ಕವಿತೆ
ಯಶೋಧರೆಯಉವಾಚ
ಅಕ್ಷಯಆರ್. ಶೆಟ್ಟಿ
ರೋಗವೆಂಬ ಅಂಟು
ಮುದಿತನದ ಮೇಲ್ಮೆ
ಸಾವೆಂಬ ನಾಶ
ಕಾಡಿತೇ ಬುದ್ಧ,
ಮಗುವಿನ ಸೆಳೆತದಾಚೆ……?
ಅನ್ನುವ ಸವೆದ ಪ್ರಶ್ನೆಯನೇ
ಮತ್ತೆ ಕೇಳುವ ಇಚ್ಚೆಯಿಲ್ಲ, ಗೌತಮ!
ನನ್ನೊಳಗಿನ ತುಮುಲಗಳ,
ಮತ್ತೆ ನಾ ಓರಣವಾಗಿಟ್ಟ ಸ್ತಬ್ಧಚಿತ್ರಗಳ
ಮೆಲುಕಷ್ಟೇ ಈ ಹೂರಣ…….
ಎಂಟು ದಿನದ ಕೂಸನ್ನೂ
ಎಂಟು ವರ್ಷ ಕಾಯಿಸಿದೆ,
ಅಪ್ಪನೆಂಬ ಚಿತ್ರವ ಮನದ ಭಿತ್ತಿಯೊಳಗೆ
ಪಡಿಮೂಡಿಸಲು…..
ಆ ರಾತ್ರಿ, ಮತ್ತೆಷ್ಟೋ ರಾತ್ರಿ
ಕಾದೆ, ಕಾದೆ
ಕುದಿದ ನನ್ನೊಳಗನ್ನೇ ಹಳಿದೆ,
ನೀ ಬದ್ಧನಾಗಲಿಲ್ಲ ಸಂಸಾರಕೆ,
ಅನ್ನುವ ಆರೋಪ ಮಾತ್ರ ನನ್ನೊಳಗಿರಲೇ ಇಲ್ಲ,
ನಿನ್ನಲ್ಲೇ ಸಂಗಾತಿಯನು ಎಳವೆಯಿಂದಲೇ ಕಂಡೆನಗೆ…!
ಗೌತಮ ನೀ ಬುದ್ಧನಾಗಿ ದೊರೆತಂದು
ಕೊನೆಗೊಳಿಸಿ, ನನ್ನ ಮನದ ಹುಡುಕಾಟ
ಮಗನ ಕಳುಹಿದೆ,
ತಾಯಿಯಾಗಿ, ತಂದೆಯ ತೋರಿಸುವ
ಹೆಮ್ಮೆಯ ಜಗಕ್ಕೆಲ್ಲ ಸಾರಿದೆ…
ನಿನ್ನ ಕಾಣುವ ಉತ್ಕಟತೆಯ ಹತ್ತಿಕ್ಕಿ,
ರಾಹುಲನ ಸಂಭ್ರಮಕೆ, ಸಾಕ್ಷಿಯಾಗದೆ ಉಳಿದೆ…..!
ಸೋದರ ಸಂಬಂಧಿ ನೀನು,
ಮತ್ತೆ ಹದಿನಾಲ್ಕು ವರ್ಷಗಳ ಸಂಸಾರ
ಎಲ್ಲವೂ ಸುಳ್ಳೆಂಬ ಭ್ರಮೆಗೆ ನೂಕಿ
-ಒಂದು ಮಾತೂ ಹೇಳದೆ, ಒಂದು ಮಾತೂ ಕೇಳದೆ-
ನೆರಳೇ ಉಳಿಸದೆ ಹೊರಟಾಗಲೂ
ನೀ ಬದ್ಧನಾಗಲಿಲ್ಲ ಸಂಸಾರಕೆ, ಅನ್ನುವ
ಆರೋಪವೇ ನನ್ನೊಳಗಿರಲಿಲ್ಲ!
ಆದರೂ “ನಾನು” ಎಂಬ ಏನೋ…
ನಿನ್ನ ಮೇಲಿದ್ದ ಅನಂತ ಪ್ರೀತಿಯಾಚೆ,
ಬಿಟ್ಟು ಹೋದ ನೀನೇ ಬಂದು ನೋಡಲು
ಹಠಕ್ಕೆ ಬಿದ್ದಿತ್ತು!
ನೀ ತಿರುಗಿ ಬಂದ ದಿನ, ನನ್ನೆದುರು ನಿಂತ ಕ್ಷಣ
ಎಲ್ಲ ಎಲ್ಲವೂ ಕರಗಿ…
ಭಿಕ್ಕುಣಿಯ ಮಾಡಿತ್ತು!
ಅಲ್ಲೂ,
ನೀ ನಡೆದ ದಾರಿಯ ಅನುಸರಿಸುವ ಬಯಕೆ…..
ನನ್ನ ತ್ಯಾಗಕೆ ನಿನ್ನ ಮೆಚ್ಚು ನುಡಿ,
ಅಷ್ಟು ವರ್ಷಗಳ ಪರಿತಪಿಸುವಿಕೆಗೆ
ಸಾಂತ್ವನದ ನಿಟ್ಟುಸಿರಾದರೂ,
ನಿನ್ನ ಜ್ಞಾನೋದಯದ ಮಗ್ಗುಲಲಿ
ನನ್ನೊಂದು ಕನವರಿಕೆ, ಸತ್ತು ಬಿದ್ದಿದೆ……
ಗೌತಮ,
ನೀನು ಜ್ಞಾನಿ, ಅರ್ಥೈಸುವಿಯೆಂದು,
ಯುಗಯುಗಗಳೇ ಕಳೆದರೂ,
ಕಾದಿದ್ದೇನೆ,
ಕೇಳಿಯೇ ಕೇಳಿವಿಯೆಂದು,
“ನಿನಗೇನು ಬೇಕು, ಯಶೋಧರೆ
**********************************************
****************************