ಭಾಮಿನಿ ಷಟ್ಪದಿ
ಭಾಮಿನಿ ಷಟ್ಪದಿ
ಅಭಿಜ್ಞಾ ಪಿ ಎಮ್ ಗೌಡ
ಹಸಿದ ಜೋಳಿಗೆ ಹೊತ್ತು ಸುತ್ತಿವೆ
ಬಸಿದ ಬೆವರಿನ ಹನಿಯ ನೋವದು
ಕುಸಿದು ಬೀಳುತ ತುತ್ತು ಕೂಳಿಗು
ನಿತ್ಯ ತತ್ವಾರ
ಉಸಿರು ಬಡಿತದ ದುಃಖದೊಂದಿಗೆ
ಕಸಿದು ಕೊಳ್ಳುವ ಲೋಕಲೋಗರ
ಬಿಸುಡು ನಡೆದರು ಕಣ್ಣು ಕಾಣದ ಪಾಪಿ ಗಾವಿಲರು||
ದಂಧೆಯಾಗಿದೆ ದುಂದುಗಾರಿಕೆ
ಬಂಧು ಬಳಗವ ತೊರೆದು ಬೀಗುತ
ಬಿಂದುವಿಡುತಿರೆ ಕಣ್ಣಕೊಳವದು ಹಸಿದ ತನುಹೊತ್ತು|
ಇಂದು ತುತ್ತಿನ ಚೀಲ ಬತ್ತುತ
ನಂದಿಹೋಗುವ ಮುಗ್ಧ ಮನಗಳು
ಕಂದು ಬೇಯುತ ನೊಂದ ದೇಹದಿ ಕನಸು ಸತ್ತಿರಲು||
ದೇವ ಬರೆದನೊ ಹಣೆಯ ಬರಹವ
ಜೀವ ನಿತ್ರಾಣದಲಿ ಸೊರಗಿಸಿ
ಯಾವ ತಪ್ಪಿಗೆ ಶಿಕ್ಷೆ ವಿಧಿಸಿದ ದೈವ
ಬಲ್ಲನವ
ಆವ ರಾಗದ ನೋವ ಮಿಡಿತವು
ತಾವು ಕಾಣದೆ ನಡುಗಿನಿಂತಿವೆ
ಬೇವು ಕಹಿಯದು ಬೆಲ್ಲವಿಲ್ಲದ ಬಾಳ ರೋದನ||
ಧನಿಕ ಲೋಗರನಿಗರಿವಿಲ್ಲವೆ
ಜನಜನಿತವಾಗಿಹುದು ಬಡತನ
ಧನಕನಕದಾ ಮದವು ಬಿಸುಡುತ ಕೂಳು ಕಸದೊಳಗೆ
ಮನವು ನೊಂದಿವೆ ದಿಕ್ಕು ಕಾಣದೆ
ಗನಹ ನೆನೆಯುತ ಕುಗ್ಗಿ ಹೋಗಿವೆ
ಸನಿಹ ಸುತ್ತುತ ಹಸಿವ ದಾಹವು ಬೆನ್ನ ಹತ್ತಿರಲು||
ಏನು ಸಿಕ್ಕದೆ ಕರುಳು ಬತ್ತಿದೆ
ಬಾನ ಚಾಚುತ ನೋವ ಗೆರೆಗಳು
ಸಾನುರಾಗದ ಮೇಳವಿಲ್ಲದೆ ದುಃಖ
ದುಮ್ಮಾನ
ಸಾನುಭೂತಿಯ ಬೇಡಿ ನಿಂತಿವೆ
ಯಾನ ಮಾಡಲು ದಿಕ್ಕು ತೋಚದೆ
ದಾನ ನೀಡದ ಧೀನ ಬಂಧುವ ಶಪಿಸಿ ಮನದೊಳಗೆ||
ಒಡಲ ಬೇಗುದಿ ಹೊತ್ತಿಯುರಿದಿದೆ
ಮಡಿಲ ಹಂಬಲವಿರದೆ ಮನದಲಿ
ಬಡಿದು ದೂಡುತ ಭಿಕ್ಷೆ ನೀಡದೆ
ದೂರತಳ್ಳುತಲಿ
ಅಡಿಗಡಿಗು ದುಃಖವದು ಹೆಚ್ಚಿದೆ
ಮಿಡಿದು ಮನವದು ದಣಿದು ಹೋಗುತ
ಜಡಿದು ಜರಿಯುವ ಲೋಗ ಮಧ್ಯದಿ
ಬದುಕು ಸವೆಯುತಿದೆ||
ಅಶನ ಚೆಲ್ಲುತ ದರ್ಪ ಮೆರೆವರು
ವಸನವಿಲ್ಲದೆ ಬೀದಿಯಲೆಯುತ
ಬಸವಳಿದಿಹರು ನೀರು ಭೋಜನವಿರದೆ ಹಗಲಿರುಳು
ಖುಷಿಯು ನುಂಗಿದೆ ನೋವು ತುಂಬಿದೆ
ಪಸಿವು ಹೆಚ್ಚುತ ಸಾವು ಬಯಸಿವೆ
ಪಸುಗೆಯಿಲ್ಲದ ದುರುಳ ಮನುಜನ
ನಡೆಯು ಹೇಯಕರ||
************************
ಸೊಗಸಾಗಿ ಬರೆದಿದ್ದೀರಿ