ದೀಪಧಾರಿಣಿ

ಲೇಖನ

ದೀಪಧಾರಿಣಿ

Florance Nightingale

ಅಂಜಲಿ ರಾಮಣ್ಣ

ಮ್ಯೂಸಿಯಂ ಬಾಗಿಲು ಹಾಕಲು ಇನ್ನರ್ಧ ಗಂಟೆ ಮಾತ್ರ ಇತ್ತು. ದಡಬಡಗುಟ್ಟಿಕೊಂಡು ಹೋದೆ . ಪ್ರವೇಶ ದರ £೭ . ಸ್ವಾಗತಕಾರಿಣಿ ಅರ್ಧ ಗಂಟೆಕೋಸ್ಕರ ಪಷ್ಟು ದುಡ್ಡು ಕೊಡಬೇಡಿ ನಾಳೆ ಬನ್ನಿ ಎಂದಳು. ಉಹುಂ ನನಗೆ ನೋಡಲೇಬೇಕೆಂಬ ಹಠ ಬಂದಿತ್ತು.



“ಇಲ್ಲಿಗೆ ಪ್ರವಾಸಿಗರು ಬರುವುದೇ ಇಲ್ಲ ಆದರೆ ನೀವು ಇಂಡಿಯಾ  ಅಷ್ಟು ದೂರದಿಂದ ಬಂದಿದ್ದೀರಿ ನಿಮಗಾಗಿ ಇನ್ನೂ ಅರ್ಧ ಗಂಟೆ ತೆರೆದಿರುತ್ತೀನಿ ಹೋಗಿ ನೋಡಿ” ಎಂದು ಟಿಕೆಟ್ ಹರಿದುಕೊಟ್ಟವಳ ಕೈಗೆ ಮುತ್ತಿಡುತ್ತಾ ಒಳ ಹೊಕ್ಕೆ.


ಅಲ್ಲಿನ ಎಲ್ಲಾ ಮ್ಯೂಸಿಯಂಗಳಂತೆ ಇದನ್ನು ಬಲು ಒಪ್ಪವಾಗಿರಿಸಿದ್ದಾರೆ .ಆಕೆ ಹುಟ್ಟಿದಾಗಿನಿಂದ ಕೊನೆಯಾಗುವವರೆಗೂ ಮಾಡಿದ ಕೆಲಸ, ತೊಟ್ಟ ಬಟ್ಟೆ,  ಆಡಿದ ಮಾತು, ತೋರಿದ ಅಭಿರುಚಿ ಎಲ್ಲವನ್ನೂ ಲಭ್ಯತೆಗೆ ತಕ್ಕಂತೆ ಚಂದಗಾಣಿಸಿ ಇಟ್ಟಿದ್ದಾರೆ.



ಈಕೆ ದೀಪಧಾರಿಣಿ ಫ್ಲೋರೆನ್ಸ್ ನೈಟಿಂಗೇಲ್ ಮಾತ್ರವಲ್ಲ ಕೈ ಬರಹದಲ್ಲೇ 200 ಪುಸ್ತಕ 1400 ಪತ್ರಗಳು ಅದೆಷ್ಟೋ ಕರಪತ್ರ ಲೆಕ್ಕವಿಲ್ಲದಷ್ಟು ಲೇಖನಗಳನ್ನು ಬರೆದಿರುವ ಸಾಹಿತಿಯೂ ಹೌದು ಎನ್ನುವ ಹೊಸ ವಿಷಯ ತಿಳಿದುಕೊಳ್ಳುತ್ತಾ, ನೋಡುತ್ತಾ, ಕ್ಯಾಮೆರಾದಲ್ಲೂ ಕಾಣುತ್ತಾ ಹೊರ ಬರುವಾಗ ಮನಸ್ಸಿನಲ್ಲಿ ನಿಂತದ್ದು ದಾದಿ ಫ್ಲೋರೆನ್ಸ್ ಳ ಈ ಮಾತು – “Now I know what it takes to love life !”



ಇನ್ನೇನು ಹೊಸಿಲು ದಾಟುವವಳಿದ್ದೆ ಎನ್ನುವಾಗ ಹಿಂದಿನಿಂದ ಅಟ್ಟಿಸಿಕೊಂಡು ಬಂದ ಒಬ್ಬಾಕೆ ನನ್ನ ಕ್ಯಾಮೆರಾ ಕಡೆಗೆ ಕೈ ತೋರಿಸುತ್ತಾ ನನಗೆ ಮತ್ತು ಅಲ್ಲಿದ್ದ ಸ್ವಾಗತಕಾರಿಣಿಗೂಅರ್ಥವೇ ಆಗದ ಭಾಷೆಯಲ್ಲಿಜೋರಾಗಿ ಜಗಳದಂತೆ ಹೇಳುತ್ತಾ ಕೈಬಾಯಿ ಬೀಸಲಾರಂಭಿಸಿದಳು. ಹತ್ತದಿನೈದು ನಿಮಿಷವಾದರೂ ಬಗೆ ಹರಿಯುತ್ತಿಲ್ಲ.



ಅವಳಿಗೆ ಹೇಳದೆ ಅವಳ ಫೋಟೋ ತೆಗೆದಿದ್ದೇನೆ ಎನ್ನುತ್ತಿದ್ದಾಳೇನೋ ಎಂದುಕೊಂಡು ಸಮಜಾಯಿಷಿ ಕೊಡುತ್ತಿದ್ದೆ ನಾ ಇಂಗ್ಲಿಷ್ನಲ್ಲಿ. ಉಹುಂ ಅವಳು ಮಾತು ನಿಲ್ಲಿಸಳು. ನನಗೆ ಅರ್ಥವೂ ಆಗದವಳು ಏಕ್ದಂ ಬಿಗಿಯಾಗಿ ಅಪ್ಪಿಬಿಟ್ಟಳು.


ನಂತರ ಗೊತ್ತಾಗಿದ್ದುಅವಳು ಚಿಲಿ ದೇಶದಲ್ಲಿ ನರ್ಸ್ ಆಗಿದ್ದಾಳೆ. ಈ ಮ್ಯೂಸಿಯಂನಲ್ಲಿ ನಾನು ತೆಗೆದು ಫೋಟೋಗಳನ್ನು ತನ್ನ ಜೊತೆ ಈಮೇಲ್ನಲ್ಲಿ ಹಂಚಿಕೊಳ್ಳಲು ಕೇಳಿತ್ತಿದ್ದಾಳೆ ಎಂದು.



“ನೋಟ ಬದಲಾಗದೆ ದೃಷ್ಟಿಯೂ ಬದಲಾಗದು” ಎನ್ನುವ ಪಾಠ ಹೇಳಿಕೊಟ್ಟ ಜೋಹನಾಗೆ ದಾದಿಯರ ದಿನದ ಶುಭಾಶಯ ಕಳಿಸಿದ್ದೆ.  ಒಬ್ಬರಿಗೊಬ್ಬರು ಅರ್ಥವಾಗುವಭಾಷೆಯಲ್ಲಿಯೂ ಸ್ನೇಹಪೂರ್ವಕವಾಗಿ ಚಿಲಿಗೆ ಬಾ ಎಂದು ಕರೆದಿದ್ದಾಳೆ.

**************

ಕೃಪೆ:ಅಸ್ಥಿತ್ವ ಲೀಗಲ್ ಬ್ಲಾಗ್ ಸ್ಪಾಟ್

Leave a Reply

Back To Top