ಉತ್ತರ ಹುಡುಕುವ ಹಠವಾದರೂ ಯಾಕ …?

ಲಹರಿ

ಉತ್ತರ ಹುಡುಕುವ

ಹಠವಾದರೂ ಯಾಕ …?

ರಶ್ಮಿ.ಎಸ್.

person submerged on body of water holding sparkler

ಹುಬ್ಬಳ್ಳಿಗೆ ವರ್ಗ ಆದಾಗ, ವರ್ಗಾವಣೆಯ ಪತ್ರ ಸಿಕ್ಕಿದ್ದು ಮಾರ್ಚ್‌ ತಿಂಗಳದಾಗ. ಅದಾದ ಮೇಲೆ ನನ್ನ ಪಾಳಿಯವರಿಗೆ ಮೂರು ರಾತ್ರಿ ಪಾಳಿ ಸಿಕ್ಕಿದ್ದುವು. ಈ ರಾತ್ರಿ ಪಾಳಿ ಮುಗಿಸಿದ ಮ್ಯಾಲಿನ ಎಂ.ಜಿ. ರೋಡು, ನಮ್ಮನಿಗೆ ಹೋಗುವ ಹಾದಿ ಎಲ್ಲವೂ… ನನ್ನೊಟ್ಟಿಗೆ ಮಾತಿಗೆ ಇಳೀತಾವ ಅಂತನಿಸ್ತಿತ್ತು. ಅದೊಂಥರ ಹೇಳಲಾಗದ ಸಂಕಟ. ಕೊನೆಯ ರಾತ್ರಿಪಾಳಿ ಮೂರು ದಿನ ಮಾಡಿ, ನಾಲ್ಕನೆ ದಿನ ಹುಬ್ಬಳ್ಳಿಗೆ ಬಂದಿದ್ದೆ. ಹಂಗ ಬರೂಮುಂದ ಆ ಮೂರು ದಿನಾನೂ ಗುನುಗಿದ್ದು, ಕಣ್ಣೀರಾಗಿದ್ದು, ಕಣ್ಣಪಸೆ ಒರೆಸಿಕೊಂಡು, ಗಟ್ಟಿಯಾಗಿದ್ದು ಈ ಹಾಡು ಕೇಳ್ಕೊಂತ.

ಪ್ರತಿ ಚರಣ ಕೇಳಿದಾಗಲೂ ನನ್ನ ಹೃದಯಕವಾಟದಿಂದ ಒಂದು ನಿಟ್ಟುಸಿರು, ಬಿಡುಗಡೆ ಬಯಸಿ ಹೊರಗ ಬರ್ತಿತ್ತು. ಸುರೇಶ್‌ ವಾಡ್ಕರ್‌ ತೀರ ನಾನು ಅದುಮಿಡಬೇಕೆಂದಿರುವ ಮಾತುಗಳನ್ನೇ ಹಾಡಿದ್ಹಂಗ. ಕವಿ ಶರ್ಯಾರ್‌ ಈ ಕವಿತೆಯನ್ನು ನಾ ಹುಟ್ಟಿದ ವರ್ಷ ಬರೆದಿದ್ದು. 1978ರಾಗ. ಆದ್ರ ನನಗ ತೀರ ಆಪ್ತವಾಗಿದ್ದು 2019. ಅಲ್ಲೀತನಾನೂ ಹಾಡು ಕೇಳ್ತಿದ್ದೆ. ಆನಂದಿಸ್ತಿದ್ದೆ. ಅನುಭವಿಸಿದ್ದು ಅದೇ ಮೊದಲು.

ಸೀನೆ ಮೆ ಜಲನ್‌.. ಆಂಖೊಮೆ ತೂಫಾನ್ಸಾ ಕ್ಯೂಂ ಹೈ

ಇಸ್ಶೆಹರ್ಮೆ ಹರ್ಶಕ್ಸ್ಪರೇಶಾನ್ಸಾ ಕ್ಯೂಂ ಹೈ

(ಎದಿಯೊಳಗ ಬೆಂಕಿ, ಕಣ್ಣಾಗ ತೂಫಾನಿದ್ದಂಗ ಯಾಕದ

ಈ ಊರೊಳಗ ಎಲ್ಲಾರೂ ಯಾಕ ಪರೇಶಾನ್‌ ಇದ್ದಂಗದಾರ)

ಎಂ.ಜಿ. ರಸ್ತೆಯ ನಂ. 75 ಇಂದ, ಅನಿಲ್‌ ಕುಂಬ್ಳೆ ಸರ್ಕಲ್‌ ಕಡೆ ಹೋಗುಮುಂದೆಲ್ಲ ನೆನಪುಗಳ ಮೆರವಣಿಗೆ. ನಮ್ಮಮ್ಮ ಬಂದು ಅಲ್ಲಿ ಎಂ.ಜಿ. ರೋಡಿನ ಸಂತಿ ನೋಡ್ಕೊಂತ ನನಗ ಕಾಯ್ತಿದ್ಲು. ನಾನು, ಅದೇ ಕಾಫಿಹೌಸಿನಾಗ ನವೀ ಸಲ್ಯಾಗ ತಾಸುತನಾ ಕಾಯ್ತಿದ್ದೆ. ಅವನೂ ಕಾಯ್ತಿದ್ದ. ವ್ಯತ್ಯಾಸ ಏನಂದ್ರ ನಾ ಕಾಯ್ದಾಗ ಜಗಳ ಆಗ್ತಿರಲಿಲ್ಲ. ಅವ ಕಾಯ್ದಾಗ ಜಗಳಾ ಕಾಯಾಕನ ಕಾಯ್ದಾನ ಅನ್ನೂಹಂಗ ಆಗ್ತಿತ್ತು.

ಅಲ್ಲಿದ್ದ ಕಾಫಿ ಹೌಸು. ಆಮೇಲೆ ಟೈಟನ್‌ ಮಳಿಗೆ, ಅದಾದ ಮೇಲೆ ಎಸ್‌.ಬಿ.ಎಂ, ಹಂಗೆನೆ ಅಲ್ಲಿ ಕಾಲುಚಚೀಲ ಮಾರುವ ರಾಜು, ಪಾನು ಮಾರುವ ಗುರು, ಬಾರ್ಟನ್‌ ಸೆಂಟರ್‌, ಟೈಮ್ಸ್‌ ಕಚೇರಿ, ಹೆಲ್ತ್‌ ಅಂಡ್‌ ಗ್ಲೋ.. ಅದಾದ ಮೇಲೆ ಅಲ್ಲಿ ಭೇಲ್‌ ಮಾಡಿ ಕೊಡ್ತಿದ್ವರು.. ಅದೆಷ್ಟು… ಅದೆಷ್ಟು.. ಎಲ್ಲ ಕತ್ತಲೆಯೊಳಗೂ ಎಷ್ಟೆಲ್ಲ ಬಣ್ಣಬಣ್ಣದ ನೆನಪಿನ ಚಿತ್ರಗಳು. ನಾನು, ಶೈಲಾ, ಷಣ್ಮುಖಪ್ಪ ಅಲ್ಲೇ ಹಣ್ಣು ತಿಂತಿದ್ದಿದ್ದು. ನಮ್ಮ ಗುಂಪು ಅಲ್ಲಿ ಚಹಾ ಕುಡೀತಿದ್ದಿದ್ದು.. ಒಂದೆರಡಲ್ಲ. ಇಂಥಾವು ಅದೆಷ್ಟು ನೆನಪುಗಳು… ಇಲ್ಲಿ ಅರ್ನಿ ಓಡಿ ಹೋಗಿತ್ತು, ಈ ಪಾರ್ಕ್್ಸ ಅವೆನ್ಯುನಾಗ ನವೀಗೆ ಶರ್ಟು, ಸ್ವೆಟರ್‌ ತೊಗೊತಿದ್ದಿದ್ದು… ಅರ್ನಿ, ಭೂಮಿಗೆ ಮೊದಲ ಅಂಗಿ ತೊಗೊಂಡಿದ್ದ ಬೇಬಿ ಶಾಪ್‌, ಯುಎಫ್‌ಒ, ಆ ಕಾಶ್ಮೀರಿ ಎಂಪೋರಿಯಮ್‌… ಆಜಾವೊ.. ಬೆಹನ್‌.. ಅಂತ ಕರದು, ಹೊಸತೆಲ್ಲ ತೋರಿಸ್ತಿದ್ರು.

ಒಂದೆರಡು ಅಂಗಡಿಯಲ್ಲ, ಒಂದೆರಡು ಸಂತಿಯಲ್ಲ. ನಮ್ಮ ಬದುಕೇ ಅಲ್ಲಿ ಒಗದು ಒಣಹಾಕಿದ್ಹಂಗ. ಏನೇನೂ ಮುನ್ಸೂಚನೆ ಇಲ್ದೆ ಮಳಿ ಬಂದಾಗ ಎದ್ನೊಬಿದ್ನೊ ಅಂತ ಓಡೋಡಿ ಹೋಗಿ, ಮೊಣಕೈಮ್ಯಾಲೆ, ಭುಜದ ಮ್ಯಾಲೆ ಅರವಿ ಗುಡ್ಡ ಹೊತ್ಕೊಂಡು ಬರ್ತೀವಲ್ಲ ಹಂಗ.. ಜೋಲಿ ಹೋದಂಗ..

ಒಂದೂರು. ಒಂದು ಜೀವನ, ಬಿಟ್ಟು ಬರೂದದಲ್ಲ.. ಹಂಗ ಬಿಟ್ಟು ಬರೂಮುಂದ, ಮನ್ಯಾಗಿನ ಸಾಮಾನುಗಳನ್ನು ಕಟ್ಟೂದದ ಅಲ್ಲ.. ಅದು ಇಂಥದ್ದೇ ಇಂಥದ್ದೇ ಭಾವಗಳನ್ನು ಮೂಡಸ್ತದ.

 ದಿಲ್ಹೈ ತೊ ಧಡಕನೆಕಾ ಬಹಾನಾ ಕೊಯಿ ಢೂಂಡೆ (ಹೃದಯ ಐತೆಂದ್ರ ಮಿಡಿಯಲು ಒಂದು ನೆಪನಾರೂ ಹುಡುಕಬೇಕಲ್ಲ)

ಪತ್ಥರ್‌ ಕಿ ಥರ, ಬೇಹಿಸೊ, ಬೇ ಜಾನ್‌ ಸಾ ಕ್ಯೂಂ ಹೈ (ಕಲ್ಲಿನ್ಹಂಗ ಗಟ್ಟಿ, ಜೀವರಹಿತ ಯಾಕದ)

ಯಾಕ ಹಂಗ ಆಗ್ತದ. ದುಡುದುಡು ಅಂತೋಡುವ ಹೃದಯದ ಮಿಡಿತ ಇದ್ದಕ್ಕಿದ್ದಂಗೆ ಅಲ್ಲಲ್ಲೇ ನಿಂತಂಗ. ಹಟಮಾರಿ ಮಕ್ಕಳು, ಬೊಂಬಾಯಿ ಮಿಠಾಯಿ ಬೇಕೆಬೇಕಂತ ನಡು ರಸ್ತೆಯೊಳಗ ರಚ್ಚೆ ಹಿಡದು, ಅಲ್ಲೇ ಕುಕ್ಕರ್ತಾವಲ್ಲ.. ಹಂಗ.. ಹೃದಯನೂ ಕೆಲವೊಮ್ಮೆ. ಆದ್ರ ನಾನು, ನನ್ಮನಿ ಬಿಟ್ಟು, ನನ್ನ ಮಕ್ಕಳನ್ನ ಕರಕೊಂಡು ಹುಬ್ಬಳ್ಳಿಗೆ ಬರೂಮುಂದ ಆದ ಸಂಕಟ ಹಿಂಗೆ ಇತ್ತು.

ಮತ್ತ ನಮ್ಮ ಗೂಡಿಗೆ ಮರಳ್ತೀವಿ ಅನ್ನುವ ಖಾತ್ರಿ ಇದ್ದರೂ ಬಿಟ್ಟು ಬರುವ ದರ್ದು ಸಣ್ಣದಾಗಿರಲಿಲ್ಲ.

ಮತ್ತ ಹೋಗ್ತೇವಿ. ಗೂಡು ಸೇರ್ತೀವಿ ಅನ್ನೂ ನಿರೀಕ್ಷೆ ದಿನದೂಡಾಕ ಶಕ್ತಿಯಂತೂ ಕೊಡ್ತದ. ಆದ್ರ ಹಂಗ ದಿನ ದೂಡೂತನನೂ.. ಈ ಸೀನೆ ಮೆ ಜಲನ್‌… ಆಂಖೋ ಮೆ ತೂಫಾನ್‌ ಸಾ ಕ್ಯೂಂ.. ಹೈ.. ಹಾಡು ಗುನುಗೂದು. ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕೂದು…

ಜೀವನ ಸಣ್ದು.. ಉತ್ತರ ಹುಡುಕುವ ಹಟನಾದ್ರೂ ಯಾಕ.. ಪ್ರಶ್ನೆಗಳಿಲ್ಲದೆ ಆನಂದಿಸೂನಂತ..!

*********

Leave a Reply

Back To Top