ಮತ್ತೆ ಹುಟ್ಟಿ ಬಾ ಬುದ್ದ

ಕವಿತೆ

ಮತ್ತೆ ಹುಟ್ಟಿ ಬಾ ಬುದ್ದ

ಅಭಿಜ್ಞಾ ಪಿ ಎಮ್ ಗೌಡ

Zen, Buddha, Relax, Tranquility

ಅಜ್ಞಾನವೆಂಬ ಕಗ್ಗತ್ತಲ ನಾಡಲಿ
ಬರೀ ಬೆತ್ತಲೆಯ
ಬೇತಾಳಗಳದ್ದೆ ಸದ್ದುಗದ್ದಲ….
ಸ್ವಾರ್ಥವೆಂಬ ಪೈಶಾಚಿಕ ಜಗದೊಳಗೆ
ಭ್ರಷ್ಟತೆಯ ತಿಮಿಂಗಲಗಳೆ
ಒದ್ದಾಡುತಿವೆ ಆಸೆಯೆಂಬ
ಐಭೊಗದ ಲಾಲಸೆಯೊಂದಿಗೆ
ಝಣಝಣ ಕಾಂಚಾಣದ
ವೇಷತೊಟ್ಟು.!ನಿನ್ನಾದರ್ಶಕೆ
ವಿರುದ್ಧ ಪಣತೊಟ್ಟು ನಿಂತಿಹ ನಾಡಿಗೆ
ಮತ್ತೆ ಹುಟ್ಟಿ ಬರುವೆಯಾ ಬುದ್ಧ.?…..

ನೀ ಹೇಳಿದೆ ಬುದ್ಧ ಗುರುವೆಂದರೆ
ಬರಿ ವ್ಯಕ್ತಿಯಲ್ಲ ಶಕ್ತಿಯೆಂದು.!
ಇಂದು ಆ ವ್ಯಕ್ತಿಗೆ
ಬೆಲೆಯು ಇಲ್ಲ ನೆಲೆಯು ಇಲ್ಲ.!
ಮುಂದೆ ಗುರಿಯೂ ಇಲ್ಲ
ಗುರುವಿನಾಶೀರ್ವಾದವೂ ಇಲ್ಲದೆ
ಸಾಗುತಿಹ ಹಿಂಡು ಅಹಂನ
ಮದವೇರಿದ ಸಲಗಗಳಂತಾಗಿದೆ.!
ಅತಿಯಾಸೆಯ ಫಲಶೃತಿ
ಧರಣಿಯೊಡಲ ಗರ್ಭಸೀಳಿ
ಅಜ್ಞಾನದ ಅಮಲಲಿ
ಸದಾ ತೂಕಡಿಸುತಿಹ ನಾಡಿಗೆ
ನೀ ಮತ್ತೆ ಹುಟ್ಟಿ ಬರುವೆಯಾ ಬುದ್ಧ.!…

ನಿನ್ನೆಯ ಆದರ್ಶಗಳು ಸಂದೇಶಗಳು
ಭಾಷಣಕಾರನ ಭಾಷಣದ
ಸ್ವಾರಸ್ಯಕತೆಗಷ್ಟೆ ಬುದ್ಧ.!
ಜನರ ಮನಸೆಳೆವ ತಂತ್ರಗಾರಿಕೆಯ
ಸೂತ್ರದಾರನ ಮಂತ್ರವಿದು ಗೊತ್ತ.!
ಧೂಳಿಪಟ ಮಾಡುತಿಹನು
ಪ್ರಕೃತಿಯೊಡಲ ಸಂಪತ್ತಾ….
ಇದ ನೋಡಲು ಬರುವೆಯಾ ಬುದ್ಧ..
ಬುದ್ಧಿಯಿದ್ದು ಅವಿವೇಕಿಯಂತೆ
ವರ್ತಿಸೊ ಜಗದೊಳಗೆ
ನೀ ಮತ್ತೆ ಹುಟ್ಟಿ ಬರುವೆಯಾ ಬುದ್ಧ.?…

ಸತ್ಯ ಅಹಿಂಸೆಗಳನ್ನೆ ಕಾಲ್ಕಸ ಮಾಡಿ
ಸುಳ್ಳಿನ ಸುಪ್ಪತ್ತಿಗೆಯಲಿ
ರಾಜರೋಷವಾಗಿ ಮೆರೆಯುತಿಹನು…
ಸದ್ಗುಣ ಸನ್ಮಾರ್ಗ ಸನ್ನಡತೆಗಳ
ಪಥವ ಬದಲಿಸಿ ಗುರುವಿಗೆ ತಿರುಮಂತ್ರ
ಹಾಕಿ ಬೀಗುತಿಹ ಮನುಜ.!
ಏಷ್ಯಾದ ಬೆಳಕಾಗಿದ್ದ ನೀನು ,ಬುದ್ಧ
ಅಗೋ.! ನೋಡು
ಈ ಕಗ್ಗತ್ತಲ ಕೋಟೆಯೆಂಬ ಜಗದೊಳಗೆ
ಉಸಿರುಗಟ್ಟಿಸೊ ವಾತಾವರಣದಲಿ
ಭ್ರಷ್ಟತೆಯ ಮಹಲುಗಳದ್ದೆ ಕಾರುಬಾರು
ತುಂಬಿಕೊಂಡಿರುವ ನಾಡಿಗೆ
ನೀ ಮತ್ತೆ ಹುಟ್ಟಿ ಬರುವೆಯಾ ಬುದ್ಧ.?…

ಅಜ್ಞಾನ ಅನೀತಿಗಳ ಆಗರದಲಿ
ಧರೆಯೊಡಲು ಧಗಧಗಿಸಿ ಉರಿದು
ವಹ್ನಿ ಜ್ವಾಲೆಯ ಕೆನ್ನಾಲಿಗೆಗೆ
ಬಲಿಯಾಗುತಿಹ ನಾಡಿಗೆ
ಮತ್ತೆ ಬರುವೆಯಾ.? ಬುದ್ಧ.!
ಇಗೋ ನೋಡು.! ಮಾನವೀಯತೆಯ
ದುಂದುಭಿಯ ಸದ್ದಡಗಿಸಿ
ಕ್ರೌರ್ಯತೆ ಪರ್ವ ವಿಜೃಂಭಿಸಿವೆ.!
ನಿನ್ನಾದರ್ಶಗಳನ್ನೆ ಮರೆತು
ತನಗರಿವಿದ್ದು ಅವನಿ ಅಳಿವಿನಂಚಿನಲಿ
ಅವನೇ ಅಂತ್ಯವಾಗುತಿಹ ಜಗಕೆ
ಮತ್ತೆ ಹುಟ್ಟಿ ಬರುವೆಯಾ.? ಬುದ್ಧ…

****************

2 thoughts on “ಮತ್ತೆ ಹುಟ್ಟಿ ಬಾ ಬುದ್ದ

Leave a Reply

Back To Top