ವೇದೋಕ್ತ ಪ್ರಕರಣ

ಲೇಖನ

ವೇದೋಕ್ತ ಪ್ರಕರಣ

ಆಶಾ ಸಿದ್ದಲಿಂಗಯ್ಯ

ಒಂದು ದಿನ ಬೆಳಿಗ್ಗೆ ಯುವರಾಜ ಶಾಹು ತಮ್ಮ ತಂದೆ ಅಪ್ಪಾಸಾಹೇಬ್ ಘಾಟ್ಗೆ ಮತ್ತು ಇತರರೊಡನೆ ಪಂಚಗಂಗಾ ನದಿಗೆ ಸ್ನಾನ ಮಾಡಲು ಹೋದರು. ಆಗ ಸಂಪ್ರದಾಯದಂತೆ ಮಹಾರಾಜರು ನದಿಯಲ್ಲಿ ಸ್ನಾನಮಾಡುತ್ತಿದ್ದರೆ ಬ್ರಾಹ್ಮಣ ಪೂಜಾರಿಗಳು ಮಂತ್ರ ಹೇಳಬೇಕಾಗಿತ್ತು. ಅಂತೆಯೇ ಯುವರಾಜ ಶಾಹು ಸ್ನಾನ ಮಾಡುತ್ತಿದ್ದಾಗ ಮಂತ್ರ ಹೇಳಲಾಯಿತು. ಆದರೆ ಆ ಮಂತ್ರ ವೇದ ಪಠಣವಾಗಿರಲಿಲ್ಲ. ಬದಲಿಗೆ ಪುರಾಣದ ಯಾವುದೋ ಒಂದೆರಡು ಶ್ಲೋಕಗಳಾಗಿದ್ದವು. ಅಂದಹಾಗೆ ಇದನ್ನು ಸಹಪಾಠಿಯೋರ್ವರಿಂದ ತಿಳಿದ ಯುವರಾಜ ಶಾಹು ಮಂತ್ರ ಹೇಳಿದ ಪೂಜಾರಿಯನ್ನು ಈ ಬಗ್ಗೆ ಕೇಳಿದರು.

ಇದಕ್ಕೆ ಪೂಜಾರಿ ಹೇಳಿದ್ದೇನೆಂದರೆ ‘ಮಹಾರಾಜರು ಶೂದ್ರ ವರ್ಗಕ್ಕೆ ಸೇರಿದ್ದರಿಂದ ಅವರಿಗೆ ವೇದಗಳ ಮಂತ್ರಗಳನ್ನು ಹೇಳುವ ಹಾಗಿಲ್ಲ’ ಎಂದು! ಖಂಡಿತ, ಈ ಘಟನೆ ಶಾಹು ಮಹಾರಾಜರಲ್ಲಿ ಆಕ್ರೋಶದ ಅಲೆಯನ್ನೇ ಎಬ್ಬಿಸಿತು. ಯಾಕೆಂದರೆ ಮಹಾರಾಜರಿಂದ ವೇತನ ಪಡೆಯುವ ಪೂಜಾರಿಯೊಬ್ಬ ಅದೇ ಮಹಾರಾಜರಿಗೆ ‘ಅವರು ಶೂದ್ರರು’ ಎಂಬ ಕಾರಣಕ್ಕಾಗಿ ಅವರಿಗೆ ವೇದಗಳನ್ನು ಉಚ್ಛರಿಸುವುದಿಲ್ಲ ಎಂದರೆ?

ಅಂತೆಯೇ ಇದರಿಂದ ಕೆರಳಿದ ಶಾಹು ಮಹಾರಾಜರು 1901 ಅಕ್ಟೋಬರ್ ತಿಂಗಳಲ್ಲಿ ತಮ್ಮ ಆಸ್ಥಾನದ ಮುಖ್ಯ ಪೂಜಾರಿ ರಾಜೋಪಾಧ್ಯೆಯವರಿಗೆ ತಮ್ಮ ಅರಮನೆಯಲ್ಲಿ ಇನ್ನುಮುಂದೆ ವೇದೋಕ್ತಿಗಳನ್ನೇ ಉಚ್ಛರಿಸಬೇಕೆಂದು ರಾಜಾಜ್ಞೆ ವಿಧಿಸಿದರು. ಆದರೆ ಮಹಾರಾಜರ ಇಂತಹ ಆಜ್ಞೆ ಮತ್ತು ಈ ಸಂಬಂಧ ಅವರು ನೀಡಿದ ನೋಟೀಸುಗಳಿಗೆ ಮುಖ್ಯಪೂಜಾರಿ ರಾಜೋಪಾಧ್ಯೆಯವರು ತಲೆಕೆಡಿಸಿಕೊಳ್ಳಲೇ ಇಲ್ಲ.

ಕಡೆಗೆ ತಮ್ಮ ಅಧಿಕಾರ ದಂಡ ಪ್ರಯೋಗಿಸಿದ ಶಾಹು ಮಹಾರಾಜರು ಆ ರಾಜೋಪಾಧ್ಯೆಯನ್ನು ಪೂಜಾರಿಗಿರಿಯಿಂದ ಕಿತ್ತೆಸೆದರು! ಅವರಿಗೆ ಬಳುವಳಿಯಾಗಿ ನೀಡಿದ್ದ ಇನಾಮು ಗ್ರಾಮ ಮತ್ತು ಭೂಮಿಯನ್ನು ವಾಪಸ್ ಪಡೆದರು. ಅಲ್ಲದೇ ಸದರಿ ರಾಜೋಪಾಧ್ಯೆಯವರಿಗೆ ನೀಡಿದ್ದ ಕೆಲವು ರೆವಿನ್ಯೂ, ಸಿವಿಲ್ ಮತ್ತು ಕ್ರಿಮಿನಲ್ ಅಧಿಕಾರಗಳನ್ನು ಕಿತ್ತುಕೊಂಡು ಮಹಾರಾಜ ಶಾಹು ಅವರನ್ನು ಅರಮನೆಯಿಂದ ಹೊರಹಾಕಿದರು.

ಶಾಹು ಮಹಾರಾಜರ ಇಂತಹ ಕ್ರಮಗಳ ವಿರುದ್ಧ ರಾಜೋಪಾಧ್ಯೆ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಿದನಾದರೂ ಎಲ್ಲಾ ನ್ಯಾಯಾಲಯಗಳೂ ಸಂಸ್ಥಾನವೊಂದರ ರಾಜನಾಗಿ ಶಾಹು ಮಹಾರಾಜರ ಈ ಆಜ್ಞೆ ನ್ಯಾಯಸಮ್ಮತ ಎಂದು ಮಹಾರಾಜರ ಕ್ರಮಗಳನ್ನು ಎತ್ತಿಹಿಡಿದವು.

ಹಾಗೆಯೇ ಸಂಧಾನಗಳ ಮೂಲಕ ಶಾಹುಮಹಾರಾಜರನ್ನು ಕ್ಷತ್ರಿಯ ಎಂದು ಒಪ್ಪಿಕೊಳ್ಳಲಾಯಿತು. ಅಂತೆಯೇ ಅವರ ಅರಮನೆಯಲ್ಲಿ ವೇದಮಂತ್ರಗಳನ್ನು ಉಚ್ಛರಿಸುವ ಪರಿಪಾಠ ಕೂಡ ಆರಂಭವಾಯಿತು. ಈ ನಿಟ್ಟಿನಲಿ ಈ ಪ್ರಕರಣ ಇಂಡಿಯಾದ ಇತಿಹಾಸದಲ್ಲಿ ‘ವೇದೋಕ್ತ ಪ್ರಕರಣ’ ಎಂದು ಹೆಸರು ಪಡೆಯಿತಲ್ಲದೆ, ಬ್ರಾಹ್ಮಣ್ಯದ ಕಾನೂನಿನ ಪಾರುಪತ್ಯಕ್ಕೆ ಪ್ರಪ್ರಥಮವಾಗಿ ತಡೆಯೊಡ್ಡಿತ್ತು.

*****************

Leave a Reply

Back To Top