ಲೇಖನ
ಬಸವಣ್ಣ ಮತ್ತು ಚಲನಶೀಲತೆ
ವಚನ ಕಾಲದ ಜೊತೆ ಪಿಸುಮಾತು
ನಾಗರಾಜ್ ಹರಪನಹಳ್ಳಿ
ಕರ್ನಾಟಕ, ಕನ್ನಡಿಗರ ಮಟ್ಟಿಗೆ ೧೨ನೇ ಶತಮಾನ ಮಹತ್ವದ ಕಾಲಘಟ್ಟ. ಸಾಹಿತ್ಯ ಮತ್ತು ಸಾಮಾಜಿಕ ಬದಲಾವಣೆ ಕಂಡ ಕಾಲವದು. ಬಸವಣ್ಣ ಮತ್ತು ಆತನ ಸಮಕಾಲೀನ ವಚನಕಾರರು ಅನುಭವ ಮಂಟಪದ ಮೂಲಕ ಸಮಾಜದಲ್ಲಿ, ಜನರ ಬದುಕಲ್ಲಿ, ಅಧಿಕಾರ ಕೇಂದ್ರದಲ್ಲಿ ಚಲನಶೀಲತೆ ತಂದರು. ಜಡತ್ವಕ್ಕೆ ಚಾಟೀ ಬೀಸಿದರು. ಸ್ಥಗಿತ ವ್ಯವಸ್ಥೆಗೆ ಪರ್ಯಾಯ ಸೂಚಿಸಿದರು.
ಬಸವಣ್ಣನ ಹೆಸರೇ ಚಲನಶೀಲ. ಬುದ್ಧನ ನಂತರ ಭಾರತದಲ್ಲಿ ಆಂದೋಲ ಮತ್ತು ಚಳುವಳಿಯ ಮಾದರಿ ನಮಗೆ ಕಾಣಸಿಗುವುದು ಬಸವಣ್ಣನ ಕಾಲದಲ್ಲಿ. ಸ್ಥಗಿತ ವ್ಯವಸ್ಥೆಯನ್ನು ಪ್ರಶ್ನಿಸುತ್ತಲೇ ಅಕ್ಷರ ,ಅನ್ನ ಹಾಗೂ ಕ್ರಿಯೆಯ ಮೂಲಕ ಸಮಾಜದಲ್ಲಿ ಸ್ಥಾಪಿತಹಿತಾಸಕ್ತಿಗಳಿಗೆ ಸದ್ದಿಲ್ಲದೆ ಪೆಟ್ಟುಕೊಟ್ಟವರು ಬಸವಣ್ಣ ಹಾಗೂ ವಚನಕಾರರು. ಬದಲಾವಣೆ ಬಯಸಿದ ವ್ಯವಸ್ಥೆಯ ಮಗ್ಗಲಿಗೆ ಪರ್ಯಾಯವನ್ನು ಸೂಚಿಸಿ ಅದನ್ನು ಕಾರ್ಯಗತ ಮಾಡ ಹೊರಟದ್ದು ಸಮಾಜದಲ್ಲಿ ಹೊಸ ಪರಿವರ್ತನೆಗೆ ಕಾರಣವಾಯಿತು.
ಬಸವಣ್ಣ ಚಲನಶೀಲತೆಗೆ ಬಳಸಿದ ನಾಲ್ಕು ಅಸ್ತ್ರಗಳು : ಕಾಯಕ, ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ, ದಾಸೋಹ.
ಸಮಾಜದಲ್ಲಿ ಪ್ರತಿ ದುಡಿಮೆಗೂ ಒಂದು ಗೌರವ ತಂದು ಕೊಡುವ ಮೂಲಕ ಕಾಯಕ ಪ್ರಜ್ಞೆಗೆ ಬಸವಣ್ಣ ಹೆಚ್ಚು ಒತ್ತು ನೀಡಿದರು. ಹಾಗೆ ಶ್ರಮ ಜೀವಿಗಳನ್ನು ಸಮಾನವಾಗಿ ಕಂಡರು. ಬಿಜ್ಜಳನ ಅಸ್ಥಾನದ ಪ್ರಧಾನ ಮಂತ್ರಿಯಾಗಿದ್ದ ಬಸವಣ್ಣನವರು ಅತ್ಯಂತ ವಿನಯಿಯೂ ಆಗಿದ್ದರು. ಇದು ಸಹ ಒಂದು ಚಲನೆ. ಮಂತ್ರಿಯಾದವರು ವಿನಯಿಯಾಗಿರುವುದು ಭಾರತದಲ್ಲಿ ವಿರಳ ಸಂಖ್ಯೆಯಲ್ಲಿ ಕಾಣ ಸಿಗುತ್ತಾರೆ. ಹಾಗೆ ಅಧಿಕಾರ ಕೇಂದ್ರವನ್ನು ತಾವು ಕಾಪಾಡಿಕೊಂಡು ಮೌಲ್ಯಗಳಿಗಾಗಿ ತ್ಯಜಿಸಿದವರು ಸಹ ವಿರಳಾತಿವಿರಳ. ಈ ನಿಟ್ಟಿನಲ್ಲಿ ಬಸವಣ್ಣ ನಮಗೆ ಸಿಗುವ ಮೊದಲ ಉದಾಹರಣೆ. ಅವರು ಅಧಿಕಾರ ಕೇಂದ್ರದಲ್ಲಿದ್ದು ವಿನಯಿಯಾಗಿದ್ದರು. “ಮಾದಾರ ಚೆನ್ನಯ್ಯನ ಮನೆಯ ಮಗ ನಾನು” ಎನ್ನುವ ಬಸವಣ್ಣ ಇನ್ನೊಂದೆಡೆ “
ಕಕ್ಕಯ್ಯನ ಮನೆಯ ದಾಸಿಯ ಮಗನು
ಚೆನ್ನಯ್ಯನ ಮನೆಯ ದಾಸಿಯ ಮಗಳು
ಹೊಲದಲಿ ಬೆರಣಿಗೆ ಹೋಗಿ ಸಂಗವ ಮಾಡಿದರು
ಅವರಿಬ್ಬರಿಗೆ ಹುಟ್ಟಿದ ಮನೆಯ ಮಗ ನಾನು
ಕೂಡಲ ಸಂಗಮದೇವನ ಸಾಕ್ಷಿಯಾಗಿ…” ಎಂಬಲ್ಲಿ
ತನ್ನ ಜನ್ಮವನ್ನು ಸಮಾಜದ ಕೆಳಸ್ಥರದೊಂದಿಗೆ ಸಮೀಕರಿಸಿಕೊಂಡು ವಿನಯಿಯಾಗುತ್ತಾರೆ.
ಹಾಗೆ ಜಾತಿ ವ್ಯವಸ್ಥೆಗೆ ಪೆಟ್ಟು ನೀಡಲು ಬಸವಣ್ಣ ಈ ವಚನ ಬರೆಯುತ್ತಾ , ಪ್ರತಿ ಹೆಜ್ಜೆಯಲ್ಲೂ ಪ್ರಯೋಗಶೀಲತೆಗೆ ತನ್ನನ್ನೇ ಒಡ್ಡಿಕೊಂಡರು ಎನ್ನಬಹುದು.
ಧರ್ಮಕ್ಕೆ ಹೊಸ ವ್ಯಾಖ್ಯಾನ:
” ದಯೆಯಿಲ್ಲದ ಧರ್ಮಯಾವುದಯ್ಯಾ, ದಯೆ ಇರಬೇಕು ಸಕಲ ಜೀವರಾಶಿಯಲ್ಲಿ” ಎನ್ನುತ್ತಾ ಧರ್ಮಕ್ಕೆ ಹೊಸ ವ್ಯಾಖ್ಯಾನ ನೀಡಿದ ಬಸವಣ್ಣ
ಎನ್ನ ಕಾಲೇ ಕಂಬ,
ದೇಹವೇ ದೇಗುಲ,
ಶಿರವೇ ಹೊನ್ನ ಕಳಸವಯ್ಯ”
ಎನ್ನುವ ಮೂಲಕ ಬಹುದೊಡ್ಡ ಕ್ರಾಂತಿಗೆ ಮುನ್ನುಡಿ ಬರೆಯುತ್ತಾರೆ. ದೇವರನ್ನು ಮನುಷ್ಯರ ಹೃದಯದಲ್ಲಿ , ಅಂಗೈಯೊಳಗಿನ ಲಿಂಗವಾಗಿಸಿ, ಕರಸ್ಥಲಕ್ಕೆ ದೇವರನ್ನು ಕರೆತರುವುದು ಆ ಕಾಲದಲ್ಲಿ ತಂದ ಬಹುದೊಡ್ಡ ಚಲನೆ.
ಕಾಯಕವೇ ಕೈಲಾಸ ಎನ್ನುವ ಮೂಲಕ ಸ್ವರ್ಗ ಎಂಬುದು ದುಡಿಮೆಯಲ್ಲಿದೆ ಎಂಬ ಸರಳ ತತ್ವವನ್ನು ಏಕಕಾಲಕ್ಕೆ ದೊರೆಗೂ, ಜನ ಸಾಮಾನ್ಯನಿಗೂ ತಲುಪಿಸಿದ್ದು ಬಸವಣ್ಣನ ಹೆಗ್ಗಳಿಕೆ.
ಕಾಯಕದಲ್ಲಿ ನಿರತನಾದೊಡೆಗೆ ಲಿಂಗವನ್ನು, ಜಂಗಮನನ್ನು ಮರೆಯಬೇಕು. ಅಂಥ ಶ್ರದ್ಧೆಯನ್ನು ಬಸವಣ್ಣ ಸಮಾಜದ ಮುಂದಿಡುತ್ತಾರೆ.
“ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ”ಎನ್ನುವ ಮೂಲಕ ಜನರಿಗೆ ಸ್ಥಾವರ ವ್ಯವಸ್ಥೆಯ ಬಗೆಗಿನ ನಂಬಿಕೆಯನ್ನು ಕೊಂಚ ತಗ್ಗಿಸುತ್ತಾರೆ.
“ಆನು ಒಲಿದಂತೆ ಹಾಡುವೆನು ನಿನಗೆ ಕೇಡಿಲ್ಲವಾಗಿ” ಎನ್ನುವ ವಚನದ ಮೂಲಕ ಅಗಮ್ಯ ,ಅಗೋಚರನಾದ ಕೂಡಲ ಸಂಗಮನೊಂದಿಗೆ ಅನುಸಂಧಾನ ಮಾಡುತ್ತಾರೆ. ನಿನೊಮ್ಮೆ ಒಡಲುಗೊಂಡು ನೋಡಾ ? ಎಂದು ದೇವರನ್ನು ಪ್ರಶ್ನಿಸುವ ವಚನಕಾರರ ಮನಸ್ಥಿತಿ ೧೨ನೇ ಶತಮಾನದಲ್ಲಿ ಹುಟ್ಟಿದ್ದು ಕ್ರಾಂತಿಯೇ ಸರಿ.
ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದ ಬಸವಣ್ಣ ಒಂದು ಹಂತದಲ್ಲಿ ಹೀಗೆ ಹೇಳುತ್ತಾರೆ ;
ಅನ್ನದೊಳಗೊಂದಗುಳ
ಸೀರೆಯೊಳಗೊಂದೆಳೆಯ
ಬಯಸಿದೆನಾದೊಡೆ ನಿಮ್ಮಾಣೆ,ನಿಮ್ಮ ಪ್ರಮಥರಾಣೆ…ಎನ್ನುವ ಆತ್ಮಸಾಕ್ಷಿಯ ಪ್ರಜ್ಞೆಯೊಂದಿಗೆ ವ್ಯವಸ್ಥೆಯನ್ನು ಪಲ್ಲಟಗೊಳಿಸಲು ಮಾಡಿದ ಪ್ರಯತ್ನ ದೊಡ್ಡದು.
” ಹಾವ ತಿಂದವರ ನುಡಿಸಬಹುದು
ಗರ ಬಡಿದವರ ನುಡಿಸಬಹುದು
ಸಿರಿಗರ ಹೊಡೆದವರ ನುಡಿಸಲಾಗದು
ಬಡತನ ಎಂಬ ಮಂತ್ರವಾದಿ ಸುಳಿಯಲು ಒಡನೆ ನುಡಿವರು “
ಎನ್ನುತ್ತಾನೆ ಬಸವಣ್ಣ .ಸಮಾಜದಲ್ಲಿ ವರ್ಗ ವ್ಯವಸ್ಥೆ ಮೇಲ್ಪದರು ಹೇಗೆ ಕಲ್ಲಾಗಿರುತ್ತದೆ,ಹೃದಯಹೀನವಾಗಿರುತ್ತದೆ ಎಂಬುದನ್ನು ಬಸವಣ್ಣ ಹೇಳಿದ ಬಗೆ ಇದು. ಬಡತನವನ್ನೇ ಸಿರಿಯ ಬಗ್ಗಿಸಲು ಇರುವ ಮಂತ್ರವಾದಿ ಎನ್ನುತ್ತಾನೆ. ಮಂತ್ರ ತಂತ್ರಗಳ, ವೇದ ಶಾಸ್ತ್ರ ಆಗಮಗಳ ಕಡು ವಿರೋಧಿಯಾಗಿದ್ದ ಬಸವಣ್ಣ , ವಚನದ ನುಡಿಗಟ್ಟು ಹಾಗೂ ಭಾಷಾ ಬಳಕೆಯಲ್ಲಿನ ಲಯವೂ ಸಹ ಸೊಗಸು. ಬಾಲ್ಯದಲ್ಲಿ ತನಗೆ ಕೊಡಲು ಮುಂದಾಗಿದ್ದ ಜನಿವಾರ ಸಂಸ್ಕಾರ ಅಕ್ಕನಿಗೆ ಏಕಿಲ್ಲ ಎಂದು ಪ್ರಶ್ನಿಸಿ , ಗಂಡು ಹೆಣ್ಣು ಸಮಾನರು ಎಂಬ ಆಲೋಚನೆಯನ್ನು ಬಾಲ್ಯದಲ್ಲಿಯೇ ತನ್ನ ಎದೆಯಲ್ಲಿ ಬಿತ್ತಿಕೊಂಡಿದ್ದ ಬಸವಣ್ಣ . ಬಾಗೇವಾಡಿಯಲ್ಲಿ ಬಿತ್ತಿಕೊಂಡ ವೈಚಾರಿಕತೆ ಬೀಜ ಮರವಾಗಿ ಬೆಳೆದು ಫಲ ಕೊಟ್ಟಿದ್ದು ಬೀದರಿನ ಕಲ್ಯಾಣದಲ್ಲಿ. ಇದು ಬಹು ಮಹತ್ವದ ಚಲನಶೀಲತೆಗೆ ಕಾರಣವಾಯಿತು.
ಇಡೀ ವ್ಯವಸ್ಥೆ ಭ್ರಷ್ಟವಾಗಿ, ಅಧಿಕಾರಶಾಹಿ ಮತ್ತು ರಾಜ ಕೆಟ್ಟುಹೋದಾಗ ಹತಾಶನಾಗುವ ಬಸವಣ್ಣ ಬರೆದ ವಚನ ಹೀಗಿದೆ ;
” ಒಲೆ ಹತ್ತಿ ಉರಿದೊಡೆ ನಿಲಬಹುದಲ್ಲದೆ,
ಧರೆ ಹತ್ತಿ ಉರಿದೊಡೆ ನಿಲಲುಬಾರದು
ಏರಿ ನೀರುಂಬೆಡೆ, ಬೇಲೆಕೆಯ್ಯ ಮೇವಡೆ
ತಾಯಿ ಮೊಲೆಹಾಲು ನಂಜಾಗಿ ಕೊಲುವೆಡೆ
ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ“
ಹೀಗೆ ಪ್ರತಿಯೊಂದು ಕ್ರಿಯೆಯನ್ನು ಕೂಡಲಸಂಗಮನ ಸಾಕ್ಷಿಯಾಗಿರಿಸಿಕೊಂಡೇ ಚಲನಶೀಲತೆಗೆ ದುಡಿದ ಬಸವಣ್ಣ ಹಾಗೂ ವಚನಕಾರರು ಕರ್ನಾಟಕಕ್ಕೆ ಸದಾ ನೆನಪಿಡುವ ವೈಚಾರಿಕತೆಯನ್ನು ನೀಡಿದರು.
***************
ಲೇಖನ ತುಂಬ ಚೆನ್ನಾಗಿದೆ.. ಇಲ್ಲಿನ ವಚನಗಳ ವಿಸ್ತಾರವಾದ ವಿಶ್ಲೇಷಣೆ ಇನ್ನೂ ಇದ್ದರೆ ಚೆನ್ನಾಗಿತ್ತು.