ಅಂಕಣ ಬರಹ
ಮುಖವಾಡಗಳಿಲ್ಲದ ಬದುಕು
ನಗುನಗುತ ಚೂರಿ ಬೆನ್ನಿಗಿರಿವ
ಆಶಾಡಭೂತಿತನಕೆಜೋಕೆಯಿರಬೇಕಯ್ಯ
ಯಾವ ಮುಖದ ಹಿಂದದಾವ
ಮುಖವಾಡವಿದೆಯೊ ಕಂಡವರಾರಯ್ಯ..
ಬಹುಶಃ ಮುಖವಾಡ ಧರಿಸಿಯೇ ಬದುಕುವ ಪ್ರಾಣಿ ಮಾನವನೇ ಹೌದು. ಅದಕ್ಕಾಗಿ ಅವನನ್ನು ದೂರುವುದಾದರೂ ಹೇಗೆ? ಪರಿಸ್ಥಿತಿಗೆ ತಕ್ಕ ಮುಖವಾಡ ಹಾಕದಿದ್ದರೆ ಅಳಿವು ನಿಶ್ಚಿತ . ಅಳಿವೆಂದರಿಲ್ಲಿ ಸಾವೇ ಆಗಬೇಕೆಂದಿಲ್ಲ. ಈಗೀಗಂತೂ ಸಿಂಹದ ಮುಂದೆ ಸಿಂಹದಂತಿರು , ಬೆಕ್ಕಿನ ಮುಂದೆ ಬೆಕ್ಕಿನಂತಿರು ಒಟ್ಟಾರೆ ಕಾರ್ಯ ಸಾಧಿಸು ಎನ್ನುವುದೇ ಜೀವನದ ಮಂತ್ರವಾಗಿಬಿಟ್ಟಿರುವಾಗ ನಿಜಮುಖ ತೋರದ ಅನಿವಾರ್ಯತೆಗೆ ದೂರುವುದಾದರೂ ಯಾರನ್ನು?
ನಯವಂಚಕ , ಗುಳ್ಳೆನರಿ, ಫೇಕ್ , ಕುತಂತ್ರಿ , ಟರ್ನ್ ಕೋಟ್ , ಗಾಳಿ ಬಂದೆಡೆ ತೂರುವವನು ..ಆಹಾ ನೋಡಿ ಅದೆಷ್ಟು ಹೆಸರುಗಳಿವೆ ಈ ಮುಖವಾಡ ಧರಿಸಿದ ಮನುಜನಿಗೆ.
ಅಯ್ಯೋ , ಒಳ್ಳೆಯವರೆಂದುಕೊಂಡಿದ್ದೆ , ನಂಬಿಸಿ ಕತ್ತು ಕೊಯ್ದರು , ಮೋಸ ಮಾಡಿದರು ಎಂದು ಹಲುಬಿದ್ದು , ಹಲುಬುವುದು ಹಿಂದೆಯೀ ಇತ್ತು ಈಗಲೂ ಇದೆ .ಮುಂದೆಯೂ ಇದ್ದೇ ಇರುತ್ತದೆ. ಬ್ರೂಟಸ್ ,ಶಕುನಿಯರ ಮರೆಯುವುದುಂಟೆ.
” ಯೂ ಟೂ ಬ್ರೂಟಸ್ …..???!!! ” ಎಂದೇ ಕೊನೆಯುಸಿರೆಳೆದ ಸೀಸರನ ಧ್ವನಿಯಲ್ಲಿ ,ನೋಟದಲ್ಲಿ ಅಚ್ಚರಿಯಿತ್ತೋ, ನೋವಿತ್ತೋ ,ಮೋಸ ಹೋದುದರ ಬಗ್ಗೆ ವಿಷಾದವಿತ್ತೋ…
ಕುರುವಂಶವನ್ನೇ ನಾಶ ಮಾಡುವ ಪಣ ತೊಟ್ಟಿದ್ದ ಶಕುನಿಯ ನಿಜಮುಖ ಅಲ್ಲಿದ್ದವರಾರಿಗೂ ಕಾಣಲೇ ಇಲ್ಲವೇಕೆ?? ಶಕುನಿಯಂತಹವರ ನಿಜ ಮುಖ ಅರಿಯದೆ ಅಂತಹವರನ್ನು ಹಿತೈಷಿಗಳೆಂದು ಭಾವಿಸಿ ತಮ್ಮ ಮನೆ ,ಮನ ಕಾರ್ಯಕ್ಷೇತ್ರಗಳಲ್ಲಿ ತಾವು ಕೊಟ್ಟು ಕೈಯಾರೆ ಕೊಳ್ಳಿಯಿತ್ತು ಸರ್ವನಾಶ ಹೊಂದುವ ಜನರೂ ಇದ್ದಾರೆ.
ಆ ಶಕುನಿಗಾದರೋ ಸೇಡು ತೀರಿಸಿಕೊಳ್ಳಲೊಂದು ಬಲವಾದ ಕಾರಣವಿತ್ತು..ಆ ಕಾರಣ ಸಾಧುವೋ ಅಲ್ಲವೋ ಅದು ನಂತರದ ಮಾತು ..ತನ್ನ ಸೋದರಿ ಕುರುಡನ ಕೈಹಿಡಿಯಬೇಕಾದ ಸಂದರ್ಭದ ಹಿಂದಿನ ಅಸಹಾಯಕತೆ …ಆಕ್ರೋಷಗಳು ಇಡೀ ಕುರುವಂಶವನ್ನೇ ನಾಶ ಮಾಡುವಂತೆ ಪಣ ತೊಡಲು ಕಾರಣವಾಯಿತು..
ಇದಾವುದನ್ನೂ ನಾವು ಕಣ್ಣಾರೆ ಕಂಡಿಲ್ಲ…ಹೀಗೊಂದು ಯುದ್ಧ ನಿಜಕ್ಕೂ ನಡೆಯಿತೆ ..ಶಕುನಿ ನಿಜಕ್ಕು ಇಷ್ಟು ಗೋಮುಖ ವ್ಯಾಘ್ರವಾಗಿದ್ದನೆ …ಗೊತ್ತಿಲ್ಲ…ಇವೆಲ್ಲ ನಾವು ಕೇಳಿದ ಓದಿದ ಕಥೆಗಳು ಅಥವಾ ಘಟನೆಗಳು.. ಆದರೆ ಈಗಲೂ ಇಂತಹ ಶಕುನಿಯರು ನಮ್ಮ ನಿಮ್ಮ ನಡುವೆಯೇ ಇದ್ದಾರೆ ಎನ್ನುವುದನ್ನು ನಾವು ಯಾರೂ ಮರೆಯುವಂತೆಯೇ ಇಲ್ಲ..
ಶಕುನಿ ,ಬ್ರೂಟಸ್ ರಂತಹವರಿಂದಲೇ ದುಶ್ಮನ್ ಕಹಾಂ ಹೇ …ಎಂದರೆ ಬಗಲ್ ಮೇ ಹೇ ..ಎನ್ನುವ ಗಾದೆ ರೂಢಿಗೆ ಬಂದಿರಬಹುದು.ಶತ್ರುವಿನ ಮನಸ್ಥಿತಿಯನ್ನು ನಾವು ಸುಲಭವಾಗಿ ಊಹಿಸಬಹುದು .ಆದರೆ ಹಿತಶತೃವಿನ ಮನಸ್ಥಿತಿಯನ್ನು ಊಹಿಸಲು ಸಾಧ್ಯವೇ ಇಲ್ಲ..ಏಕೆಂದರೆ ನಾವು ಹಿತಶತೃಗಳನ್ನು ಸದಾ ಹಿತೈಷಿಗಳೆಂದೇ ಭಾವಿಸಿರುತ್ತೇವೆ.
ಹುಲಿಯೊಂದು ಹೊಟ್ಟೆಪಾಡಿಗಾಗಿ ಕ್ರೂರಿಯಾಗುವುದು ಪ್ರಕೃತಿ ನಿಯಮ.ಆದರೆ ಕುದುರೆಯೊಂದು ಕಾರಣವಿಲ್ಲದೆ ಹುಲಿಯಂತಾಡುವುದು ಅಸಹಜ ಮತ್ತು ಅಪಾಯಕರ.ಹುಲಿ ಕುದುರೆಯಾಗಬಾರದು ಕುದುರೆ ಹುಲಿಯಂತಾಡಬಾರದು ಆಗಲೇ ಪ್ರಕೃತಿಯಲ್ಲೂ ಸಮತೋಲನ ಸಾಧ್ಯ.
ಇವ ಕೆಟ್ಟವ. ದುಷ್ಟ ,ಅಪಾಯಕಾರಿ ಎಂದೇ ಹಣೆಪಟ್ಟಿ ಹೊತ್ತವರು ನಮ್ಮ ನಡುವೆ ಇದ್ದಾರೆ.ಇವರೆಲ್ಲ ಹೀಗೇಕಾದರು? ಪರಿಸ್ಥಿತಿ ಹಾಗೆ ಮಾಡಿತೋ , ಮನಸಿನ ವಿವೇಚನೆ ಮರೆಯಾಗಿ ಹೀಗಾದರೋ. ಇಂತಹವರ ಮನ ಪರಿವರ್ತನೆ ಮಾಡಲು ಹೊರಟು ಯಶಸ್ವಿಯಾದವರೂ ಇದ್ದಾರೆ ಹಾಗೆಯೇ ಎಲ್ಲ ರೀತಿ ಪ್ರಯತ್ನಿಸಿ ಕೊನೆಗೆ ನಾಯಿಬಾಲ ಡೊಂಕು ಎಂದು ನಿರಾಸೆಯಿಂದ ಕೈಚೆಲ್ಲಿ ದುಷ್ಟರಿಂದ ದೂರವಿರುವ ನಿರ್ಧಾರ ಮಾಡಿಕೊಂಡು ಮೌನವಾದವರೂ ಇದ್ದಾರೆ.
ಮನುಷ್ಯನೂ ಒಂದು ಪ್ರಾಣಿಯೇ ಹೌದಾದರೂ ಕ್ರಮೇಣ ತನ್ನ ಬೌದ್ಧಿಕತೆ , ನೈತಿಕತೆ , ಶಿಕ್ಷಣ ಇನ್ನೂ ಮುಂತಾದ ಕಾರಣಗಳಿಂದಾಗಿ ಕ್ರಮೇಣ ಮೃಗತ್ವವನ್ನು ತೊರೆದು ಸಹಜೀವಿಗಳ ಬಗ್ಗೆ ಕರುಣೆ, ಮಮತೆ, ಸಹಾನುಭೂತಿ ,ಹೊಂದಾಣಿಕೆ ,ಸ್ಪಂದಿಸುವ ಮನೋಭಾವ ಬೆಳೆಸಿಕೊಂಡು ತಾನೇ ಕಟ್ಟಿಕೊಂಡ ಸಮಾಜದಲ್ಲಿ ತಾನೇ ರೂಪಿಸಿಕೊಂಡಿರುವ ಚೌಕಟ್ಟುಗಳ ನಡುವೆ ಬದುಕುತ್ತಿದ್ದಾನೆ. ಹಾಗೆಯೇ ಎಲ್ಲ ಮನುಷ್ಯರಲ್ಲೂ ಯಾವುದೋ ಒಂದು ಮೂಲೆಯಲ್ಲಿ ಮೃಗತ್ವ ಸೆರೆಯಾಗಿ ಬಿದ್ದಿರುವುದೂ ನಿಜ. ಇದೇ ಮನುಷ್ಯತ್ವದ ನಿಜವಾದ ಕುರುಹು. ಮೃಗತ್ವವನ್ನು ಜಯಿಸಿ ಮನುಷ್ಯತ್ವವನ್ನು ವಿಜೃಂಭಿಸಿ ಬದುಕುವುದು.
ಹಾಗೆಂದ ಮಾತ್ರಕ್ಕೆ ಮನುಷ್ಯರೆಲ್ಲ ಶಕುನಿಯಂತೆ , ಬ್ರೂಟಸ್ ನಂತೆ ಮುಖವಾಡತೊಟ್ಟವರೆನ್ನಲು ಸಾಧ್ಯವಾಗದು. ಕಪಟ , ಸ್ವಾರ್ಥ ,ಕ್ರೂರತ್ವಗಳ ಮರೆಮಾಚಿ ನಾಟಕದ ಬದುಕು ಬದುಕುತ್ತಿದ್ದಾರೆಂದು ನಿರ್ಧರಿಸಲಾಗದು.
ಮೃಗತ್ವವು ಮನುಷ್ಯನ ಮೂಲಗುಣ ..ನಾನದನ್ನು ಮರೆಮಾಚದೆ ಬದುಕುತ್ತೇನೆ ಎನ್ನುವುದು ಹುಚ್ಚುತನವಷ್ಟೇ ಅಲ್ಲ ಮನುಷ್ಯತ್ವಕ್ಕೇ ಕಳಂಕ. ಇಲ್ಲಿ ಮೃಗತ್ವವನ್ನು ಮರೆಮಾಚುವುದು ಮುಖ್ಯವಾಗದು .ಅದರ ಮೇಲೆ ವಿಜಯ ಸಾಧಿಸುವುದು ಮುಖ್ಯವಾಗುತ್ತದೆ .ಹಾಗಾಗಿ ಮನುಷ್ಯ ಎಂದಿಗೂ ಮನುಷ್ಯನೇ ಆಗಿರಬೇಕು.ಮನುಷ್ಯರಾಗಿಯೂ ಸಹವರ್ತಿಗಳ ಏಳಿಗೆ , ಕೀರ್ತಿ, ಸುಖ ,ಸಂತೋಷ ಸಹಿಸಲಾಗದೆ ಹಿತೈಷಿಯಂತೆ ಸೋಗು ಹಾಕಿ ಕೆಡುಕು ಬಯಸುವ ಕೆಡುಕನೆಸಗುವ ಮನುಷ್ಯರು ಮೃಗಕ್ಕಿಂತಲೂ ಕಡೆಯಾಗುತ್ತಾರೆ .ಇಂತಹವರು ಮಾತ್ರಾ ಮುಖವಾಡ ಧರಿಸಿದ ಹಿತಶತೃಗಳಾಗುತ್ತಾರೆ.
ಇಂದು ಯಾರು ಯಾರಿಗೆ ಮಿತ್ರ ಯಾರು ಯಾರಿಗೆ ಶತೃ ಎಂದು ಅರ್ಥಮಾಡಿಕೊಳ್ಳುವುದೇ ಕಷ್ಟವಾಗಿರುವ ಸಂದರ್ಭದಲ್ಲಿ ಬಾಳುತ್ತಿರುವಾಗ ನಂಬಿದವರಿಗೇ ಮೋಸ , ನಂಬಿದವರಿಗೇ ಕೆಡುಕುಗಳಾಗುತ್ತಿರುವ ಕಾಲಮಾನದಲ್ಲಿ ಬಾಳುತ್ತಿದ್ದೇವೆ.
ನಂಬಿಯೂ ನಂಬದಂತಿರಬೇಕು ಎನ್ನುವದು ಇದೇ ಕಾರಣಕ್ಕೆ. ನರಿಯನ್ನು ಮೋಸಗಾರ ಪ್ರಾಣಿ , ಕುಟಿಲ ಪ್ರಾಣಿ ಎನ್ನುವುದನ್ನು ಕೇಳಿದ್ದೇವೆ .ನಿಜಕ್ಕೂ ಹೌದೆ? ಕಂಡವರಾರು? ಆದರೂ ನರಿಯ ಹೆಸರ ಬಳಸಿ ಇವನು ಗುಳ್ಳೆನರಿಯಂತಹವನು ಎಂದು ಆರೋಪಿಸುತ್ತೇವೆ. ಪಾಪದ ನರಿ ಮನುಷ್ಯನ ಮುಖವಾಡಗಳಿಂದ ತಾನು ಅಪವಾದ ಹೊತ್ತುಕೊಂಡಿದೆ.
ಮುಖವಾಡಗಳಿಲ್ಲದ ಬದುಕು ಸಾಧ್ಯವೇ ಇಲ್ಲ ಎನ್ನಲಾಗದು. ಒಳಿತಾಗುವುದಾದರೆ ಮುಖವಾಡವಿರಲಿ..ತನ್ನ ನೋವ ನುಂಗಿ ಇತರರಿಗೆ ನೆಮ್ಮದಿ ಕೊಡುವ ಮುಖವಾಡವಿದ್ದರೆ ಅಂತಹ ನೂರಾರು ಸಾವಿರಾರು ಮುಖವಾಡಗಳ ಹಾಕೋಣ.
ಇನ್ನೂ ಮುಂದೆ ಹೋಗಬೇಕೆಂದರೆ ಎಲ್ಲ ಮುಖವಾಡಗಳ ಕಳಚಿ ಸಾದಾಸೀದಾ ಮನುಷ್ಯರಾಗವುದೇ ಸರಿ.ಬೆಳಕು ಎಂದಿಗೂ ಕತ್ತಲೆಯನ್ನು ತನ್ನ ಹೊದಿಕೆಯಾಗಿ , ಮುಖವಾಡವಾಗಿ ಬಳಸಿಕೊಳ್ಳದು.ಬೆಳಕೆಂದಿದ್ದರೂ ಬೆಳಕೇ .ಅದು ಕಣ್ಣು ಕೋರೈಸಿದರೂ ಸರಿ , ಮಂದ ಪ್ರಕಾಶ ಬೀರಿದರೂ ಸರಿ.
ದೀಪ ಮತ್ತೊಂದು ದೀಪವನ್ನು ಹಚ್ಚುತ್ತದೆಯೆ ಹೊರತು ಅಸೂಯೆಯಿಂದ ತಾನೇ ಬೆಳಗಬೇಕೆಂಬ ಸ್ವಾರ್ಥದಿಂದ ಅಥವಾ ಅಹಂನಿಂದ ಇನ್ನೊಂದು ದೀಪವನ್ನು ನಂದಿಸುವುದಿಲ್ಲ. ನಾವುಗಳೂ ದೀಪಗಳಾಗಬೇಕಿದೆ. ಹಿತಶತೃಗಳ ಮುಖವಾಡ ಕಿತ್ತೆಸೆದು ನಿಜ ಮಾನವರಾಗಿ ಬದುಕಬೇಕಿದೆ.
****
ದೇವಯಾನಿ
ಕಾಲೇಜು ದಿನಗಳಿಂದ ದೇವಯಾನಿ ಹೆಸರಿನಲ್ಲಿ ಕಥೆ ,ಕವನ , ಅನುವಾದಿತ ಕಥೆ , ಪ್ರಬಂಧ ಬರೆಯುತ್ತಿದ್ದು ತುಷಾರ, ಮಯೂರ ,ಕಸ್ತೂರಿ , ಪ್ರಜಾವಾಣಿ, ವಿಕ್ರಮ , ಉತ್ಥಾನ, ಉದಯವಾಣಿ, ತರಂಗ ,ವಿಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವೃತ್ತಿಯಿಂದ ಗಣಿತ ವಿಜ್ಞಾನ ಪ್ರೌಢಶಾಲಾ ಶಿಕ್ಷಕಿ.ಇಪ್ಪತ್ತನಾಲ್ಕು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಹಲವಾರು ಸಂಪನ್ಮೂಲ ಸಾಹಿತ್ಯವನ್ನು ರಚಿಸಿದ್ದು ಹಲವಾರು ರಾಜ್ಯಮಟ್ಟದ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಶಾಲಾ ಮಕ್ಕಳಿಗಾಗಿ ” ಧರೆಯನುಳಿಸುವ ಬನ್ನಿರಿ, ಮೂರು ವೈಜ್ಞಾನಿಕ ನಾಟಕಗಳು” , “ತುಟಿ ಬೇಲಿ ದಾಟಿದ ನಗು” ಕವನ ಸಂಕಲನ , “ತುಂಡು ಭೂಮಿ ತುಣುಕು ಆಕಾಶ” ಕಥಾ ಸಂಕಲನ ಪ್ರಕಟಿಸಿದ್ದು ಅನುವಾದಿತ ಕಥಾ ಸಂಕಲನ ಅಚ್ಚಿನಲ್ಲಿರುತ್ತದೆ
ನೀವು ನಮ್ಮಬೆಂಗಳೂರು ಉತ್ತರ ವಲಯ1 ರ ಅದರಲ್ಲೂ ನಮ್ಮವರೆಂಬುದೇ ನಮಗೆ ಹೆಮ್ಮೆ
ಶುಭವಾಗಲಿ
ಧನ್ಯವಾದಗಳು ಸರ್ ,ನಿಮ್ಮ ಹಾರೈಕೆಗೆ
ತುಂಬಾ ಚನ್ನಾಗಿದೆ ಮೇಡಂ ಶುಭವಾಗಲಿ
ಧನ್ಯವಾದಗಳು
ಇನ್ನು ಹೆಚ್ಚು ಕಥೆ, ಕವನಗಳು ನಿಮ್ಮಿಂದ ಮೂಡಿಬರಲಿ ಮೇಡಂ
ಧನ್ಯವಾದಗಳು ಮೇಡಂ
ನಾಗರೀಕತೆಯ ಜೊತೆಗೆ ಮುಖವಾಡ ಹುಟ್ಟಿತು.ಅದು ಬೆಳೆದಂತೆ ಬೆಳೆಯಿತು.ಅದು ಸಂಕೀರ್ಣವಾದಂತೆ ಮುಖವಾಡಗಳಲ್ಲಿ ಬಣ್ಣಗಳು ಹೆಚ್ಚಾದವು….
ನಿಜ ಸರ್ ಬಣ್ಣಗಳುಹೆಚ್ಚಾದವು
ವಾಸ್ತವತೆಯನ್ನು ಸೊಗಸಾಗಿ ಹಿಡಿದಿಟ್ಟಿರುವಿರಿ ಮೇಡಂ.
ಬಹಳ ಅರ್ಥ ಪೂರ್ಣವಾಗಿ ಸೊಗಸಾಗಿದೆ.
ಅಭಿನಂದನೆಗಳು ಮೇಡಂ.
ಧನ್ಯವಾದಗಳು ಮೇಡಂ
ಅವಶ್ಯಕತೆಗೋ ಅನಿವಾರ್ಯಕ್ಕೋ ಮುಖವಾಡ ಧರಿಸಲೇ ಬೇಕೆಂದಾದರೆ ಅದರಿಂದ ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳುವ ಸಾಮಾನ್ಯ ಜ್ಞಾನ ಎಲ್ಲರಲ್ಲೂ ಇರಲೇಬೇಕೆಂಬ ವಾಸ್ತವಿಕತೆಗೆ ಕನ್ನಡಿ ಹಿಡಿದಂತಿದೆ !
ಅಭಿನಂದನೆಗಳು ಮೇಡಂ
ಧನ್ಯವಾದಗಳು ಮೇಡಂ