ಕವಿತೆ
ಬುದ್ಧನಾಗಲೂ ಕಷ್ಟವೀಗ
ಹೇಮಚಂದ್ರ ದಾಳಗೌಡನಹಳ್ಳಿ
ಈಗಲೀಗ ಎದ್ದು ಹೊರಡಬೇಕೆನಿಸುತಿದೆ
ನಿನ್ನಂತೆ ತೊರೆದು ಎಲ್ಲವ
ಕಂಡೊಂದು ಸಾವಿಗೇ; ಶರಣಾದೆ ಮುಕ್ತಿಗೆ
ಭಾಜನ ನೀನೀಗಲೂ ಜನಭಕ್ತಿಗೆ
ತಮಗೇ ಸಾವು ಬಂದಡರಿ ನಿಂತರೂ
ನಿಂತ ಕಟ್ಟಡ ಕಾಮಗಾರಿಗೆ ಬಳಲಿ
ಅಳಲುಗೊಂಡಳುತ ನರಳುವರ ಕಂಡು(ಈಗಲೀಗ)
ತರಿದು ಹಸುರ; ತೋಡಿ ನೆಲಬಸುರ
ಮೀರಿದಂಕೆಗೆ ಮುತ್ತಿ ಮಾರಿ ಶಂಕೆ
ಸುಳಿವ ಉಳಿದ ಗಾಳಿಯನೂ ಮುಕ್ತ ಮೂಸದಂತೆ
ಮೂಗು ಬಾಯಿ ಬಂಧಿಸಿ; ಮನೆಯೊಳಗೇ ಸಂಧಿಸಿ
ಕೊರೆದ ಕೊಳವೆ ಬಾವಿ ಕೆಲಸವರ್ಧಕೆ ನಿಂತುದಕೆ
ಅವಲತ್ತುಕೊಂಡಳಲುತಿರುವ ತಿರುಕರ ಕಂಡು(ಈಗಲೀಗ)
ಬಿರುಕು ಗೋಡೆ; ತೂತು ಮಾಡುಳ್ಳ
ಮನೆಯೊಳಗೆ ಬರಲು ಮಳೆನೀರು
ಮಳೆಗೆ ಶಾಪ ಹಾಕುವ ಅಂಧರು
ಹುತ್ತಗಳ ಕೆಡವಿ ಮನೆಯ ಮಾಡಿ
ತಮ್ಮನೆಯ ಸುತ್ತ ಹಾವುಗಳ ಹುತ್ತವೆಂದು
ಹಾವಿಗೆ ದೂರುವ ಮೂಳರ ಕಂಡು(ಈಗಲೀಗ)
ಹೊರಟೂ ತೊರೆದು ಎಲ್ಲವ ಬುದ್ಧನಾಗಲು
ಗುಮಾನಿ ಬೆನ್ಹತ್ತಿ ಅಪರಾಧಿ ಮಾಡುತದೆ
ನೆಲೆನಿಂತರೆ ಎಲ್ಲಾದರೊಂದು ಕಡೆ
ಯಾರದೋ ಹೆಸರಿಗೆ ನೋಂದಣಿಯಾಗಿ ಪಾಳಬಿದ್ದ ನೆಲ
ಮೂಲವ ಕೆಣಕಿ ಅಣಕಿಸುತದೆ
ಇದ್ದರೂ ಮರೆತು ಹೊಂಟರೂ ಅರಿತು
ಕಷ್ಟವೀಗೀಗ ಸುಲಭವಲ್ಲ
ಕಾಣುವ ಕಣ್ಣುಗಳಿಗೆ ಸಾವಿರದ ಭಾವ
ತೆಗೆವುತವೆ ಜೀವಂತ ಜೀವ…
**************