತ್ಯ..ದೇಹಕ್ಕೆ ಮಾತ್ರಾ ಸಾವು ಆತ್ಮಕ್ಕಲ್ಲ…ಆತ್ಮವು ಕಾಲನಿಯಮಕ್ಕನುಗುಣವಾಗಿ ಹಳೆಯ ದೇಹ ತೊರೆದು ಹೊಸ ದೇಹ ಪ್ರವೇಶಿಸುತ್ತದೆ..ಎನ್ನುವುದನ್ನ ಅದೆಷ್ಟು ಬಾರಿ ಕೇಳಿರುವೆವೋ ..ಓದಿರುವೆವೋ..

   ಪುನರಪಿ ಜನನಂ ಪುನರಪಿ ಮರಣಂ

   ಪುನರಪಿ ಜನನೀ ಜಠರೇ ಶಯನಂ..

ಎಂದು  ಆದಿ ಶಂಕರರು ಸುಮ್ಮನೆ ಹೇಳಲಿಲ್ಲ..

” ಸಾವಿಲ್ಲದ ಮನೆಯ ಸಾಸಿವೆ ತಾ ” ಎಂದು ಗೌತಮ ಬುದ್ಧ ಸುಮ್ಮನೇ ಕಿಸಾ ಗೋತಮಿಯನ್ನು ಕಳಿಸಲಿಲ್ಲ.

         ಸಾವು ಎಲ್ಲ ಜೀವಿಗಳಿಗೂ ಕಟ್ಟಿಟ್ಟ ಬುತ್ತಿ ಎಂದು ತಿಳಿದಿದ್ದರೂ ಸಾವಿಗಂಜುವವರು ನಾವು.ತೀರಾ ಅಪರೂಪದ ಜ್ಞಾನಿಗಳು ಮಾತ್ರಾ ಸಾವನ್ನು ಸಮಾಧಾನಚಿತ್ತರಾಗಿ ಬರಮಾಡಿಕೊಳ್ಳುವರೇ ಹೊರತು ಸಾಮಾನ್ಯರೆಲ್ಲ ಸಾವೆಂದರೆ ಅಂಜುವವರೇ..

             ತುಂಬು ಬಾಳನ್ನು ಬಾಳಿ ಮರಣಿಸಿದವರ ಬಗ್ಗೆ ದುಃಖ ಅಷ್ಟೇನೂ ಇರದಿದ್ದರೂ ಆ ಕೊರತೆ ಆಗಾಗ ಕಾಡುವುದು ಸುಳ್ಳಲ್ಲ..ಚಿಕ್ಕ ವಯಸ್ಸಿನಲ್ಲಿ ದುರಂತ ,ಅಕಾಲ ಮೃತ್ಯುವಿಗೀಡಾದವರ ಸಾವು ಕೊಡುವ ಹೊಡೆತ ಪ್ರೀತಿ ಪಾತ್ರರಿಗೆ ಭರಿಸಲಾಗದ್ದು.ಯಾವ ಸಮಾಧಾನವೂ ಒಣ ಮಾತುಗಳಾಗೇ ಉಳಿವ ಸಂದರ್ಭವೆಂದರೆ ಇಂತಹ ಸಾವಿನ ಸನ್ನಿವೇಶ. ಕಾಲವೇ ಮದ್ದು ಎನ್ನುವುದು ಎಷ್ಟು ನಿಜ ನೋಡಿ.ಕಾಲಕ್ಕಿಂತ ಒಳ್ಳೆಯ ವೈದ್ಯನಿಲ್ಲ ,ಕಾಲಕ್ಕಿಂತ ಒಳ್ಳೆಯ ಮದ್ದಿಲ್ಲ ಎನ್ನುವುದೂ ಇದೇ ಕಾರಣಕ್ಕೆ .ಈ ಬದುಕು – ಸಾವಿನ ಆಟ ಅದೆಷ್ಟು ವಿಪರ್ಯಾಸವೆಂದರೆ ಘಾಸಿಗೊಳಿಸುವುದೂ ಕಾಲ , ಮದ್ದು ಲೇಪಿಸುವುದೂ ಕಾಲ! ಇಂತಹ ಕಣ್ಣಿಗೆ ಕಾಣದ ಕಿವಿಗೆ ಕೇಳದ ಕಾಲನ ಬಂಡಿಯಲ್ಲಿ ನಾವು ಅದೆಷ್ಟು ನಿರ್ಭಿಡೆಯಿಂದ ಪಯಣ ಹೊರಟಿದ್ದೇವೆಂದರೆ ಸಾವೆಂಬ ಮುಖ ಹೊತ್ತ ಕಾಲ ಎದುರಾಗಿ ಕೈ ಹಿಡಿವವರೆಗೂ ನಾವುಗಳು ಚಿರಂಜೀವಿಗಳು ಎಂಬ ಭ್ರಮೆಯಲ್ಲೇ ಬದುಕುತ್ತೇವೆ!

              ನಾವಿಂದು ದೇವರೆಂದು ಪೂಜಿಸುವ ರಾಮ ,ಕೃಷ್ಣ, ಏಸು ,ಪೈಗಂಬರ್ ಯಾರೂ ಕಾಲನ ಪಾಶದಿಂದ ತಪ್ಪಿಸಿಕೊಳ್ಳಲಾಗಲಿಲ್ಲ.ಬ್ರಹ್ಮಾಂಡವ ಗೆಲ್ಲುವ ಮಹತ್ವಾಕಾಂಕ್ಷೆ ಹೊತ್ತ ಅಲೆಕ್ಸಾಂಡರ್ ಚಿಕ್ಕ ವಯಸ್ಸಿನಲ್ಲೇ ಮೃತ್ಯುವಿಗೀಡಾದಾಗ ಶವಯಾತ್ರೆಯಲ್ಲಿ  ಅವನೆರಡು ಖಾಲಿ ಕೈಗಳು ಮಾತ್ರಾ ಕಾಣುವಂತಿರಬೇಕೆಂದು ಸೂಚಿಸಿದ್ದಾನೆಂಬ ಕಥೆಯ ಕೇಳದವರಾರು? ಸತ್ತ ನಂತರದ ಬದುಕಿನ ಬಗ್ಗೆ ಸತೀವ ನಂಬಿಕೆಯಿಂದ ವೈಭವೋಪೇತ ಗೋರಿಗಳ ನಿರ್ಮಿಸಿಕೊಂಡ ಈಜಿಪ್ಟಿನ ಫೆರೋಗಳು ಎಲ್ಲಿದ್ದಾರೀಗ?

          ಸಾವಿನೊಂದಿಗೇ ಬದುಕುವ ಅನಿವಾರ್ಯತೆ ಈ ಬದುಕಿನದು. ಏನೇ ಇದ್ದರೂ ಏನೇ ಗೆದ್ದರೂ ಕೊನೆಗೊಮ್ಮೆ ಎಲ್ಲ ತೊರೆದು ಹಿಡಿ ಬೂದಿಯಾಗುವುದು ಅಥವಾ ಮಣ್ಣಲ್ಲಿ ಸೇರುವುದು ಕಾಲಚಕ್ರದ ನಿಯಮ.

         ಸಾವು ಬೇಡದ ಅತಿಥಿಯಾದರೂ ಬರಬೇಡವೆಂದು ತಡೆಯಲು ಯಾರಿಗೂ ಆಗದು.

ಬದುಕು – ಸಾವಿನ ಈ ಯುದ್ಧದಲ್ಲಿ ಕೆಲವೊಮ್ಮೆ ಸಾವನ್ನು ಕೊಂಚ ದೂರ ಹಿಮ್ಮೆಟ್ಟಿಸಬಹುದಷ್ಟೆ.ಸೋಲಿಸಲು ಸಾಧ್ಯವೇ ಇಲ್ಲ. ಈ ಕಾಲಮಾನ ಕೊರೊನಾದ ವಿಕಟಬಾಹುಗಳು ಸುತ್ತ ಮುತ್ತ ಚಾಚಿ ಬದುಕನ್ನು ಕಬಳಿಸುತ್ತಿರುವ ಕಾಲಮಾನ. ಕಂಡು ,ಕೇಳರಿಯದ ದುರಂತಗಳಿಗೆ ಸಾಕ್ಷಿಯಾಗುತ್ತಿರುವ ಬದುಕು ಎಷ್ಟೇ ಗಟ್ಟಗತನವಿದ್ದರೂ ಹೈರಾಣಾಗುತ್ತಿರುವ ಕಾಲಮಾನ.

              ಅನಿರೀಕ್ಷಿತ ಸಾವಿನ ನೋವುಗಳಿಗೆ ನಾವೆಲ್ಲ ಸಾಕ್ಷಿಯಾಗಿಬಿಟ್ಟಿದ್ದೇವೆ. ಆದರೂ ಬದುಕು ಸಾಗುತ್ತಲೇ ಇದೆ ಮತ್ತು ಸಾಗುತ್ತಲೇ ಇರಬೇಕು.ನಮ್ಮ ನಾವೇ ಸಂತೈಸಿಕೊಂಡು ಪರರ ನೋವಿಗೂ ಸಾಂತ್ವನ ನೀಡಬೇಕಾದ ಕಾಲವಿದು. ಎದೆಗುಂದದೆ ಹೋರಾಡಿದರೆ ಸಾವ ಕೊಂಚ ಹಿಮ್ಮೆಟ್ಟಿಸಬಹುದು.

ಈ ಸಂದರ್ಭದಲ್ಲಿ ಒಂದು ಪುಟ್ಟ ಕಥೆ ನೆನಪಾಗುತ್ತಿದೆ.

ಬದುಕು ಯಾಕೋ ಬೇಜಾರು ಮಾಡ್ಕೊಂಡು ಸಿಕ್ಕ ದಾರೀಲಿ ಹೆಜ್ಜೆ ಹಾಕಿ ನಡೆದುಕೊಂಡು ಹೋಗ್ತಾ ಇತ್ತು.ಹಾಗೇ ಹೋಗ್ತ ಇರಬೇಕಾದ್ರೆ ಪಕ್ಕದಲ್ಲೇ ಯಾರೋ ಬಂದು ಜೊತೆಗೆ ಹೆಜ್ಜೆ ಹಾಕಿದ ಹಾಗೆ ಅನಿಸಿತು.ಬದುಕು ಓರೆಗಣ್ಣಲ್ಲೇ ನೋಡ್ತು. ನಗುವಿನ ಗುರುತು ಹತ್ತಿತು.ಆದರೂ  ಮಾತಾಡಿಸಬೇಕೆನಿಸಲಿಲ್ಲ. ಮೌನವಾಗಿ ಮುಂದುವರೊಯಿತು.ಸ್ವಲ್ಪ ದೂರ ಹಾಗೇ ನಡೀತು ಬದುಕು .ಈ ಸಲ ಈ ಕಡೆ ಪಕ್ಕ ಮತ್ತಾರೋ ಜೊತೆಗೆ ನಡೀಯೋಕೆ ಶುರು ಮಾಡಿದಾರೆ! ಮತ್ತೆ ಓರೆಗಣ್ಣ ಬಿಟ್ಟು ನೋಡಿದರೆ ಜೊತೆಗೆ ನಡೀತಿರೋದು  ಅಳು!! ಬದುಕು ತಲೆ ಚಚ್ಚಿಕೊಳ್ತ ಬಿರಬಿರನೆ ಹೆಜ್ಜೆ ಹಾಕಲಾರಂಭಿಸಿತು. ಹಿಂದೆ ಉಳಿದ ಅಳು ಅದಕ್ಕೂ ಹಿಂದೆ ಉಳಿದಿದ್ದ ನಗು ಎರಡೂ ಕ್ಷಣ ಒಂದನ್ನೊಂದು ನೋಡಿಕೊಂಡು ಹೆಗಲ ಮೇಲೆ ಕೈ ಹಾಕಿಕೊಂಡು  ಬದುಕಿನ ಹಿಂದೆ ಸದ್ದಾಗದಂತೆ ನಡೆಯಲಾರಂಭಿಸಿದವು. ಬದುಕು ನಿರಾಳವಾಗಿ  ಯಾರೂ ಜೊತೆಗಿಲ್ಲದ್ದನ್ನ ಖಚಿತಪಡಿಸಿಕೊಂಡು ಒಂದಷ್ಟು ದೂರ ಹಾಗೇ ನಡೀತ ಇತ್ತು. ಈ ನಿರಾಳತೆ ಬಹಳ ಹೊತ್ತು ಉಳಿಯಲಿಲ್ಲ..ಪಕ್ಕದಲ್ಲೇ ಮತ್ತಾರೋ ಬರುತ್ತಿರುವ  ಇರುವ  ಹಾಗೆ ಭಾಸವಾಯಿತು.. ಪೂರ್ತಾ ಕತ್ತು ತಿರುಗಿಸಿ ನೋಡಿದರೆ ಅದು ಸಾವು…ಬದುಕು ಬೆಚ್ಚಿ ನಡಿಗೆಯ ವೇಗ ಹೆಚ್ಚಿಸಿತು. ಸಾವೂ ಅದೇ ವೇಗದಲ್ಲಿ ಬದುಕಿನ ಜೊತೆ ಹೆಜ್ಜೆ ಹಾಕಿತು. ಬದುಕು ಬೇರೆ ದಾರಿಕಾಣದೆ ಓಡಲಾರಂಭಿಸಿತು..ಸಾವೂ ಅಷ್ಟೇ ಜೋರಾಗಿ  ಬದುಕಿನ ಪಕ್ಕ ಓಡಲಾರಂಭಿಸಿತು.

ಬದುಕು ಕ್ಷಣ ನಿಂತು ಹಿಂದೆ ತಿರುಗಿ ನೋಡಿತು. ಅಲ್ಲಿ ದೂರದಲ್ಲಿ ನಗು ಅಳು ಎರಡೂ ಪರಸ್ಪರ ಹೆಗಲ ಮೇಲೆ ಕೈ ಹಾಕಿಕೊಂಡು ಬರುತ್ತಿರುವುದು ಕಾಣಿಸಿ ಸಹಾಯ ಕೇಳುವಂತೆ ಕೈ ಬೀಸಿತು.ಇದಕ್ಕಾಗೇ ಕಾದಿರುವಂತೆ ಅಳು ನಗು ಎರಡೂ ಶರವೇಗದಲ್ಲಿ ಬಂದು ಬದುಕಿನ ಅಕ್ಕ ಪಕ್ಕ ಸೇರಿಕೊಂಡು ನಡೆಯಲಾರಂಭಿಸಿದವು.  ಬದುಕಿನ ಜೊತೆಗೇ ಹೆಜ್ಜೆ  ಹಾಕುತ್ತಿದ್ದ ಸಾವು ಇದನ್ನೆಲ್ಲ ನೋಡಿ ನಸುನಗುತ್ತಾ ಹಿಂದೆ ಸರಿಯಿತು. ಬದುಕು ಉಸ್ಸೆಂದು ಅಕ್ಕ ಪಕ್ಕದಲ್ಲಿ ಸಾಗುತ್ತಿದ್ದ ನಗು ಅಳುಗಳ ಕೈ ಹಿಡಿಯಿತು. ಸಾವನ್ನು ಸೋಲಿಸಿದೆನೆಂದುಕೊಂಡು ನಿಧಾನವಾಗಿ  ನಡೆಯಲಾಭಿಸಿತು…

ಅಲ್ಲಿ…ಬದುಕಿನಿಂದ ಒಂದೇ ಹೆಜ್ಜೆ ದೂರದಲ್ಲಿ ಬೆಕ್ಕಿನಂತೆ ಹೆಜ್ಜೆ ಇಡುತ್ತಾ ಸಾವು ಹಿಂಬಾಲಿಸಿತು..ಬದುಕಿನ ಮುಖದಲ್ಲಿ ನೆಮ್ಮದಿ …ಸಾವಿನ ಮುಖದಲ್ಲಿ ವ್ಯಂಗ್ಯ..

ಬದುಕಿನ ಅಕ್ಕ ಪಕ್ಕ ನಡೆದಿದ್ದ ಅಳು ನಗು ಎರಡೂ ಪರಸ್ಪರ ಮುಖ ನೋಡಿಕೊಂಡವು!!!!

                    ಜಾತಸ್ಯ ಮರಣಂ ಧ್ರುವಂ …

ಬದುಕಿನ ಆರಂಭದ ಘಳಿಗೆಯಿಂದಲೇ ಅಂತ್ಯವೂ ಹಿಂಬಾಲಿಸುವುದು ಕಟುಸತ್ಯ. ಈ ಸತ್ಯ ಅರಿತು ಬದುಕೋಣ ಬದುಕಲು ಬಿಡೋಣ ಮತ್ತು ಬದುಕಲು ಸಹಕರಿಸೋಣ..

*************************                       —

ದೇವಯಾನಿ

ಕಾಲೇಜು ದಿನಗಳಿಂದ ದೇವಯಾನಿ ಹೆಸರಿನಲ್ಲಿ ಕಥೆ ,ಕವನ ,  ಅನುವಾದಿತ ಕಥೆ , ಪ್ರಬಂಧ ಬರೆಯುತ್ತಿದ್ದು ತುಷಾರ, ಮಯೂರ ,ಕಸ್ತೂರಿ , ಪ್ರಜಾವಾಣಿ, ವಿಕ್ರಮ , ಉತ್ಥಾನ, ಉದಯವಾಣಿ, ತರಂಗ ,ವಿಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವೃತ್ತಿಯಿಂದ ಗಣಿತ ವಿಜ್ಞಾನ ಪ್ರೌಢಶಾಲಾ ಶಿಕ್ಷಕಿ.ಇಪ್ಪತ್ತನಾಲ್ಕು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಹಲವಾರು ಸಂಪನ್ಮೂಲ ಸಾಹಿತ್ಯವನ್ನು ರಚಿಸಿದ್ದು ಹಲವಾರು ರಾಜ್ಯಮಟ್ಟದ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಶಾಲಾ ಮಕ್ಕಳಿಗಾಗಿ ” ಧರೆಯನುಳಿಸುವ ಬನ್ನಿರಿ, ಮೂರು ವೈಜ್ಞಾನಿಕ ನಾಟಕಗಳು” , “ತುಟಿ ಬೇಲಿ ದಾಟಿದ ನಗು” ಕವನ ಸಂಕಲನ ,  “ತುಂಡು ಭೂಮಿ ತುಣುಕು ಆಕಾಶ”  ಕಥಾ ಸಂಕಲನ ಪ್ರಕಟಿಸಿದ್ದು ಅನುವಾದಿತ ಕಥಾ ಸಂಕಲನ ಅಚ್ಚಿನಲ್ಲಿರುತ್ತದೆ

Leave a Reply

Back To Top