ಕವಿತೆ
ಕನಸಿಗೂ ಇಲ್ಲ ಅಪ್ಪನ ನೆನಪು
ನಿಚಿಕಾ(ಕಾಂತರಾಜು
1
ತನಗಿದ್ದ ಇಷ್ಟಗಲ ನೆಲದಲ್ಲಿ
ದಿನವಿಡೀ ದುಡಿದರೂ
ಬೆವರು ಬಸಿದ ಅಪ್ಪನ ಮೈಗೆ ಅಂಟಿರುವ
ಬನಿಯನ್ನಿನಲ್ಲಿ ಭಾರತದ ಹಲವು ಭೂಪಟಗಳು…!
ಪಠ್ಯಪುಸ್ತಕ ಮತ್ತು ಶಾಲೆಯ ಮಾಸ್ತರು
ರೈತ ದೇಶದ ಬೆನ್ನೆಲುಬು ಎಂದು ಚಪ್ಪರಿಸಿದ್ದಷ್ಟೇ…!
ಅಂತೂ ಸಾರ್ಥಕವಾಯ್ತು ಅಪ್ಪನ ಜನ್ಮ…!
2
ಅವನು ನನಗಾಗಿ ಬಿಟ್ಟು ಹೋದ
ಅಂಗೈ ಅಗಲದ ಬೀಡು ನೆಲವನ್ನು
ಅವನ ವಾರಸುದಾರನಾಗಿ ನಾನು
ಅರಿಯದ ಅರಿವಿನಿಂದ ಬೀಳುತ್ತೇಳುತ್ತಾ
ಹದಮಾಡಿ ನಡುಬಿದ್ದು ಕಾದು ಕುಳಿತಿರುವೆ
ದಿಟ್ಟಿಸುತ್ತ ಖಾಲಿಯಾದ ಆಗಸದಂಗಳವನ್ನು…!
3
ಅಪ್ಪನಿಗೂ ಅಪ್ಪನಪ್ಪನಿಗೂ ಆಸರೆಯಾಗಿದ್ದ
ಮರದ ನೇಗಿಲು ಒರಲೆ ಹತ್ತಿದೆ
ಹಲುಬೆಯ ಹಲ್ಲು ಉದುರಿವೆ
ಕುಂಟೆಯ ಮೇಳಿ ಮುರಿದಿದೆ
ಕೂರಿಗೆ ಕಣ್ಮರೆಯಾಗಿಹೋಗಿದೆ
ನೊಗವು ಉರುವಲಿಗೆ ಸಂದಿದೆ
ಇದ್ದೆರಡು ಹಸುಗಳ ಹಸಿವು ನೀಗಲು
ಕಟುಕರವನ ಸಂಗಡ ಕಳುಹಿಸಲಾಗಿದೆ…!
4
ಬೆವರು ಬಸಿಯದ ಪೇಟೆವಾಸಿಯ
ತುಂಬಿದ ಜೇಬಿಗೀಗ ನೂರಾರು ಹಸಿದ ಕಣ್ಣು
ಆ ಕಣ್ಣಿಗೆ ನನ್ನ ನೆಲದ ಮಣ್ಣು
ಬಹಳ ರುಚಿಕರವಾದ ಹಣ್ಣು…!
ನಾನೀಗ ಕೆಟ್ಟು ತೊರೆಯಬೇಕಿದೆ
ನನ್ನ ನೆಲ-ನೆಲೆಗಳನ್ನು, ಸೇರಲು ಪಟ್ಟಣವನ್ನು…!
5
ಸಂಗಡವೇ ಜನಿಸಿದ ಹಸಿವೆಯ ಹಸುಬೆಗೆ
ನಾಚಿಕೆ ಪದದ ಪರಿಚಯವಿಲ್ಲ
ಗೌರವದ ಗೊಡವೆಯೂ ಇಲ್ಲ
ಮರ್ಯಾದೆಯ ಎಲ್ಲೆಯಂತೂ ಇಲ್ಲವೇ ಇಲ್ಲ
ನಗರ ನಾಗರಿಕರ ಬದುಕು ನಿರುಮ್ಮಳ…!
5.
ಇತ್ತೀಚೆಗೆ ಕನಸಿಗೂ ಬರುತ್ತಿಲ್ಲ
ಅಪ್ಪನ ನೆನಪು…!
***************************************
ಉತ್ತಮ ಸಂದೇಶ ಸಾರುವ ಕವಿತೆ….
ಅಪ್ಪ ನ ಕನಸು ಮಗ ಈಡೇರಿಸಲಿ
ರೈತಾಪಿ ಕೆಲಸದ ಬವಣೆ, ನಗರೀಕರಣ ಹುಟ್ಟಿಸುವ ಅನಿವಾರ್ಯತೆ ಮತ್ತು ಪ್ರಲೋಭನೆಗಳ ನಡುವೆ ಹೊಯ್ದಾಡುವ ಯುವ ರೈತರ ಮನಸ್ಥಿತಿಯನ್ನು ಚೆನ್ನಾಗಿ ಬಿಂಬಿಸಿದೆ ಕವಿತೆ. ಅಭಿನಂದನೆಗಳು
ತಮ್ಮ ಸಕಾರಾತ್ಮಕ ಪ್ರೊತ್ಸಾಹಕ್ಕೆ ಅನಂತ ಧನ್ಯವಾದಗಳು