ಅಂಕಣ ಬರಹ

ಸತ್ಯ ಮತ್ತು ಸುಳ್ಳಿನ ನಡುವೆ

Deceive, Deception, Lies

         ಸುಳ್ಳು ಮತ್ತು ಸತ್ಯ ಒಂದೇ ನಾಣ್ಯದ ಎರಡು ಮುಖಗಳು . ಈ ಎರಡೂ ಮುಖಗಳನ್ನೂ ಒಮ್ಮಗೇ ಕಾಣಲು ಸಾಧ್ಯವಿಲ್ಲ.

       ಶಿಷ್ಯರು ಒಮ್ಮೆ ಗುರುಗಳ ಬಳಿ ಕೇಳಿದರು.

ಗುರುಗಳೇ ಸುಳ್ಳು ಮತ್ತು ಸತ್ಯ ಎಂದರೆ ಏನು? ನಮಗೆ ಅರ್ಥವಾಗುವ ಹಾಗೆ ಹೇಳಿ ಎಂದು

          ಗುರುಗಳು ಕ್ಷಣ ಯೋಚಿಸಿ ಹೇಳಿದರು .

ನೋಡಿ ಮಕ್ಕಳೆ ,  ಈಗ ಬೆಳಗಿನ ಸಮಯ.ಆಕಾಶದಲ್ಲಿ ಸೂರ್ಯ ಇದ್ದಾನೆ ಅನ್ನೋದು ಸತ್ಯ. ಆಕಾಶದಲ್ಲಿ ಈಗ ಚಂದ್ರ ಇಲ್ಲ ಅನ್ನೋದು ಸುಳ್ಳು.

      ಶಿಷ್ಯರಿಗೆ ಅರ್ಥವಾಗಲಿಲ್ಲ. ಗುರುಗಳೆ ಸೂರ್ಯನ ಬಗ್ಗೆ ಹೇಳಿದ್ದು ಅರ್ಥವಾಯಿತು.ಆದರೆ ಚಂದ್ರನ ಬಗ್ಗೆ ಹೇಳಿದ್ದು ತಿಳಿಯಲಿಲ್ಲ ಬಿಡಿಸಿ ಹೇಳಿ ಎಂದು ಕೇಳಿದರು.

    ಗುರುಗಳು ನಕ್ಕರು..ಸತ್ಯಕ್ಕೆ ಯಾವುದೇ ಪ್ರಮಾಣ ಬೇಕಿಲ್ಲ ಅದು ಸದಾ ಸೂರ್ಯನ ಹಾಗೆ ಎದ್ದು ಕಾಣುತ್ತದೆ. ಆದರೆ ಸುಳ್ಳು ಸತ್ಯದ ಮುಸುಕಿನಡಿಯಲ್ಲೇ ಇರುತ್ತದೆ. ಬೆಳಗಿನ ಆಕಾಶದಲ್ಲಿ ಚಂದ್ರ ಇಲ್ಲ ಎನ್ನುವುದು ಸುಳ್ಳು .ಏಕೆಂದರೆ ಚಂದ್ರ ಆಕಾಶದಲ್ಲೇ ಇದ್ದರೂ ಸೂರ್ಯನ ಬೆಳಕಿನ ಮುಂದೆ ನಮಗೆ ಕಾಣುವುದಿಲ್ಲ ಅಷ್ಟೇ .

       ಶಿಷ್ಯನೊಬ್ಬ ಮತ್ತೆ ಕೇಳಿದ

ಗುರುಗಳೇ ಹಾಗಾದರೆ ರಾತ್ರೆ ಆಕಾಶದಲ್ಲಿ ಚಂದ್ರ ಇರುತ್ತಾನೆ ಎನ್ನುವುದು ಸತ್ಯ ,ಸೂರ್ಯ ಇರುವುದಿಲ್ಲ ಎನ್ನುವುದು ಸುಳ್ಳು ಅಲ್ಲವೆ.

   ಗುರುಗಳು ತಲೆದೂಗಿದರು.

ಶಿಷ್ಯ ಮತ್ತೆ ತಲೆಕೆರೆದ ಸತ್ಯ ಯಾವಾಗಲೂ ಸೂರ್ಯನ ಹಾಗೆ ಅದನ್ನ ಬಚ್ಚಿಡಕ್ಕೆ ಆಗದು ಎಂದಿರಲ್ಲ ಗುರುಗಳೆ..ಹಾಗಾದರೆ ರಾತ್ರೆ  ಆಕಾಶದಲ್ಲಿಯೂ ಸೂರ್ಯ ಇರುತ್ತಾನೆಂಬ ಸತ್ಯ ನಮಗೆ ಕಾಣುವುದೇ ಇಲ್ಲವಲ್ಲ..??

      ಗುರುಗಳು ನಕ್ಕು ಹೇಳಿದರು .ಇದೇ ಸತ್ಯ ಮತ್ತು ಸುಳ್ಳಿನ ಕಣ್ಣಾಮುಚ್ಚಾಲೆ .ಕೆಲವೊಮ್ಮೆ ಸತ್ಯ ಗೋಚರವಾಗುತ್ತದೆ ಸುಳ್ಳು ಅವಿತುಕೊಳ್ಳುತ್ತದೆ.

ಮತ್ತೆ ಕೆಲವೊಮ್ಮೆ ಸುಳ್ಳು ಗೋಚರಿಸಿದರೆ ಸತ್ಯ ಅವಿತುಕೊಳ್ಳುತ್ತದೆ. ಇದೆಲ್ಲ ನಮ್ಮ ಗ್ರಹಿಕೆಯ ಮೇಲೆ ಅವಲಂಬಿತವಾಗಿರುತ್ತದೆ..

         ಈ ಕಥೆ ಕಟ್ಟು ಕಥೆಯಾದರೂ ಕ್ಷಣವಾದರೂ ನಮ್ಮನ್ನು ಸುಳ್ಳು ಮತ್ತು ಸತ್ಯಗಳ ಬಗ್ಗೆ ಯೋಚಿಸುವಂತಾಗುತ್ತದೆ.ಹಾಗಾದರೆ ಇವೆರಡೂ ಕಾಲ ನಿರ್ಬಂಧಕ್ಕೊಳಗಾದವೇ? ಸನ್ನಿವೇಶಗಳನವಲಂಬಿಸಿರುವವೇ? ಅಥವಾ ನಮ್ಮ ಗ್ರಹಿಕೆಯಾ ಎಂದು.    

         ಜಗತ್ತಿನಲ್ಲಿ ಸತ್ಯ ಇರುವವರೆಗೂ ಸುಳ್ಳೂ ಇದ್ದೇ ಇರುತ್ತದೆ.ಇದು ಸುಳ್ಳಲ್ಲ ,ಸತ್ಯ! ಆದರೆ ಕೆಲವೊಮ್ಮೆ ಸುಳ್ಳು ಮೇಲುಗೈ ಸಾಧಿಸಿದರೆ ಕೆಲವೊಮ್ಮೆ ಸತ್ಯ ಮೇಲುಗೈಯಾಗುತ್ತದೆ.

              ಯಾವುದೋ ಒತ್ತಡಕ್ಕೆ ಮಣಿದು ಸತ್ಯವನ್ನು ಮರೆಮಾಚಲು ಹೇಳುವ ಒಂದು ಸುಳ್ಳು ಮತ್ತೆ ಅದನ್ನೇ ಸತ್ಯ ಎಂದು ಸಾಧಿಸಿಕೊಳ್ಳಲು  ಏನೆಲ್ಲಾ ಹೊಸ ಹೊಸ ಸುಳ್ಳುಗಳನ್ನು ಹೇಳುವಂತೆ ಮಾಡಿಬಿಡುತ್ತದೆ. ಎಲ್ಲಿಯವರೆಗೆಂದರೆ ಸತ್ಯ ಹಗಲಿನಾಗಸದಲ್ಲಿ ಇದ್ದರೂ ಕಾಣದ ಚಂದ್ರನಂತೆ ಸುಳ್ಳಿನ ಪ್ರಖರತೆಯ ಮುಂದೆ  ಇದ್ದೂ ಇಲ್ಲವಾಗಿಬಿಡುತ್ತದೆ..

            ಎಲ್ಲವೂ ಸರಿ ಇದ್ದಲ್ಲಿ ಸುಳ್ಳಿನ ಅವಶ್ಯಕತೆಯೇ ಬಾರದು.ಎಲ್ಲಿ ಸ್ವಾರ್ಥ, ಮೋಸ, ನಯವಂಚಕತನ,ಅಹಂಗಳು ವಿಜೃಂಭಿಸುತ್ತವೋ ಅಲ್ಲಿ ಸುಳ್ಳು ಆಹ್ವಾನಕ್ಕೇ ಕಾಯದ ಅತಿಥಿಯಂತೆ ಧಾವಿಸಿ ಹೋಗಿ ನೆಲೆಸುತ್ತದೆ.ಮತ್ತು ಅಲ್ಲೇ ಖಾಯಂ ಆಗಿ ಉಳಿಯಲು ಪ್ರಯತ್ನಿಸುತ್ತದೆ.

      ಜಗತ್ತಿನ ಎಲ್ಲಾ ಜೀವಿಗಳಲ್ಲಿಯೂ ಸುಳ್ಳು ಹೇಳುವ ಜೀವಿ ಮಾನವನೊಬ್ಬನೇ ಎಂದುಕೊಂಡರೆ ತಪ್ಪಾದೀತು. ಸುಳ್ಳೆಂದರೆ ಧ್ವನಿಯೇ ಆಗಬೇಕೆಂದೇನೂ ಇಲ್ಲ..

        ಬಣ್ಣ ಬದಲಿಸುವ ಗೋಸುಂಬೆಯೊಂದು ಶತೃಗಳಿಂದ ತಪ್ಪಿಸಿಕೊಳ್ಳಲೋ ಅಥವಾ ಹೊಟ್ಟೆ ತುಂಬಿಸಿಕೊಳ್ಳಲೋ ಸುಳ್ಳಿನ್ನೇ ನಡೆದುಕೊಳ್ಳುತ್ತದೆ.ಕಡ್ಡಿ ಹುಳು, ಮಿಡತೆಗಳೂ ಹೀಗೆಯೇ.ಡ್ರಾಸೆರಾದಂತಹ  ಕೀಟ ಭಕ್ಷಕ ಸಸ್ಯಗಳೂ ಸುಳ್ಳಾಡುತ್ತವೆ.ಮತ್ತು  ,ಹವಳಗಳ ಜೊತೆಗೇ ಅಗಾಧ ಅಪಾಯಕಾರೀ ಜಂತುಗಳ ಒಡಲೊಳಡಗಿಸಿಕೊಂಡ ಅಸೀಮ ಸಾಗರ ಅದೆಷ್ಟು ಸುಳ್ಳು ಹೇಳುತ್ತದಲ್ಲ?!

          ಆದರೆ ಕೆಡುಕಿಗಾಗಿ , ಮೋಸಕ್ಕಾಗಿ ಸುಳ್ಳು ಹೇಳುವ ಜೀವಿ ಮಾನವನೇ ಹೌದು. ಒಂದು ಸುಳ್ಳು ನಡೆಯಿಂದ ಕಿರೀಟಗಳೇ ಉರುಳಿ ಬಿದ್ದಿರುವ ಕಥೆಯನ್ನು  ಪುರಾಣಗಳಲ್ಲಿ ಇತಿಹಾಸದಲ್ಲಿ ಓದಿದ್ದೇವೆ.

           ಒಬ್ಬ ಬ್ರೂಟಸ್ ,ಒಬ್ಬ ಮೀರ್ ಸಾದಿಕ್ , ಒಬ್ಬ ಅಂಬಿ, ಒಬ್ಬ ಶಕುನಿ …ಹೀಗೇ ಪಟ್ಟಿ ಮಾಡುತ್ತಾ ಹೋದರೆ ಇದಕ್ಕೆ ಕೊನೆಯೇ ಇಲ್ಲ.ಏನೇ ಆದರೂ ಈ ಸುಳ್ಳು ತಂದದ್ದೂ ತರುವುದೂ ವಿನಾಶವನ್ನೇ ..ಈ ವಿನಾಶ ಸುಳ್ಳನ್ನು ಸೃಷ್ಟಿಸಿದವನದ್ದಾದರೂ ಆಗಿರಬಹುದು ಅಥವಾ ಆ ಸುಳ್ಳನ್ನು ನಂಬಿದವನದ್ದಾದರೂ ಆಗಿರಬಹುದು.

           ವಿವೇಚನಾಶಾಲಿಯೊಬ್ಬಮು ದುಡುಕಿ ಹೇಳಿದ ಸುಳ್ಳು ಅವನ ಮನದಲ್ಲಿ ಮುಳ್ಳಿನಂತೆ ಚುಚ್ಚುತ್ತಲೇ ಇರುತ್ತದೆ.ಇದರ ತೀವ್ರತೆ ಎಷ್ಟೆಂದರೆ ಪರಿಣಾಮ ಏನಾದರೂ ಆಗಿರಲಿ ಸತ್ಯವನ್ನು ಹೇಳಿಯೇ ಬಿಡುತ್ತೇನೆ ಎನ್ನುವವರೆಗೆ. ಅದರ ತೀವ್ರತೆ ಅನುಭವಿಸಿದವರಿಗೇ ಗೊತ್ತು. ಹಾಗೆಯೇ ಹುಡುಗಾಟಕ್ಕಾಗಿ  ತೋಳ ಬಂತು ತೋಳ ಎಂದು ಹಲವಾರು ಬಾರಿ ಸುಳ್ಳೇ ಹೆದರಿಸಿದ ಹುಡುಗನ ಮಾತನ್ನು ಕೊನೆಗೆ ಸತ್ಯವಾದರೂ ಜನ ನಂಬದ ಕಥೆಯನ್ನೂ ನಾವು ಕೇಳುತ್ತಲೇ ಬೆಳೆದಿದ್ದೇವೆ.

        ಮಾನವ ಸಂಬಂಧಗಳು ಬಲು ಸೂಕ್ಷ್ಮ ಮತ್ತು ಅಷ್ಟೇ ಸಂಕೀರ್ಣವಾದವು.ಸುಳ್ಳಿನ ಸೀದ ವಾಸನೆ ಹತ್ತಿದ ಸಂಬಂಧಗಳು ಇನ್ನೆಂದೂ ಬಳಸಲಾಗದ ಒಡೆದ ಹಾಲಿನಂತಾಗುತ್ತವೆ.ಮಾತಿಗೆ ತಪ್ಪದೆ ನಡೆವವನೇ ಸತ್ಯ ಹರಿಶ್ಚಂದ್ರನಲ್ಲ…ಇದ್ದುದನ್ನು ಮರೆಮಾಚದೆ ಇದ್ದಂತೆ ಹೇಳುವವನೇ ಸತ್ಯ ಹರಿಶ್ಚಂಚಂದ್ರ..!!

                  ಸಂಬಂಧಗಳಲಿ , ಸಂಸಾರಗಳಲಿ ಸದಾ ಸತ್ಯದ ಬೆಳಕೇ ಚೆಲ್ಲಿರಬೇಕು.ಸುಳ್ಳಿನ ಕತ್ತಲೆ ಎಂದೂ ಕವಿಯಬಾರದು.ಸತ್ಯ ಎಂದಿಗೂ ಏನನ್ನೂ ಮರೆಮಾಚದ ದೀಪದ ಬೆಳಕಿನಂತೆ .ಸುಳ್ಳು ಸದಾ ಹೆದರಿಸುವ ಕತ್ತಲಿನಂತೆ. ನಾವು ಹೆದರಿದರಷ್ಟೆ ಕತ್ತಕೆ ನಮ್ಮನ್ನು ಹೆದರಿಸಲು ಸಾಧ್ಯ.ಸತ್ಯದ ಬೆಳಕು ಧೈರ್ಯವನ್ನು ಕೊಡುವುದರದಲೇ ಬೆಳಕನ್ನು ಕಂಡೊಡನೆಯೇ ಕತ್ತಲೆ ಅವಿತುಕೊಳ್ಳುತ್ತದೆ.

          ಬೆಳಕಿಗೆ ತನ್ನವರು ಪರರು ಎಂಬ ಭೇದಭಾವವಿಲ್ಲ..ಅದು ಎಲ್ಲವನ್ನೂ ಎಲ್ಲರನ್ನೂ ನಿಚ್ಚಳವಾಗಿ ತೋರಿಸುತ್ತದೆ. ಕತ್ತಲೆ ಹಾಗಲ್ಲ.ತನಗೆ ಬೇಕಾದುದು ಬೇಡವಾದುದು ಎಲ್ಲವನ್ನೂ ಮರೆಮಾಚುತ್ತದೆ.

          ಆಳುವ ಅರಸನಾಡುವ ಸುಳ್ಳು ಪ್ರಜೆಗಳ ನೆಮ್ನದಿಗೆ ಭಂಗ ತಂದರೆ ಮನೆಯೊಡೆಯನೋ ,ಮನೆಯೊಡತಿಯೋ ಆಡುವ ಸುಳ್ಳು ಮನೆಯನ್ನೇ ಸುಡಬಹುದು.

     ಸುಳ್ಳು ನಮ್ಮಲ್ಲಿಲ್ಲವಯ್ಯ ಸುಳ್ಳೇ ನಮ್ಮನೆ ದೇವರು….ಎಂಬ ದಾಸವಾಣಿ ವ್ಯಂಗ್ಯಭರಿತವಾಗಿದ್ದರೂ ಸುಳ್ಳನ್ನೇ ಜೀವನದ ಉಸಿರಾಗಿಸಿಕೊಂಡು ಉಸಿರಾಡುತ್ತಿರುವ ಜನ ನಮ್ಮ ನಡುವಿದ್ದಾರೆ.ಇಂತಹವರ ಬಗ್ಗೆ ಜಾಗ್ರತೆಯಿರಲಿ.ಹಗಲು ಆಕಾಶದಲ್ಲಿ ಚಂದ್ರನಿಲ್ಲ ಎನುವುದಕ್ಕೂ ಹಗಲು ಆಕಾಶದಲ್ಲಿ ಚಂದ್ರ ಕಾಣುವುದಿಲ್ಲ ಎನ್ನುವುದಕ್ಕೂ ಇರುವ ಅಂತರವನ್ನು ಗಮನಿಸುವಂತಹ ಸೂಕ್ಷ್ಮತೆಯನ್ನು ಬೆಳೆಸಿಕೊಂಡಾಗ ಬದುಕಿನಲ್ಲಾಗುವ ಬಹಳಷ್ಟು ಕೆಡುಕುಗಳನ್ನ ತಡೆಯಬಹುದು.

नास्ति सत्यसमो धर्मो न सत्याद्विद्यते परम् ।

न हि तीव्रतरं किञ्चिदनृतादिह विद्यते ॥

ಸತ್ಯದಂತಹ ಇನ್ನೊಂದು ಧರ್ಮವಿಲ್ಲ.ಸತ್ಯಕ್ಕಿಂತಲು ಮಿಗಿಲಾದುದು ಯಾವುದೂ ಇಲ್ಲ.ಅಸತ್ಯಕ್ಕಿಂತಲೂ ಹಾನಿಕಾರಕವಾದುದು  ಯಾವುದೂ ಇಲ್ಲ.

ಬಾಳಿದರೆ ಬೆಳಕಿನಂತೆ ಬಾಳೋಣ

            ಕತ್ತಲೆಯ ಹೊಡೆದೋಡಿಸೋಣ .

**************************

                  ದೇವಯಾನಿ

ಕಾಲೇಜು ದಿನಗಳಿಂದ ದೇವಯಾನಿ ಹೆಸರಿನಲ್ಲಿ ಕಥೆ ,ಕವನ ,  ಅನುವಾದಿತ ಕಥೆ , ಪ್ರಬಂಧ ಬರೆಯುತ್ತಿದ್ದು ತುಷಾರ, ಮಯೂರ ,ಕಸ್ತೂರಿ , ಪ್ರಜಾವಾಣಿ, ವಿಕ್ರಮ , ಉತ್ಥಾನ, ಉದಯವಾಣಿ, ತರಂಗ ,ವಿಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವೃತ್ತಿಯಿಂದ ಗಣಿತ ವಿಜ್ಞಾನ ಪ್ರೌಢಶಾಲಾ ಶಿಕ್ಷಕಿ.ಇಪ್ಪತ್ತನಾಲ್ಕು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಹಲವಾರು ಸಂಪನ್ಮೂಲ ಸಾಹಿತ್ಯವನ್ನು ರಚಿಸಿದ್ದು ಹಲವಾರು ರಾಜ್ಯಮಟ್ಟದ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಶಾಲಾ ಮಕ್ಕಳಿಗಾಗಿ ” ಧರೆಯನುಳಿಸುವ ಬನ್ನಿರಿ, ಮೂರು ವೈಜ್ಞಾನಿಕ ನಾಟಕಗಳು” , “ತುಟಿ ಬೇಲಿ ದಾಟಿದ ನಗು” ಕವನ ಸಂಕಲನ ,  “ತುಂಡು ಭೂಮಿ ತುಣುಕು ಆಕಾಶ”  ಕಥಾ ಸಂಕಲನ ಪ್ರಕಟಿಸಿದ್ದು ಅನುವಾದಿತ ಕಥಾ ಸಂಕಲನ ಅಚ್ಚಿನಲ್ಲಿರುತ್ತದೆ  

3 thoughts on “

  1. ಸುಳ್ಳು ಎಂದರೆ ನಾವು ಅಂದುಕೊಳ್ಳುವ ಸುಳ್ಳಲ್ಲ, ಅದು ನಿಜವಾಗಿ ಸುಳಿವು ನಿಂದ ಬಳಕೆಯಲ್ಲಿ ಬಂದದ್ದು ಎಂದು ಹೆಸರಾಂತ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳುತ್ತಾರೆ. ಸತ್ಯ- ಮಿಥ್ಯ ಎಂಬ ಪದಗಳು ಕೂಡ ನಾವು ಬಳಸುವಂತೆ ಅಥವಾ ಅಂದುಕೊಂಡ ಅರ್ಥ ಕೊಡುವಂತಹ ಪದಗಳಲ್ಲ….
    ಈ ಹಿನ್ನೆಲೆಯಲ್ಲಿ ಈ ಬದುಕಿನಲ್ಲಿ ನಾವು ಅಂದುಕೊಳ್ಳುವ ಸಟೆ – ದಿಟಗಳು ಕಾಲ, ಪರಿಸರ, ಸಂದರ್ಭಗಳಿಗನುಗುಣವಾಗಿ ವಿಭಿನ್ನ ಸ್ಥಿತ್ಯಂತರಗಳಿಗೆ ಕಾರಣವಾಗುತ್ತವೆ…
    ಇನ್ನು ನೀವು ಹೇಳುವ ಕೆಡುಕಿನ ಉದ್ದೇಶದ ಮಾತುಗಳು ಹಾನಿ ತರುತ್ತವೆ. ನಿತ್ಯ ಬದುಕಿನ ಸಂದರ್ಭದಲ್ಲಿ ಆಗದ್ದನ್ನು ಆಗಿದೆ ಎಂದು ಹೇಳುವುದು ಮತ್ತು ಇಂತಹ ಮಾತುಗಳು ಕೆಲವರ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ…
    ಈ ವಿಷಯ ಮುಗಿಯಲಾರದಷ್ಟು ಮಾತುಗಳನ್ನು ಹೊಂದಿರುವಂಥದು….

  2. ನಿಜ ಸರ್, ಈ ವಿಷಯ ಮುಗಿಯುವುದಿಲ್ಲ ಎಂದಿಗೂ….ಆದರೂ ಸತ್ಯ ಸುಳ್ಳುಗಳು ಇದ್ದೇ ಇವೆಯಲ್ಲ…ಸತ್ಯವನ್ನು ಇಲ್ಲವಾಗಿಸುವುದೇ ಅಲ್ಲಗಳೆವುದೇ ಸುಳ್ಳಾಗಬಹುದಲ್ಲವೆ ? ಇದು ನನ್ನ ತರ್ಕ ..ಏನೆನ್ನುವಿರಿ ಸರ್?

  3. ಒಳ್ಳೆಯ ಬರಹ….ಸದಾ ಎಚ್ಚರವಾಗಿರುವಂತೆ ಎಚ್ಚರಿಸುವ ಬರಹ.ಕಾವ್ಯಾತ್ಮಕವಾಗಿಯೂ ಇದೆ.

Leave a Reply

Back To Top