ಹಾಸುದೋಸೆಯ ಸುತ್ತ

ಲೇಖನ

ಹಾಸುದೋಸೆಯ ಸುತ್ತ

ಅಕ್ಷತಾರಾಜ್ ಪೆರ್ಲ

ಆವತ್ತು ಬೆಳಗ್ಗೆ ಒಂದು ಬಿಸಿಬಿಸಿ ಚರ್ಚೆ. ಅಮ್ಮನ ಪರಂಚಾಟ, ಅಪ್ಪನ ಮೌನ. ವಿಷಯವಿಷ್ಟೇ ! “ಮಗಳಿಗೆ ವರ್ಷ ಹನ್ನೊಂದಾಯ್ತು ಇನ್ನಾದ್ರೂ ಅಡುಗೆ ಕಲಿಸಬೇಕು” ಇದು ಅಮ್ಮನ ಮಾತಾದರೆ “ಇನ್ನೂ ಚಿಕ್ಕವ್ಳು ಚಹಾ, ಕಾಫಿ ಮಾಡ್ತಾಳಲ್ಲ ಸಾಕು” ಅಪ್ಪನ ಉವಾಚ. “ಇಲ್ಲ ಕಲಿಸಬೇಕು” ಮತ್ತೆ ಅಮ್ಮನ ರಾಗ. ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದ ಮಗಳು “ಕಲಿಯುವುದೇ ಆದರೆ ನಾನು ಮೊದಲು “ಹಾಸುದೋಸೆ” ಮಾಡಲು ಕಲಿಯಬೇಕು. ಈ ಹಾಸುದೋಸೆಯೊಂದು ಸೋಜಿಗ ಆವಾಗಕ್ಕೆ. ಅರೆಯುವ ಕಲ್ಲಿನಲ್ಲಿ ರುಬ್ಬಿ ತುಸುವೇ ಹಿಟ್ಟನ್ನು ಕೈಯಲ್ಲಿ ತೆಗೆದು ಕಾವಲಿಯಲ್ಲಿ ಹಸನಾಗಿ ಕೈಯಿಂದಲೇ ಉದ್ದಿದರೆ ತಯಾರಾಗುವ ಈ ಹಾಸುದೋಸೆ ಅಜ್ಜಿ, ಅಮ್ಮ ಎರೆಯುವಾಗ ನೋಡಿ “ಕೈ ಸುಡುವುದಿಲ್ವೇ!” ಹತ್ತಿರ ಕುಳಿತು ಪ್ರಶ್ನಿಸಿದ್ದಿದೆ. ಹೀಗೆ ತಯಾರಾದ ತೆಳ್ಳಗಿನ ದೋಸೆ ಸವಿಯುವ ರುಚಿಯಿದೆಯೆಲ್ಲ ಅದೊಂದು ಅದ್ಭುತ ರಸಾನುಭವವೇ ಸರಿ. ಸಾಮಾನ್ಯವಾಗಿ ಇಂತಹ ಹಾಸುದೋಸೆ ಹಲಸಿನಕಾಯಿಯದ್ದು ಅಥವಾ ಗೋಧಿಕಾಳಿನದ್ದು ಬಹುರುಚಿ. ಹಪ್ಪಳದಂತಹ ಕುರುಕಲು ದೋಸೆ ತಿಂದಷ್ಟೂ ತಿನ್ನಬೇಕೆನ್ನುವಂತಹದ್ದು ಕೂಡಾ.

ಮಗಳ ಬಾಯಿಯಲ್ಲಿ “ಹಾಸುದೋಸೆ ಮಾಡಲು ಕಲಿಯುತ್ತೇನೆ” ಎಂಬ ಮಾತು ಕೇಳಿ ಅಮ್ಮನಿಗೆ ತುಸು ಆತಂಕ. “ಸುರುವಿಗೆ ಅದನ್ನು ಕಲಿಯೋದು ಬಾಳೆಹಣ್ಣು ಸುಲಿದು ತಿಂದಂತಲ್ಲ” ಹೇಳಿದರೂ ಪಟ್ಟು ಬಿಡದೆ ರೇಷನ್ನಿನ ಗೋಧಿಯನ್ನು ಅರೆದು ದೋಸೆ ಎರೆಯುವ ತರಬೇತಿ ಆರಂಭವಾಯಿತು. ಈಗಿನಂತೆ ಗ್ಯಾಸ್ ಒಲೆ ಇದ್ದ ಕಾಲವಲ್ಲ ಅದು. ಸೀಮೆಎಣ್ಣೆಯ ಪಂಪ್ ಸ್ಟೌವ್ ಗೆ ಗಾಳಿ ಹೊಡೆದು ಕಾವಲಿಯೇರಿಸಿ ಅಮ್ಮ ಕೊಟ್ಟಳಾದರೂ ಹಿಟ್ಟು ಕೈಯಲ್ಲಿ ಹಿಡಿದವಳಿಗೆ ಕಾವಲಿಯಿಂದೆದ್ದ ಹೊಗೆ ಕಂಡು ನಡುಕ ಹಿಡಿಯಿತು. ಮೆಲ್ಲನೆ ಹಿಟ್ಟನ್ನು ಹಾಕಿದ್ದೇ ಉದ್ದಲಾರದೆ ನೋಡುತ್ತಾ ಕುಳಿತಿದ್ದೇ ಆಯಿತು. ಮತ್ತೆ ಇನ್ನೊಂದು, ಮತ್ತೊಂದು ಹಿಟ್ಟು ಹಾಕಿದ್ದೇ ಸೈ ದೋಸೆ ಮಾತ್ರ ಈಗಿನ ಬರ್ಗರ್ ಗಿಂತಲೂ ದಪ್ಪ.

ಹಿಡಿದ ಪಟ್ಟು ಬಿಡದೇ ಮತ್ತೊಂದು ದಿನ ಪ್ರಯತ್ನ ಮುಂದುವರಿಯಿತು. ಈ ಬಾರಿ ಕೈಗೆ ಬೆಂಕಿಯೂ, ಬಿಸಿಯೂ ತುಸು ಆಪ್ತವಾದಂತೆನಿಸಿತು. ಹಿಟ್ಟೆರೆದು ಬೇಗನೇ ಉದ್ದಲಾರಂಭಿಸಿದ್ದೇ ಹಿಟ್ಟೂ ಕಾವಲಿಯೂ ಕೈ ಹೇಳಿದ ಮಾತು ಕೇಳಲು ತೊಡಗಿತು. ಹೀಗೆ ಕಲಿತ “ಹಾಸುದೋಸೆ” ತಿಂದಾಗ ಅಪ್ಪನ ಮುಖದಲ್ಲಿ ಮಾತ್ರ ಮಗಳು ವಿಶ್ವವನ್ನೇ ಗೆದ್ದ ಸಂಭ್ರಮ.

ಅಡುಗೆಯೂ ಒಂದು ಕಲೆ. ಇದನ್ನು ಅರಿತವನು ಯಾ ಅರಿತವಳಿಗಷ್ಟೇ ಅದರ ಬೆಲೆ ತಿಳಿದಿಹುದು. ಆದರೆ ವರ್ತಮಾನದಲ್ಲಿ ಮೊನ್ನೆ ಮೊನ್ನೆಯವರೆಗೆ ಎಂಬಂತೆ ಬಹುತೇಕರು ಹೊರಗಿನ ತಿನಸುಗಳಿಗೆ ಒಗ್ಗಿ ಹೋಗಿದ್ದರು. ಕೆಲವು ಮನೆಗಳ ಒಲೆಗಳಂತೂ ಬೆಂಕಿ ನೋಡದೆಯೇ ತಿಂಗಳು, ವರ್ಷಗಳಾಗಿತ್ತು. ಆದರೆ ಒಂದು ರೋಗ ಕಲಿಸಿದ ಪಾಠ ಅನೇಕ. ಅಡುಗೆ ಬಾರದವರೂ ಅಥವಾ ತಾನು ಶ್ರೀಮಂತ ಮಾಡಿಕೊಳ್ಳುವ ಅನಿವಾರ್ಯ ತನಗೇನಿದೆ ಅಂದವರೂ ಇಂದು ಪಾಕಶಾಲೆಯತ್ತ ಮುಖ ಮಾಡಿದ್ದಾರೆ. ‘ಗೊತ್ತಿಲ್ಲ, ಬೇಡ, ಬೇಕಾಗಿಲ್ಲ’ ಇಂತಹವುಗಳಿಗೆ ಸದ್ಯಕ್ಕೆ ಅರ್ಧವಿರಾಮ ಕೊಟ್ಟು “ಬೇಕು, ಗೊತ್ತಿದೆ, ಬೇಕಾಗಿದೆ” ಎಂಬತ್ತ ಮುಖ ಮಾಡಿದ್ದಾರೆ.

ಬದುಕು ಹೀಗೆಯೇ ಒಂದು ಹಾಸುದೋಸೆ. ಕಷ್ಟವೆಂದು ದೂರ ಸರಿದಷ್ಟೂ ವಿಚಲಿತನನ್ನಾಗಿಸುತ್ತದೆ. ಕಷ್ಟವನ್ನೇ ಇಷ್ಟವೆಂದು ಭಾವಿಸಿ ತನ್ನದಾಗಿಸಿಕೊಳ್ಳುವುದು ಒಂದು ಚಾತುರ್ಯ, ಆದರೆ ಇದನ್ನು ತಿಳಿಯಲು ಬೇಕಾಗಿರುವುದು ಜಾಣತನ

****

One thought on “ಹಾಸುದೋಸೆಯ ಸುತ್ತ

Leave a Reply

Back To Top