ಗಜಲ್
ಸಿದ್ಧರಾಮ ಹೊನ್ಕಲ್
ಮಮತಾಮಯಿಯ ಪುಟ್ಟ ಜೀವಗೊಳದಲಿ ಅಪಾರ ನೋವಿಟ್ಟುಕೊಂಡು ನೀ ಬಳಲಬೇಡ
ನಿನ್ನದೇ ನಿನಗೆ ನೂರಾರಿರುವಾಗ ನಮ್ಮದಿಷ್ಟು ಜೊತೆ ಸೇರಿಸಿಕೊಂಡು ನೀ ಬಳಲಬೇಡ
ಹೆಗಲ ಮೇಲೆ ತಲೆಯಿಟ್ಟು ಅತ್ತಾದರೂ ಒಮ್ಮೆ ಎಲ್ಲ ಹೇಳಿ ಹಗುರಾಗಬಾರದೇನೆ ಸಖಿ
ಕಣ್ಣೀರುಣ್ಣುತ್ತಾ ನಗುವ ನಾಟಕದಿ ಕಾಲದೂಡಿ ನೊಂದುಕೊಂಡು ನೀ ಬಳಲಬೇಡ
ಹುಚ್ಚುಪ್ಯಾಲಿ ಜನಗಳು ನಾವು ನಮ್ಮದೇ ಯೋಚನೆಯಲಿ ನಿನ್ನ ಚಿಂತಿಸೋರಾರು?
ಹಣತೆಯಂತೆ ಕತ್ತಲ ಮನೆ ಬೆಳಗಲು ನಿನ್ನನ್ನೇ ಮತ್ತೆ ಸುಟ್ಟುಕೊಂಡು ನೀ ಬಳಲಬೇಡ
ನನ್ನ ನೀನು ಬಲ್ಲೆ ನಿನ್ನ ನಾನು ಬಲ್ಲೆ ಸುಮ್ಮನೆ ಅಗಲುವ ಮಾತೇಕೆ ಆಡುತಿರುವಿ
ಜಗದಿ ಯಾರು ಬಿಟ್ಟರು ಪರಸ್ಪರ ಬಿಡದ ಭಾವ ಬಂಧನ ಇಟ್ಟುಕೊಂಡು ನೀ ಬಳಲಬೇಡ
ಲೌಕಿಕದ ಎಲ್ಲ ಇದ್ದು ಏನಿಲ್ಲದವನಂತೆ ತೊರೆದು ಅಲೌಕಿಕದೆಡೆ ಹೋಗುವಂತೆನ್ನ ಮಾಡದಿರು
ಹೂಮನದ ನಿನಗೆ ಹೂವು ತರುವನು ಹುಲ್ಲಲ್ಲ ಅಸತ್ಯ ನಂಬಿಕೊಂಡು ನೀ ಬಳಲಬೇಡ
ನಾಲ್ಕು ಅತೃಪ್ತರು ಅಸೂಯೆಯಲಿ ಅಂದಾಡಿ ದೊಡೆ ಆ ದೇವಲೋಕ ಹಾಳಾಗುವದಿಲ್ಲ
ಸೃಷ್ಟಿಕರ್ತನೆ ಮೆಚ್ಚಿಸಲಾಗದಿಲ್ಲಿ ಇಂಥ ಕೆಲವರ ಮಾತು ಕೇಳಿಸಿಕೊಂಡು ನೀಬಳಲಬೇಡ
ನಿನ್ನ ಮನದ ರಾಗ ಅನುರಾಗ ಪ್ರೀತಿ ಪ್ರೇಮ ಅಭಿಮಾನ ಬಲ್ಲೆ ಹೇಳದಿರಬೇಡ ಸಖಿ
ನಮ್ಮ ಭಾವಗಳೆಲ್ಲ ತರಂಗದಿ ತಲುಪುವವು ಅನುಭವಿಸಿಕೊಂಡು ನೀ ಬಳಲಬೇಡ
ಎಲ್ಲಿಯದೋ ಬಂಧ ಈ ಅನುಬಂಧವಾಗಿ ಮನಕೆ ಮನ ಬೆಸೆದಿಹದು ಮರೆಯಲುಂಟೆ
ಎಲ್ಲರಂಥವನಲ್ಲ ಈ ಹೊನ್ನಸಿರಿ’ ನೀ ಬಲ್ಲೆ ಅರಿತುಕೊಂಡು ನೀ ಬಳಲಬೇಡ
****************************